ಬೆಂಗಳೂರು, ಆ. ೧೮- ಭೂಮಿ ಇಲ್ಲದ ಬಡವರಿಗೆ 5 ಎಕರೆ ಭೂಮಿ ವಸತಿ ರಹಿತರಿಗೆ ವಸತಿ ಮತ್ತು ನಿವೇಶನ ವಿತರಿಸಲು ಆಗ್ರಹಿಸಿ ಆಗಸ್ಟ್ 20ರ ದೇವರಾಜ ಅರಸು ಅವರ ಮಾನೋತ್ಸವದಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನಗರದ ರೈಲ್ವೆ ನಿಲ್ದಾಣದಿಂದ ದೇವರಾಜ ಅರಸು ಪ್ರತಿಮೆವರೆಗೆ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಸಮಿತಿಯ ಮುಖಂಡ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ತಿಳಿಸಿದರು.
ಅಂದು ಹೋರಾಟ ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಭೂಮಿ ರಹಿತರಿಗೆ ಭೂಮಿ ವಿತರಣೆ ಹಾಗೂ ಸ್ವಂತ ಮನೆ, ನಿವೇಶನ ಇಲ್ಲದವರಿಗೆ ಮನೆ ನಿವೇಶನ ವಿತರಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಯೋಜನೆಯನ್ನು ಕ್ರೋಢೀಕರಿಸಿ ಅವಶ್ಯಕವಿದ್ದರೆ ಕರ್ನಾಟಕ ಸಮರ್ಗ ನಿವೇಶನ ಸಬಲೀಕರಣ ಯೋಜನೆಯಂದು ಹೊಸ ಯೋಜನೆ ರೂಪಿಸಬೇಕು. ಮನೆ ಹಾಗೂ ವಸತಿ ಪಡೆಯುವುದನ್ನು ಮೂಲಭೂತ ಹಕ್ಕಾಗಿ ಪರಿಗಣಿಸಬೇಕು. ಮುಂದಿನ ಎರಡು ವರ್ಷಗಳೊಳಗೆ ಹಕ್ಕನ್ನು ಅನುಷ್ಠಾನಗೊಳಿಸುವ ಭರವಸೆಯನ್ನು ಸರ್ಕಾರ ನೀಡಬೇಕು. ಸರ್ಕಾರಿ ಪ್ರದೇಶಗಳಾದ ಗೈರಾಣ, ಗೋಮಾಳ, ಕುಮ್ಕಿ, ನಾಕಾಣೆ, ನಾಲಾಬರ್ಮ ಸೇರಿದಂತೆ ಇತರೆ ಭೂಮಿಗಳಲ್ಲಿ ಬಡವರಿಗೆ ಸಾಗುವಳಿ ಮಾಡಲು ತಲಾ 5 ಎಕರೆ ಜಮೀನು ವಿತರಿಸುವುದರೊಂದಿಗೆ 2 ವರ್ಷಗಳೊಳಗೆ ಪಟ್ಟಾ ವಿತರಿಸಬೇಕು.
ಭೂ ಸುಧಾರಣೆ ಕಾಯ್ದೆಯಡಿ ಫಲಾನುಭವಿಗಳಿಗೆ ಮಂಜೂರಾಗಿರುವ ಭೂಮಿಯನ್ನು ಬಿಟ್ಟು ಕೊಡದೇ ಭೂ ಮಾಲೀಕರೇ ಅನುಭವಿಸುತ್ತಿರುವುದನ್ನು ತಡೆದು ಮರು ಪರಿಶೀಲನೆ ನಡೆಸಿ ಫಲಾನುಭವಿಗಳಿಗೆ ಭೂಮಿ ವಿತರಿಸಬೇಕು. ಸ್ವಯಂ ಉಳುಮೆ ಮಾಡ ಬಯಸುವ ಕೃಷಿ ಕೂಲಿ ಕಾರ್ಮಿಕರ ಕುಟುಂಬಕ್ಕೆ ನೀಡಿರುವ ಜಮೀನನ್ನು ಪರಬಾರೆಗೆ ಅವಕಾಶ ನೀಡಬಾರದು. ಪ್ರತಿ ಕಂದಾಯ ಗ್ರಾಮಕ್ಕೆ 4 ಎಕ್ಟೇರ್ ಮೀರದಂತೆ ಅರಣ್ಯ ಭೂಮಿ ಬಿಡುಗಡೆ ಮಾಡಬೇಕು. ಅರಣ್ಯ ಕಾಯ್ದೆಯೊಳಗಿನ ಅಂಶವನ್ನು ಅಗತ್ಯವಿರುವೆಡೆ ಬಳಸಿಕೊಳ್ಳಬೇಕು.
ರಾಜ್ಯಾದ್ಯಂತ ಬಲಾಢ್ಯರು ಕಬಳಿಸಿರುವ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದು ಅದಕ್ಕೆ ನೆರವಾದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಹಿಂಪಡೆದ ಭೂಮಿಯನ್ನು ಸಾರ್ವಜನಿಕರ ಬಳಕೆಗೆ ಹಾಗೂ ಭೂ ರಹಿತ ಸಾಗುವಳಿಗೆ ಬಳಸಬೇಕು. ಭೂ ಸುಧಾರಣಾ ಅಧಿನಿಯಮ ಕಲಂ 63ರನ್ನು ತಿದ್ದುಪಡಿ ಮಾಡುವ ಮೂಲಕ ಗರಿಷ್ಠ ಭೂ ಮಿತಿಯನ್ನು ಶೇ. 50ಕ್ಕೆ ಕಡಿತ ಮಾಡಬೇಕು. ಕಲಂ 64, 79ಎ, 97ಬಿ ಹಾಗೂ 80ನ್ನು ಪ್ಲಾಂಟೇಷನ್ ಮತ್ತು ಮಠ ಮಾನ್ಯಗಳ ಭೂಮಿಗೆ ಅನ್ವಯಿಸಬೇಕು.
ಗ್ರಾಮೀಣ ಕೈಗಾರಿಕಾ ಉದ್ಯೋಗ ಹಾಗೂ ಮೂಲ ಸೌಕರ್ಯವನ್ನು ಆಧ್ಯತೆ ಮೇಲೆ ಒದಗಿಸಬೇಕು. ಪರಿಸರಕ್ಕೆ ಧಕ್ಕೆ ತರುವ ಬೃಹತ್ ಯೋಜನೆಗಳನ್ನು ಕೈಬಿಡಬೇಕು ಸೇರಿದಂತೆ ಒಟ್ಟು 15 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಅಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆಯಲ್ಲಿ 15ಕ್ಕೂ ಹೆಚ್ಚು ಸಂಘಟನೆಗಳು ಪಾಲ್ಗೊಳ್ಳಲಿವೆ. ಈ ಎಲ್ಲಾ ಬೇಡಿಕೆಗಳ ಕುರಿತು ಸರ್ಕಾರ ಅಂದು ಪ್ರತಿಭಟನಾಕಾರರಿಗೆ ಭರವಸೆ ನೀಡದಿದ್ದರೆ ಪ್ರತಿಭಟನೆಯನ್ನು ಮುಂದುವರೆಸಲಾಗುವುದು ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಪೂಜಾರ್, ಡಾ. ವಾಸು, ಶ್ರೀಧರ್ ಸೇರಿದಂತೆ ಇತರೆ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
Comments are closed.