*ಯೋಗೀಶ್ ಕುಂಭಾಸಿ
ಉಡುಪಿ: ವಿದ್ಯಾರ್ಥಿಗಳು ಶಿಸ್ತು ಹಾಗೂ ಸಹನೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಗೌರವ ಪಡೆಯಲು ಸಾಧ್ಯವಿದೆ. ಒಬ್ಬರನ್ನು ದೂಷಣೆ ಮಾಡುವುದು ಜಾಸ್ಥಿಯಾಗುತ್ತಾ ಹೋದರೇ ಎಂದಿಗೂ ಗೌರವ ಸಿಗುವುದಿಲ್ಲ. ಎಲ್ಲರನ್ನೂ ಒಟ್ಟುಗೂಡಿಸುವ ಸಂಘಟನೆಗಳು ಪ್ರಭಲವಾಗಲಿ ಹೊರಹೊಮ್ಮಲು ಸಂಘಟಿತ ಪ್ರಯತ್ನ ಬೇಕಾಗಿದೆ. ಸಮಾಜದಲ್ಲಿನ ಪ್ರತಿಯೊಬ್ಬನು ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯವಿದೆ. ನಾಗರೀಕ ಸಮಾಜದಲ್ಲಿ ಶಿಕ್ಷಣ ಅತ್ಯಮೂಲ್ಯವಾಗಿದ್ದು ನಾಗರೀಕತೆಯನ್ನು ಎಳವಿನಲ್ಲಿಯೇ ಬೆಳೆಸಿಕೊಂಡು ಉತ್ತಮ ನಾಯಕನಾಗುವ ಗುರಿ ವಿದ್ಯಾರ್ಥಿಗಳಲ್ಲಿರಲಿ ಎಂದು ಮಾಜಿ ಸಚಿವ ಹಾಗೂ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಕರೆಕೊಟ್ಟರು.
ಅವರು ಕೋಟ ಮಾಂಗಲ್ಯ ಮಂದಿರದಲ್ಲಿ ನಡೆದ ಕರ್ನಾಟಕ ವಿದ್ಯಾರ್ಥಿ ಪರಿಷತ್ (ಕೆ.ವಿ.ಪಿ) ಕೋಟ ವಿಭಾಗದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಕೆ.ವಿ.ಪಿ. ಸ್ಥಾಪಕ ಸಂಚಾಲಕ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ಕರಾವಳಿ ಭಾಗದಲ್ಲಿಯೇ ರಾಜಕಿಯೇತರ ಸಂಘಟನೆಯಾಗಿ ಕೆ.ವಿ.ಪಿ. ದೊಡ್ಡಮಟ್ಟದಲ್ಲಿ ಬೆಳೆಯುತ್ತಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಮೂಡಿಸಿ ಅವರನ್ನು ವೇದಿಕೆಗೆ ಕರೆತಂದು ಅವರನ್ನು ಬೆಳೆಸುವುದು ಕೆ.ವಿ.ಪಿ. ಗುರಿಯಾಗಿದ್ದು ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ಹಾಗೂ ವಿದ್ಯಾರ್ಥಿ ಪರವಾಗಿ ಹೋರಾಟ ನಡೆಸಲು ಈ ಕರ್ನಾಟಕ ವಿದ್ಯಾರ್ಥಿ ಪರಿಷತ್ ಸದಾ ಸಿದ್ಧವಿದೆ ಎಂದರು.
ಕೆ.ವಿ.ಪಿ. ಕೋಟ ವಿಭಾಗದ ಅಧ್ಯಕ್ಷ ಅಜಿತ್ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭಕ್ಕೂ ಮೊದಲು ಕೋಟ ಗಾಂಧೀ ಮೈದಾನದಿಂದ ಕೋಟ ಮಾಂಗಲ್ಯ ಮಂದಿರದವರೆಗೂ ವಿದ್ಯಾರ್ಥಿಗಳು ಜಾಥಾ ನಡೆಸಿದರು. ಕಾರ್ಯಕ್ರಮದಲ್ಲಿ ನೂತನ ವಿಭಾಗದ ಪದಾಧಿಕಾರಿಗಳಿಗೆ ಕೆ.ವಿ.ಪಿ. ಬಾವುಟ ನೀಡಲಾಯಿತು. ಕೆ.ವಿ.ಪಿ. ಸಕ್ರೀಯ ಸದಸ್ಯ ಶಾರದಾ ಕಾಲೇಜು ಬಸ್ರೂರು ಇಲ್ಲಿನ ವಿದ್ಯಾರ್ಥಿ ಗಣೇಶ್ ಪೂಜಾರಿಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ.ವಿ.ಪಿ. ಕುಂದಾಪುರ ವಲಯ ಸಂಚಾಲಕ ಗಿರೀಶ್ ಜಿ.ಕೆ., ಉಡುಪಿ ತಾಲ್ಲೂಕು ಸಂಚಾಲಕ ವಿಕಾಸ್ ಶೆಟ್ಟಿ, ಉಡುಪಿ ವಲಯ ಸಂಚಾಲಕ ಪ್ರಶಾಂತ ಕಲ್ಮಾಡಿ, ಕೋಟ ಉದ್ಯಮಿ ಗೋಪಾಲ ಬಂಗೇರ, ಕೆ.ವಿ.ಪಿ. ಕೋಟದ ಮಹಿಳಾ ಸಂಘಟನೆ ಅಧ್ಯಕ್ಷೆ ಅಶ್ವಿನಿ ಹಾಗೂ ವಿವಿಧ ವಿಭಾಗಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಕಾರ್ತಿಕ್ ಕಾಂಚನ್ ಸ್ವಾಗತಿಸಿದರು.
Comments are closed.