ಕುಂದಾಪುರ: ಎಗ್ರಿಗೋಲ್ಡ್ ಸುಮಾರು 100 ಕೋಟಿಗೂ ಹೆಚ್ಚು ಹಣ ಕುಂದಾಪುರ ತಾಲ್ಲೂಕು ವ್ಯಾಪ್ತಿಯಿಂದಲೇ ಠೇವಣಿದಾರರಿಗೆ ಬರಬೇಕಿದ್ದು, ಈ ಠೇವಣಿ ಸಂಗ್ರಹಿಸಿದ ಏಜೆಂಟರು ಠೇವಣಿದಾರರಿಗೆ ಉತ್ತರ ನೀಡಲಾಗದೇ ಇತ್ತ ಸ್ವಂತ ಉದ್ಯೋಗವೂ ಇಲ್ಲದೇ ಕಂಗಾಲಾಗಿರುವ ಹಿನ್ನೆಲೆಯಲ್ಲಿ ಹಣ ಮರಳಿ ಪಡೆಯಲು ಹೋರಾಟ ನಡೆಸಲು ನಿರ್ಧರಿಸಲಾಗಿದೆ.
ಕುಂದಾಪುರದ ನಾರಾಯಣಗುರು ಕಾಂಪ್ಲೆಂಕ್ಸ್ ಕುಂದಪ್ರಭ -ಕ್ಷೇಮಧಾಮ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದು, ತಮಗಾದ ವಂಚನೆಯನ್ನು, ಅನ್ಯಾಯವನ್ನು ವಿವರಿಸಿದರು.
ತಮಗೆ ಎಗ್ರಿಗೋಲ್ಡ್ ವ್ಯವಹಾರ ಮಾಡಲು ಪ್ರೇರೇಪಿಸಿದ ಸೀನಿಯರ್‌ಗಳೇ ಈಗ ಹಣ ವಾಪಸಾತಿ ಬಗ್ಗೆ ಯಾವುದೇ ಮಾಹಿತಿ ನೀಡದೇ ತಪ್ಪಿಸಿಕೊಳ್ಳುತ್ತಿದ್ದು, ಅವರ ವಿರುದ್ಧವೂ ಕ್ರಮಕೈಗೊಳ್ಳಬೇಕೆಂದು ಕೆಲವರು ಆಗ್ರಹಿಸಿದರು. ಹಿರಿಯ ವಕೀಲರಾದ ಜಿ.ಸಂತೋಷ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಈ ವ್ಯವಹಾರದ ಬಗ್ಗೆ ಕೂಲಂಕುಶವಾಗಿ ಮಾಹಿತಿ ಪಡೆದು ಮುಂದೆ ಈ ವಿಚಾರದಲ್ಲಿ ಏಜೆಂಟರು, ಠೇವಣಿದಾರರು ಹೇಗೆ ಮುಂದುವರಿಯಬಹುದೆಂದು ತಿಳಿಸುವುದಾಗಿ ಹೇಳಿದರು.
ಕುಂದಾಪುರದ ಸ್ಟೈಲ್ ಇನ್ ಟೌನ್ ಮಾಲಕ ಚಂದ್ರಶೇಖರ ಮಾತನಾಡಿ ಎಜೆಂಟರ ಮೇಲೆ ವಿಶ್ವಾಸದಿಂದ ಠೇವಣಿದಾರರು ಲಕ್ಷಾಂತರ ರೂಪಾಯಿ ನೀಡಿದ್ದಾರೆ. ಆದರೆ ಈ ಏಜೆಂಟರಿಗೆ ಸರಿಯಾದ ಮಾರ್ಗದರ್ಶನ ಇಲ್ಲದಿರುವುದು ಬೇಸರದ ಸಂಗತಿ. ಎಗ್ರಿಗೋಲ್ಡ್ ವಿಚಾರದಲ್ಲಿ ಯಾವುದೇ ಬೆಳವಣಿಗೆ ನಡೆದರೂ ಅದರ ಬಗ್ಗೆ ಮಾಹಿತಿ ನೀಡಬೇಕಾದುದು ಹಿರಿಯ ಅಧಿಕಾರಿಗಳ, ಕರ್ತವ್ಯ. ಈ ವಿಚಾರದಲ್ಲಿ ಸಂಬಂಧಪಟ್ಟವರು ಆಸಕ್ತಿ ವಹಿಸದಿದ್ದರೆ ಹೋರಾಟ ಅನಿವಾರ್ಯ. ಏನಿದ್ದರೂ ಎಗ್ರಿಗೋಲ್ಡ್ ವಿಚಾರದಲ್ಲಿ ಹೋರಾಟ ನಡೆಸುತ್ತಿದ್ದ ಉಡುಪಿ, ಮಂಗಳೂರು, ಬೆಂಗಳೂರು ಕಡೆಯವರನ್ನು ಸಂಪರ್ಕಿಸಿರಿ ಮಾಹಿತಿ ಪಡೆದು ಮುನ್ನಡೆಯೋಣ. ವಕೀಲರಾದ ಸಂತೋಷ ಕುಮಾರ್ ಶೆಟ್ಟಿಯವರ ಮಾರ್ಗದರ್ಶನದಂತೆ ಮುನ್ನಡೆಯೋಣ ಎಂದರು.
ಕುಂಭಾಸಿಯ ಹೋಟೆಲ್ ಉದ್ಯಮಿ ಕೆ.ಬಾಲಕೃಷ್ಣ ಉಪಾಧ್ಯ ಎಗ್ರಿಗೋಲ್ಡ್ ವ್ಯವಹಾರವನ್ನು ಪ್ರಾಮಾಣಿಕತೆಯಿಂದ ನಾವೆಲ್ಲ ಮಾಡಿದ್ದು, ಏಳೆಂಟು ವರ್ಷ ಉತ್ತಮ ವ್ಯವಹಾರ ನಡೆಯುತ್ತಿತ್ತು. ಈಗ ನಡು ನೀರಿನಲ್ಲಿ ನಮ್ಮನ್ನು ಕೈ ಬಿಡಲಾಗಿದೆ. ಒಂದು ತಿಂಗಳೊಳಗೆ ಎಲ್ಲ ಸರಿ ಹೋಗುತ್ತದೆ ಎಂದು ಎರಡು ವರ್ಷ ಕಳೆದರೂ ಏನೂ ಆಗಿಲ್ಲ. ನಾವೆಲ್ಲ ತುಂಬ ಸಂಕಟದಲ್ಲಿದ್ದೇವೆ. ಇನ್ನು ಹೋರಾಟ ಮಾಡದೇ ವಿಧಿ ಇಲ್ಲ ಎಂದರು.
ಕುಂದಪ್ರಭ ಅಧ್ಯಕ್ಷ ಯು.ಎಸ್.ಶೆಣೈ ಪ್ರಸ್ತಾವಿಕವಾಗಿ ಮಾತನಾಡಿ ಕುಂದಾಪುರದ ಸಾವಿರಾರು ಜನರಿಗೆ ನಷ್ಟ ಆದುದರಿಂದ ಈ ಸಭೆ ಕರೆದಿದ್ದೇವೆ. ಹೋರಾಟ ನ್ಯಾಯಯುತವಾಗಿ ಮಾಡಲು ಸಂಘಟಿತರಾಗಿ ಕೆಲಸ ಮಾಡಬೇಕು ಎಂದರು.
ಕಣ್ಣೀರಿಡುತ್ತಿರುವ ಮಂದಿ….
ಭಾಗವಹಿಸಿದವರಲ್ಲಿ ಕೆಲವರು ಠೇವಣಿದಾರರ ಒತ್ತಾಯ ತಾಳಲಾರದೆ ಸಾಲ ಮಾಡಿ ಹಣ ಪಾವತಿಸಿದ್ದೇವೆ ಎಂದು ಕಣ್ಣೀರಿಟ್ಟರು.
ಮುಂದಿನ ಹೋರಾಟಕ್ಕಾಗಿ ೨೫ ಜನರ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಗಿದೆ. ಆಗಮಿಸಿದ ಠೇವಣಿದಾರದಲ್ಲಿ ಉದ್ಯಮಿಗಳು. ವೈದ್ಯರು, ನೌಕರರು, ಕಾರ್ಮಿಕರು ಎಲ್ಲಾ ವರ್ಗದವರಿದ್ದು ಎಲ್ಲರಲ್ಲೂ ಹಣ ಕಳೆದುಕೊಂಡ ಚಿಂತೆ ಕಾಣುತ್ತಿತ್ತು.
Comments are closed.