ಕರ್ನಾಟಕ

ಬಿಜೆಪಿಯಿಂದ ದೇಶದ್ರೋಹದ ಪಾಠ ಅನಗತ್ಯ; ದಿನೇಶ್ ಗುಂಡೂರಾವ್ ತಿರುಗೇಟು

Pinterest LinkedIn Tumblr

Dinesh-Gunduraoಬೆಂಗಳೂರು, ಆ.೨೨: ರಾಷ್ಟ್ರೀಯತೆಯನ್ನು ಬಿಜೆಪಿ ರಾಜಕೀಯ ಆಸ್ತಿಯಾಗಿ ಮಾಡಲು ಪ್ರಯತ್ನಿಸುತ್ತಿದೆ. ಬಿಜೆಪಿಯವರನ್ನು ಬಿಟ್ಟು ಉಳಿದೆಲ್ಲರೂ ದೇಶದ್ರೋಹಿಗಳಂತೆ ಬಿಂಬಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದ ಸಂಘಪರಿವಾರ ಮತ್ತ ಬಿಜೆಪಿಯವರು ದೇಶಪ್ರೇಮದ ಬಗ್ಗೆ ಪಾಠಹೇಳುವ ಅಗತ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ಅಮ್ನೆಸ್ಟಿ ಸಂಘಟನೆ ದ್ರೇಶದ್ರೋಹಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರೆ ಕೇಂದ್ರ ಸರ್ಕಾರ ಅದರ ವಿರುದ್ಧ ಕ್ರಮಕೈಗೊಳ್ಳಲಿ, ಇದಕ್ಕೆ ರಾಜ್ಯ ಸರ್ಕಾರ ವಿರೋಧಿಸುವುದಿಲ್ಲ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ್ದಾರೆ ಎಂಬ ಆರೋಪದಲ್ಲಿ ಎಫ್‌ಐಆರ್ ದಾಖಲಾಗಿದೆ. ಆದರೆ ಇದುವರೆಗೆ ಅದಕ್ಕೆ ಪೂರಕವಾದ ಯಾವುದೇ ಸಾಕ್ಷ್ಯಗಳನ್ನು ದೂರುದಾರರು ನೀಡಿಲ್ಲ. ಬಿಜೆಪಿ ಮತ್ತು ಎಬಿವಿಪಿ ಬೀದಿಯಲ್ಲಿ ಪ್ರತಿಭಟನೆ ನಡೆಸುವುದನ್ನು ಬಿಟ್ಟು ಈ ಸಂಬಂಧದ ಸಾಕ್ಷ್ಯಗಳನ್ನು ತನಿಖಾಧಿಕಾರಿಗಳಿಗೆ ಸಲ್ಲಿಸಲಿ ಎಂದು ಸವಾಲು ಹಾಕಿದರು.
ರಾಷ್ಟೀಯತೆ ಮತ್ತು ದೇಶಪ್ರೇಮ ಎಂಬುದು ಅತ್ಯಂತ ಸೂಕ್ಷ್ಮ ವಿಷಯ. ಅಷ್ಟು ಸುಲಭವಾಗಿ ಯಾರನ್ನೂ ದೇಶದ್ರೋಹಿ ಎಂದು ಹೇಳಲು ಸಾಧ್ಯವಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ ದಿನವನ್ನು ಕರಾಳ ದಿನವಾಗಿ ಆಚರಿಸುವ ಹಿಂದೂ ಮಹಾ ಸಭಾ, ದೇಶದ ರಾಷ್ಟ್ರೀಯ ಧ್ವಜವನ್ನು ರಾಷ್ಟ್ರಧ್ವಜ ಎಂದು ಒಪ್ಪಿಕೊಳ್ಳದವರು, ೨೦೦೨ರವರೆಗೆ ತಮ್ಮ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸದ ಆರ್‌ಎಸ್‌ಎಸ್‌ನವರನ್ನು ಬಿಜೆಪಿಯವರು ಏನೆಂದು ಕರೆಯುತ್ತಾg ? ಇವರು ಮಾಡುವ ಕೆಲಸ ದೇಶಪ್ರೇಮವೇ ?ಈ ಪ್ರಶ್ನೆಗಳಿಗೆ ಬಿಜೆಪಿಯವರ ಉತ್ತರಿಸಲಿ ಎಂದು ದಿನೇಶ್ ಹೇಳಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಮ್ನೆಸ್ಟಿ ಸಂಸ್ಥೆಗೆ ಕ್ಲೀನ್‌ಚಿಟ್ ನೀಡಿಲ್ಲ. ಅಮ್ನೆಸ್ಟಿ ದೇಶದ್ರೋಹ ಚಟುವಟಿಕೆ ನಡೆಸಿದ ಬಗ್ಗೆ ಇದುವರೆಗೆ ಯಾವುದೇ ಪುರಾವೆ ದೊರೆತಿಲ್ಲ ಎಂದು ಹೇಳಿದ್ದಾರೆ. ಇದನ್ನು ಪೊಲೀಸ್ ಆಯುಕ್ತರು ಕೂಡ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿಯಿಂದ ಫ್ಯಾಸಿಷ್ಟ್ ಸಂಸ್ಕೃತಿ: ನಾವು ಹೇಳಿದ ರೀತಿಯಲ್ಲೇ ಎಲ್ಲರೂ ನಡೆಯಬೇಕು ಎಂಬ ಮನೋಸ್ಥಿತಿಯ ಫ್ಯಾಸಿಸ್ಟ್ ಸಂಸ್ಕೃತಿಯನ್ನು ತರಲು ಬಿಜೆಪಿಪ್ರಯತ್ನಿಸುತ್ತಿದೆ. ಬಹುಮುಖಿ ಸಂಸ್ಕೃತಿಯನ್ನು ವಿರೋಧಿಸುವ ಬಿಜೆಪಿಯವರ ರಾಷ್ಟ್ರೀಯತೆ ದ್ವಂದ್ವತೆಯಿಂದ ಕೂಡಿದೆ. ವಿದ್ಯಾರ್ಥಿಗಳನ್ನು ರಾಜಕೀಯವಾಗಿ ಬಳಸಿಕೊಳ್ಳಲು ಎಬಿವಿಪಿ ಪ್ರಯತ್ನಿಸುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದರು.
ರಮ್ಯ ಅವರು ಪಾಕಿಸ್ತಾನದ ಸಾಮಾನ್ಯ ಜನರ ಬಗ್ಗೆ ಮಾತನಾಡಿದ್ದಾರೆ. ಇದು ದೇಶದ್ರೋಹ ಅಲ್ಲ ಎಂದು ರಮ್ಯಾ ಹೇಳಿಕೆಯನ್ನು ಸಮರ್ಥಿಸಿಕೊಂಡರು.

Comments are closed.