ಕರಾವಳಿ

ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಅಳವಡಿಸಿಕೊಂಡರೆ ಭೂಮಿ ಸ್ವರ್ಗವಾಗುತ್ತದೆ: ಸಚಿವ ಪ್ರಮೋದ್

Pinterest LinkedIn Tumblr

ಉಡುಪಿ: ಜಗತ್ತಿನ ದಾರ್ಶನಿಕ ಇತಿಹಾಸದಲ್ಲಿ ಮಾತ್ರವಲ್ಲ, ಸಾಮಾಜಿಕ ಇತಿಹಾಸದಲ್ಲಿಯೂ ತಮ್ಮ ಮಾನವೀಯ ಸಂದೇಶದಿಂದ ಅಜರಾಮರವಾಗಿ ನಿಲ್ಲುವ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸುವುದರಿಂದ ಭೂಮಿ ಸ್ವರ್ಗವಾಗಲು ಸಾಧ್ಯ ಎಂದು ರಾಜ್ಯ ಮೀನುಗಾರಿಕಾ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಬ್ರಹ್ಮಶ್ರೀ ನಾರಾಯಣಗುರು ಜನ್ಮದಿನ ಆಚರಣಾ ಸಮಿತಿ ಸಂಯುಕ್ತವಾಗಿ ನಾರಾಯಣ ಗುರು ಸಭಾಭವನ ಬನ್ನಂಜೆಯಲ್ಲಿ ಆಯೋಜಿಸಿದ ಬ್ರಹ್ಮಶ್ರೀ ನಾರಾಯಣಗುರು ೧೬೨ನೇ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

udupi_narayanaguru_jayanthi-2 udupi_narayanaguru_jayanthi-3

ನಾರಾಯಣಗುರುಗಳ ಸಂದೇಶವನ್ನು, ಅವರ ಜೀವನಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸುವ ಸಂಬಂಧ ಸಮಾಜದ ಮುಖಂಡರ ಜೊತೆ ಶಿಕ್ಷಣ ಸಚಿವರನ್ನು ಭೇಟಿಯಾಗಿ ಚರ್ಚಿಸುವುದಾಗಿಯೂ ಸಚಿವರು ಈ ಸಂದರ್ಭದಲ್ಲಿ ಭರವಸೆ ನೀಡಿದರಲ್ಲದೆ, ಸರಕಾರಿ ಜಯಂತಿಯಾಗಿ ಪ್ರಥಮವಾಗಿ ಜಿಲ್ಲೆಯಲ್ಲಿ ನಾರಾಯಣಗುರು ಜಯಂತಿ ಆಚರಣೆ ಉದ್ಘಾಟನೆಗೆ ಅವಕಾಶ ಸಿಕ್ಕಿರುವುದು ಗುರುಗಳ ಆಶೀರ್ವಾದ ಎಂದು ಸಚಿವರು ಹೇಳಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು, ಜಿಲ್ಲಾಧಿಕಾರಿ ಟಿ ವೆಂಕಟೇಶ್ ಮಾತನಾಡಿದರು. ವಿಧಾನಪರಿಷತ್ ಶಾಸಕ ಕೋಟ ಶ್ರೀನಿವಾಸ ಪೂಜಾರಿ, ನಗರಸಭೆ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷರಾದ ಸಂಧ್ಯಾ ತಿಲಕ್‌ರಾಜ್, ನಗರ ಅಧ್ಯಕ್ಷರ ನರಸಿಂಹ ಮೂರ್ತಿ, ತಾಲೂಕು ಪಂಚಾಯತ್ ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್, ಸಿ‌ಇ‌ಒ ಪ್ರಿಯಾಂಕ ಮೇರಿ ಫ್ರಾನ್ಸಿಸ್, ತಹಸೀಲ್ದಾರ್ ಮಹೇಶ್ಚಂದ್ರ, ಸಹಾಯಕ ಆಯುಕ್ತ (ಪ್ರಭಾರ) ಯೋಗೇಶ್ವರ್, ಅಶೋಕ್ ಎಂ. ಸುವರ್ಣ, ಬಿ. ಬಿ ಪೂಜಾರಿ ಉಪಸ್ಥಿತರಿದ್ದರು.

ಬ್ರಹ್ಮಶ್ರೀ ನಾರಾಯಣ ಗುರು ಜನ್ಮದಿನ ಆಚರಣಾ ಸಮಿತಿ ಅಧ್ಯಕ್ಷ ಜನಾರ್ಧನ ತೋನ್ಸೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಪರ ಜಿಲ್ಲಾಧಿಕಾರಿ ಅನುರಾಧ ಸ್ವಾಗತಿಸಿದರು. ಉಪನ್ಯಾಸಕಿ ನಳಿನಿ ಪ್ರಮೋದ್ ಅವರು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಬದುಕು ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಮೊದಲು ಸುಂದರ ಜತ್ತನ್ ಮತ್ತು ಬಳಗದವರಿಂದ ಬ್ರಹ್ಮಶ್ರೀ ನಾರಾಯಣಗುರು ಗೀತಾ ಅಮೃತಧಾರೆ ಕಾರ್ಯಕ್ರಮ ನಡೆಯಿತು. ಗುರುಗಳ ಜೀವನ ಚರಿತ್ರೆ ಗುರುಸಾನಿಧ್ಯ ಸಾಕ್ಷ್ಯ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

Comments are closed.