ನವದೆಹಲಿ:ಆ.18: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದೆಹಲಿ ಮಹಿಳಾ ಆಯೋಗದ ಕಚೇರಿ ಮೇಲೆ ದಾಳಿ ನಡೆಸಿದೆ. ಆಯೋಗದ ನೇಮಕಾತಿಗಳಲ್ಲಿ ಸ್ವಜನಪಕ್ಷಪಾತ ನಡೆಯುತ್ತಿದೆ ಎಂಬ ಆರೋಪ ಹಿನ್ನಲೆಯಲ್ಲಿ ಈದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ದೆಹಲಿ ಮಹಿಳಾ ಆಯೋಗದ ಮಾಜಿ ಮುಖ್ಯಸ್ಥೆ ಬರ್ಖಾ ಶುಕ್ಲಾ ಸಿಂಗ್ ಅವರು ಆಯೋಗದ ನೇಮಕಾತಿಗಳಲ್ಲಿ ಸ್ವಜನಪಕ್ಷಪಾತ ನಡೆಯುತ್ತಿದೆ ಎಂದು ಅಪಾದಿಸಿ ದೂರು ನೀಡಿದ್ದರು. ಮಹಿಳಾ ಆಯೋಗದ ಹಾಲಿ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ನೇಮಕಾತಿಗಳಲ್ಲಿ ಪಕ್ಷಪಾತ, ಅವಕಾಶವಾದಿ ನಿಲುವು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬರ್ಖಾ ಶುಕ್ಲಾ ಸಿಂಗ್ ಆಮ್ ಆದ್ಮಿ ಪಕ್ಷದ ಬೆಂಬಲಿಗರಿಗೆ ಉತ್ತಮ ಹುದ್ದೆಗಳನ್ನು ನೀಡಲಾಗಿದೆ. ಈ ಮೂಲಕ ನೇಮಕಾತಿಯ ಮೂಲ ನಿಯಮಗಳನ್ನು ಬದಿಗೊತ್ತಲಾಗಿದೆ.
85 ಮಂದಿಗೆ ಯಾವುದೇ ಅರ್ಹತೆಗಳನ್ನೂ ಪರಿಗಣಿಸದೆ ನೌಕರಿ ನೀಡಲಾಗಿದೆ. ಲಕ್ಷಾಂತರ ರೂಪಾಯಿಗಳನ್ನು ಅವರು ದೆಹಲಿ ಸರ್ಕಾರದ ಬೊಕ್ಕಸದಿಂದ ಪಡೆಯುತ್ತಿದ್ದಾರೆ ಎಂದು ಗಂಭೀರವಾಗಿ ದೂರಿದ್ದಾರೆ.
ಈ ಆರೋಪಗಳನ್ನು ತಳ್ಳಿಹಾಕಿರುವ ಸ್ವಾತಿ ಮಲಿವಾಲ್, ಆಯೋಗಕ್ಕೆ ಬಂದಿರುವ ದೊಡ್ಡ ಪ್ರಮಾಣದ ದೂರುಗಳನ್ನು ಇತ್ಯರ್ಥಗೊಳಿಸುವ ಸಲುವಾಗಿ ಹಾಲಿ ಸಿಬ್ಬಂದಿಯ ಅಗತ್ಯ ಇದೆ. ಬರ್ಖಾ ಶುಕ್ಲಾ ಸಿಂಗ್ ಅವರು ತಮ್ಮ ಅಧಿಕಾರಾವಧಿಯ 9 ವರ್ಷಗಳಲ್ಲಿ 50 ಮಂದಿ ಅಧಿಕಾರಿಗಳ ಸಿಬ್ಬಂದಿ ತಂಡವನ್ನು ಇಟ್ಟು ಕೊಂಡು ಒಂದೇ ಒಂದು ಪ್ರಕರಣವನ್ನು ನಿಭಾಯಿಸಿದ್ದಾರೆ. ಕೇವಲ 6 ಸ್ಥಳಗಳಿಗೆ ಭೇಟಿ ಕೊಟ್ಟಿದ್ದು, ಸರ್ಕಾರಕ್ಕೆ ಒಂದೇ ಒಂದು ವರದಿ ಕೂಡಾ ಸಲ್ಲಿಸಿಲ್ಲ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಎಸಿಬಿ ಈಗ ದೆಹಲಿ ಮಹಿಳಾ ಆಯೋಗದ ಕಚೇರಿ ಮೇಲೆ ದಾಳಿ ನಡೆಸಿದ್ದು, ತನಿಖೆಯ ಬಳಿಕ ಸತ್ಯಾಸತ್ಯತೆ ಬಹಿರಂಗಗೊಳ್ಳಬೇಕಿದೆ.
Comments are closed.