ಆರೋಗ್ಯ

ಅಡಿಕೆ ಜಗಿವುದು ಉಲ್ಲಾಸದ ಅನುಭವಾದರು ಆರೋಗ್ಯಕ್ಕೆ ಹಾನಿಕಾರಕ

Pinterest LinkedIn Tumblr

betel_nut_pic

ಏಷ್ಯನ್ನರಲ್ಲಿ ಅಡಿಕೆಯನ್ನು ಮೆಲ್ಲುವುದು ಒಂದು ಚಟವಾಗಿದೆ. ವಾಸ್ತವವಾಗಿ ಎಲೆ ಅಡಿಕೆಯನ್ನು ಊಟದ ಬಳಿಕ ತಿನ್ನುವುದು ಜೀರ್ಣಕ್ಕೆ ಉತ್ತಮ ಎಂದು ಇದುವರೆಗೆ ತಿಳಿದುಕೊಂಡು ಬರಲಾಗಿತ್ತು. ಆದರೆ ವಾಸ್ತವವಾಗಿ ಅಡಿಕೆಯನ್ನು ಜಗಿಯುವುದು ಕೇವಲ ವ್ಯಸನವೇ ಹೊರತು ಇದರಿಂದ ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ಈಗ ತಿಳಿದುಬಂದಿದೆ.

ಎಲೆ ಅಡಿಕೆ ಸುಣ್ಣ ಬೆರೆಸಿ ತಿನ್ನುವ ಮೂಲಕ ತಾತ್ಕಾಲಿಕವಾಗಿ ಕೊಂಚ ಉಲ್ಲಾಸದ ಅನುಭವ ಪಡೆಯಬಹುದೇ ಹೊರತು ಇದರ ಇತರ ಪರಿಣಾಮಗಳು ಮಾತ್ರ ಘೋರವಾಗಿರುತ್ತವೆ. ಇಂದಿನ ದಿನಗಳಲ್ಲಿ ಹಲವು ರೋಗಿಗಳನ್ನು ತಪಾಸಿಸಿದ ವೈದ್ಯರಿಗೆ ಹಲವು ರೋಗಕ್ಕೆ ಎಲೆ ಅಡಿಕೆ ತಿನ್ನುವ ಅಭ್ಯಾಸವೇ ಕಾರಣ ಎಂದು ಕಂಡುಬಂದಿದೆ.

betel_nut_pic_1

ವಿಶೇಷವಾಗಿ ಅಡಿಕೆಯನ್ನು ತಿನ್ನುವ ರೋಗಿಗಳಲ್ಲಿ ಕ್ಯಾನ್ಸರ್, ನಪುಂಸಕತೆ, ದವಡೆಗಳಲ್ಲಿ ನೋವು, ದವಡೆಗಳಲ್ಲಿ ಸೋಂಕು, ಹಲ್ಲು ಹುಳುಕಾಗುವುದು, ಸವೆಯುವುದು, ಗುಳಿಬೀಳುವುದು, ಹಲ್ಲು ಒಳಗಿನಿಂದ ಟೊಳ್ಳಾಗುವುದು ಇತ್ಯಾದಿ ತೊಂದರೆಗಳು ಕಂಡುಬಂದಿವೆ. ಇದೊಂದು ಚಟವಾಗಿ ಪರಿಣಮಿಸಿರುವವರಲ್ಲಿ ಹಲ್ಲು ಒಸಡುಗಳ ಸಹಿತ ನಾಲಿಗೆ, ಒಣಗೆನ್ನೆ, ತುಟಿ, ನಾಲಿಗೆಯ ಮೇಲ್ಭಾಗ, ಗಂಟಲ ಭಾಗ, ಕಿರುನಾಲಿಗೆ ಮೊದಲಾದ ಕಡೆಗಳಲ್ಲಿಯೂ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೆಚ್ಚಿರುವುದನ್ನು ಕಂಡುಕೊಳ್ಳಲಾಗಿದೆ.

ಅಡಿಕೆಯನ್ನು ಇಂದು ಹಲವಾರು ರೂಪಗಳಲ್ಲಿ ಸೇವಿಸಲಾಗುತ್ತದೆ. ಸಾಂಪ್ರಾದಾಯಿಕ ಎಲೆ ಅಡಿಕೆಯಿಂದ ಹಿಡಿದು ಕ್ಯಾನ್ಸರ್ಗೆ ನೇರವಾಗಿ ಕಾರಣವಾಗುವ ಗುಟ್ಕಾದವರೆಗೆ ಅಡಿಕೆ ಹಲವು ರೂಪದಲ್ಲಿ ಆರೋಗ್ಯವನ್ನು ಕೆಡಿಸುತ್ತಿದೆ. ಮಲೆನಾಡಿನ, ಹಾಗೂ ಕರಾವಳಿಯ ಅಡಿಕೆ ಬೆಳೆಗಾರರಿಗೆ ಇದು ಲಾಭವನ್ನೇ ತಂದು ಕೊಡುತ್ತಿರಬಹುದು. ಆದರೆ ಇದನ್ನು ಸೇವಿಸುವವರ ಆರೋಗ್ಯ ಹೇಗೆ ಬಾಧೆಗೊಳಗಾಗುತ್ತದೆ ಎಂಬುದನ್ನು ನೋಡೋಣ…

ತಂಬಾಕಿನಂತೆಯೇ ಅಡಿಕೆ ಸಹಾ ಒಂದು ಪ್ರಚೋದನಾಕಾರಕವಾಗಿದೆ. ಅಂದರೆ ಇದರ ರಸ ಕೊಂಚ ಪ್ರಚೋದನೆ ನೀಡುತ್ತದೆ. ಈ ಪ್ರಮಾಣ ಹೆಚ್ಚಾದರೆ ರಕ್ತದ ಬಡಿತ ಹೆಚ್ಚುವುದು, ರಕ್ತದ ಒತ್ತಡ ಹೆಚ್ಚುತ್ತದೆ ಹಾಗೂ ನಿದ್ದೆ ಇಲ್ಲದಿರುವುದು, ಉದ್ವಿಗ್ನತೆ ಮತ್ತಿತರ ಸರಸಂಬಂಧಿ ತೊಂದರೆಗಳನ್ನು ತಂದೊಡ್ಡುತ್ತದೆ.

ಇದೊಂದು psychoactive ಅಥವಾ ಮಾನಸಿಕ ಚಟುವಟಿಕೆಗಳನ್ನು ಹೆಚ್ಚುಕಡಿಮೆ ಮಾಡಲು ಸಮರ್ಥವಾದ ಔಷಧಿಯಾಗಿದೆ. ಆಗಾಗ ತಿಂದರೆ ಮೆದುಳಿಗೆ ಹಾನಿಯಾಗದು. ಆದರೆ ಸತತ ಸೇವನೆಯ ಅಭ್ಯಾಸದಿಂದ ಮೆದುಳಿನ ಕ್ಷಮತೆ ಉಡುಗಬಹುದು.

ಎಲೆಯಡಿಕೆ ಹಾಕುವ ಮೂಲಕ ತಾತ್ಕಾಲಿಕ ಉಲ್ಲಾಸ ದೊರೆತರೂ ಇದರ ಅಭ್ಯಾಸ ಮೆದುಳಿನ ಮತ್ತು ನರವ್ಯವಸ್ಥೆಯ ಕ್ಷಮತೆಯನ್ನು ಕ್ಷೀಣಿಸುತ್ತದೆ. ವಾಕರಿಕೆ, ವಾಂತಿ, ಅತಿಯಾಗಿ ಜೊಲ್ಲು ಉತ್ಪತ್ತಿಯಾಗುವುದು, ಅತಿಯಾಗಿ ಬೆವರುವುದು ಇತ್ಯಾದಿ ತೊಂದರೆಗಳು ಎದುರಾಗುತ್ತವೆ.

ಅಡಿಕೆಯ ಸೇವನೆ, ಅದರಲ್ಲೂ ಹೆಚ್ಚು ಹೊತ್ತು ಬಾಯಿಯಲ್ಲಿ ಇಟ್ಟುಕೊಳ್ಳುವ ಅಭ್ಯಾಸವುಳ್ಳವರಲ್ಲಿ ಬಾಯಿಯ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಇದು ಶ್ವಾಸಕೋಶ, ಯಕೃತ್, ಗಂಟಲು, ಪ್ರಾಸ್ಟೇಟ್ ಗ್ರಂಥಿ, ಹೊಟ್ಟೆ ಮತ್ತು ಕರುಳಿನ ಕ್ಯಾನ್ಸರ್ಗೂ ಕಾರಣವಾಗಬಹುದು.

ಕೆಲವರು ಅಡಿಕೆ ಮತ್ತು ತಂಬಾಕನ್ನು ಬೆರೆಸಿ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಇದರಿಂದ ಊರಿಗೆ ಬಂದ ಮಾರಿಯನ್ನು ಮನೆಗೆ ಆಹ್ವಾನಿಸಿದಂತಾಗುತ್ತದೆ. ಏಕೆಂದರೆ ತಂಬಾಕು ಮೊದಲೇ ಕ್ಯಾನ್ಸರ್ ಕಾರಕವಾಗಿದ್ದು ಇದರೊಂದಿಗೆ ಅಡಿಕೆಯನ್ನೂ ಸೇವಿಸಿದರೆ ಕ್ಯಾನ್ಸರ್ ಆವರಿಸುವ ಸಾಧ್ಯತೆ ಸಾವಿರ ಪಟ್ಟು ಹೆಚ್ಚುತ್ತದೆ!

ಗರ್ಭಿಣಿಯರು ಅಡಿಕೆಯಿಂದ ದೂರವಿದ್ದಷ್ಟೂ ಒಳ್ಳೆಯದು. ಏಕೆಂದರೆ ಇದರ ರಸ ಹುಟ್ಟುವ ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು.

ಅಡಿಕೆ ಮೆಲ್ಲುವ ಅಭ್ಯಾಸವಿದ್ದವರ ಹಲ್ಲುಗಳು ಕಪ್ಪಗಾಗಿ ನೋಡಲು ಅಸಹ್ಯವಾಗಿರುತ್ತವೆ. ಇವು ವ್ಯಕ್ತಿಯ ಸೌಂದರ್ಯವನ್ನೇ ಕುಂದಿಸುತ್ತವೆ.

Comments are closed.