Manama: Under the auspices of Kannada Sangha Bahrain and Indian Embassy, Alva’s Virsat Nudisiri 2013 was presented to the packed audience that weaved a magic of colourful & vibrant Folklore ethnic dances.
ಮನಾಮ, ಬಹರೈನ್ : ಕೊಲ್ಲಿರಾಷ್ಟ್ರ ಬಹರೈನ್ ನಲ್ಲಿ ಇಲ್ಲಿನ ಭಾರತೀಯ ದೂತಾವಾಸದ ಆಶ್ರಯದಲ್ಲಿ ರಾಜ್ಯಪ್ರಶಸ್ತಿ ವಿಜೇತ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಮೊದಲಾದ ಹಿರಿಮೆಯ ಕನ್ನಡ ಸಂಘ ಬಹರೈನ್ ಸಹಯೋಗದಲ್ಲಿ “ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ -2013”- ಭಾರತೀಯ ಸಾಂಸ್ಕೃತಿಕ ವೈಭವದ ಉತ್ಸವ ಕಿಕ್ಕಿರಿದು ನೆರೆದ ಪ್ರೇಕ್ಷಕರ ಕಣ್ಮನ ತಣಿಸಿತು.
ಇಲ್ಲಿನ ಬಿಕೆಯೆಸ್ ಸಭಾಂಗಣದಲ್ಲಿ ಫೆ.15 ರಂದು ಅನಾವರಣಗೊಂಡ ಈ ಕಲಾವೈಭವದ ಸಂಧ್ಯೆಯಲ್ಲಿ ಆರಂಭದಲ್ಲಿ ಸಭಾಕಾರ್ಯಕ್ರಮ ನಡೆಯಿತು. ಭಾರತೀಯ ರಾಯಭಾರಿ ಗೌರವಾನ್ವಿತ ಡಾ.ಮೋಹನ್ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮ ಉಧ್ಘಾಟಿಸಿದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ ರಾಜ್ ಕುಮಾರ್, ಆಳ್ವಾಸ್ ನುಡಿಸಿರಿ ವಿರಾಸತ್ ನ ರೂವಾರಿ ಡಾ.ಮೋಹನ್ ಆಳ್ವಾ, ಸಂಘಟಕರಾದ ಉದಯ್ ಶೆಟ್ಟಿ,ಪ್ರದೀಪ್ ಶೆಟ್ಟಿ, ರಾಮೀ ಸಮೂಹ ಸಂಸ್ಥೆಯ ಸಮೂಹ ಪ್ರಭಂಧಕರಾದ ಶಾಂತಾರಾಮ್ ಶೆಟ್ಟಿ, ಯುಎಇ ಯೆಕ್ಸ್ಚೇಂಜ್ ನ ವಿಲಾಸ್ ನಾಯ್ಕ್, ಶ್ರೀಮತಿ ಯಶೋಧ ಪ್ರಕಾಶ್ ಶೆಟ್ಟಿ, ಸಂಘದ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಆಸೀನರಾಗಿದ್ದರು.
ಶ್ರೀ ಉದಯ್ ಶೆಟ್ಟಿ ಸ್ವಾಗತಿಸಿದ ಬಳಿಕ ಅಧ್ಯಕ್ಷ ಶ್ರೀ ರಾಜ್ ಕುಮಾರ್ ಮಾತನಾಡಿ ಕಾರ್ಯಕ್ರಮದ ಆಯೋಜನೆಗೆ ಸಹಕರಿಸಿದ ಎಲ್ಲರನ್ನೂ ಅಭಿನಂದಿಸಿದರು. ರಾಯಭಾರಿಯವರಿಂದ ಸನ್ಮಾನ ಸ್ವೀಕರಿಸಿದ ಆಳ್ವಾಸ್ ನುಡಿಸಿರಿ ವಿರಾಸತ್ ಪ್ರವರ್ತಕ ಡಾ. ಮೋಹನ್ ಆಳ್ವಾ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ವಿಶ್ವನುಡಿಸಿರಿ ವಿರಾಸತ್ ನ ಪರಿಕಲ್ಪನೆ, ಉದ್ದೇಶವನ್ನು ತಿಳಿಯಪಡಿಸಿದರು. ಭಾರತೀಯ ರಾಯಭಾರಿ ಡಾ.ಮೋಹನ್ ಕುಮಾರ್ ಗೌರವ ಸ್ವೀಕರಿಸಿ ಶುಭ ಹಾರೈಸಿದರು.
ಸಾಂಸ್ಕೃತಿಕ ಕಲಾ ಪ್ರದರ್ಶನವನ್ನು ಆಸ್ವಾದಿಸಲು ಮುಖ್ಯ ಅಭ್ಯಾಗತರಾಗಿ ಇಲ್ಲಿನ ರಾಜಮನೆತನದ ಶೇಕಾ ಹುಡಾ ಅಲ್ ಖಲೀಫಾ ಮತ್ತು ಗೃಹ ಮಂತ್ರಾಲಯದ ನಿರ್ದೇಶಕರಾದ ನಾಯಫ್ ಅಹಮದ್ ಅಲ್ ಶೆರೂಕಿ ಉಪಸ್ಥಿತರಿದ್ದರು.