ಮನೋರಂಜನೆ

ಮೋಹದ ಬೆಡಗಿ ನೇಹಾ, ಹೊಸ ಮುಂಗಾರಿನ ಕಾಮನಬಿಲ್ಲು

Pinterest LinkedIn Tumblr

neha“ಮುಂಗಾರು ಮಳೆ-2′ ಚಿತ್ರ ನೋಡಿದವರು ನಾಯಕಿಯ ನಟನೆಯನ್ನು ಇಷ್ಟಪಟ್ಟಿದ್ದಾರೆ. ನಾಯಕಿಯಾಗಿ ನಟಿಸಿರುವ ನೇಹಾ ಶೆಟ್ಟಿಗೆ “ಮುಂಗಾರು ಮಳೆ-2′ ಮೊದಲ ಚಿತ್ರ. ಮೊದಲ ಚಿತ್ರದಲ್ಲೇ ಭರವಸೆ ಮೂಡಿಸುವ ಮೂಲಕ ಕನ್ನಡಕ್ಕೊಬ್ಬಳು ಹೊಸ ನಾಯಕಿ ಸಿಕ್ಕಳು ಎಂಬ ಮಾತು ಕೂಡಾ ಕೇಳಿಬರುತ್ತಿದೆ. ನೇಹಾ ಶೆಟ್ಟಿ ಚಿತ್ರದ ಬಗೆಗಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ..

1. ಮೊದಲ ಚಿತ್ರದ ಅನುಭವ ಹೇಗಿತ್ತು?
– ತುಂಬಾ ಒಳ್ಳೆಯ ಅನುಭವ. ಮೊದಲ ಸಿನಿಮಾದಲ್ಲೇ ಸಾಕಷ್ಟು ಒಳ್ಳೊಳ್ಳೆ ಅನುಭವ ಆಯಿತು. ಬುಲೆಟ್‌ ಓಡಿಸೋದು, ಒಂಟೆ ಸವಾರಿ ಸೇರಿದಂತೆ ಹೊಸ ಹೊಸ ಅನುಭವ ಕೊಟ್ಟ ಸಿನಿಮಾ “ಮುಂಗಾರು ಮಳೆ-2′. ಪಾತ್ರದ ವಿಷಯದಲ್ಲೂ ಅಷ್ಟೇ. ಎರಡು ಶೇಡ್‌ನ‌ಲ್ಲಿ ಸಾಗುವ ಪಾತ್ರದಲ್ಲಿ ಮೊದಲರ್ಧದಲ್ಲಿ ಸಖತ್‌ ಬೋಲ್ಡ್‌ ಪಾತ್ರ ಸಿಕ್ಕರೆ ದ್ವಿತೀಯಾರ್ಧದಲ್ಲಿ ಪಕ್ಕಾ ಹೋಮ್ಲಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಇಂದಿನ ಟ್ರೆಂಡ್‌ಗೆ ತಕ್ಕನಾದ ಪಾತ್ರ ಸಿಗುವ ಮೂಲಕ ನಟನೆ ಹೆಚ್ಚು ಅವಕಾಶವಿತ್ತು.

2. ಸಿನಿಮಾ ಬಿಡುಗಡೆಯಾಗಿದೆ ನಿಮ್ಮ ಪಾತ್ರದ ಬಗ್ಗೆ ಸಿಕ್ಕ ಪ್ರತಿಕ್ರಿಯೆ?
– ಸಿನಿಮಾ ನೋಡಿದವರು ನನ್ನ ಪಾತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ನನ್ನ ಮೊದಲ ಸಿನಿಮಾ ಎಂದು ಗೊತ್ತಾಗೋದಿಲ್ಲ ಎನ್ನುತ್ತಿದ್ದಾರೆ. ತುಂಬಾ ಬೋಲ್ಡ್‌ ನೇಚರ್‌ ಇರುವ ಹುಡುಗಿಯ ಪಾತ್ರವಾದ್ದರಿಂದ ಅದನ್ನು ಅಷ್ಟೇ ಚೆನ್ನಾಗಿ ನಿಭಾಹಿಸಿದ್ದೀಯ ಎಂದು ಸಿನಿಮಾ ನೋಡಿದವರು ಹೇಳುತ್ತಿದ್ದಾರೆ. ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆಂಬ ಮಾತುಗಳು ಕೂಡಾ ಕೇಳಿಬರುತ್ತಿದೆ.

3. ಒಟ್ಟು ಸಿನಿಮಾ ಬಗ್ಗೆ ನಿಮಗೆ ಬಂದ ಅಭಿಪ್ರಾಯಗಳು?
– ಜನ ಸಿನಿಮಾವನ್ನು ಇಷ್ಟಪಡುತ್ತಿದ್ದಾರೆ. ಎಲ್ಲಾ ಕಡೆಗಳಿಂದಲೂ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಇಂದಿನ ಟ್ರೆಂಡ್‌ಗೆ ತಕ್ಕಂತೆ ಸಿನಿಮಾ ಮಾಡಿದ್ದು, ಯೂತ್ಸ್ ತುಂಬಾ ಇಷ್ಟಪಟ್ಟಿದ್ದಾರೆ. ಚಿತ್ರದ ಹಾಡುಗಳು, ಲೊಕೇಶನ್‌, ಸಾಕಷ್ಟು ಸನ್ನಿವೇಶಗಳನ್ನು ಪ್ರೇಕ್ಷಕರು ಇಷ್ಟಪಡುವ ಮೂಲಕ “ಮುಂಗಾರು ಮಳೆ-2′ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಆ “ಮುಂಗಾರು ಮಳೆ’ಗೆ ಇದನ್ನು ಹೋಲಿಕೆ ಮಾಡಬಾರದು. ಏಕೆಂದರೆ ಇದು ಇಂದಿನ ಟ್ರೆಂಡ್‌ಗೆ ತಕ್ಕಂತಹ ಸಿನಿಮಾ. ಫ್ರೆಶ್‌ ಮೈಂಡ್‌ನಿಂದ ನೋಡಿ ಎಂದು ಪ್ರೇಕ್ಷಕರನ್ನು ಕೇಳಿಕೊಳ್ಳುತ್ತೇನೆ.

4. ಸ್ಟಾರ್‌ ಹೀರೋ ಚಿತ್ರದ ಮೂಲಕವೇ ಲಾಂಚ್‌ ಆದಿರಿ?
– ಆ ವಿಷಯದಲ್ಲಿ ನಾನು ತುಂಬಾ ಲಕ್ಕಿ. ಸ್ಟಾರ್‌ ಹೀರೋ, ಒಳ್ಳೆಯ ನಿರ್ದೇಶಕ, ಬ್ಯಾನರ್‌ ಮೂಲಕ ಲಾಂಚ್‌ ಆಗುವ ಅವಕಾಶ ಸಿಕ್ಕಿತು. ಮೊದಲ ಸಿನಿಮಾದಲ್ಲೇ ಒಳ್ಳೆಯ ತಂಡ ಸಿಗುವ ಮೂಲಕ ಲಾಂಚ್‌ ಕೂಡಾ ಚೆನ್ನಾಗಿ ಆಯಿತು. ಈ ತಂಡದ ಜೊತೆ ಸೇರಿ ಸಾಕಷ್ಟು ಕಲಿತೆ. ಸಿನಿಮಾ ಚಿತ್ರೀಕರಣಕ್ಕೆ ಹೋಗುವ ಮುನ್ನ ಕೆಲವು ದಿನಗಳ ಕಾಲ ವರ್ಕ್‌ಶಾಪ್‌ ಕೂಡಾ ಮಾಡಿದೆವು. ಇದು ಕೂಡಾ ಶೂಟಿಂಗ್‌ ಸ್ಪಾಟ್‌ನಲ್ಲಿ ಸಹಾಯವಾಯಿತು.

5. ಇದು ನಿಮ್ಮ ಮೊದಲ ಸಿನಿಮಾ. ಅಪ್ಪ -ಅಮ್ಮ ನೋಡಿ ಏನಂದ್ರು?
– ಅವರು ತುಂಬಾ ಎಕ್ಸೆ„ಟ್‌ ಆಗಿದ್ರು. ಇಡೀ ಸಿನಿಮಾ ಅವರಿಗೆ ಇಷ್ಟವಾಗಿದೆ. ಕಥೆ ತುಂಬಾ ವಿಭಿನ್ನವಾಗಿದ್ದು, ನನ್ನ ಪಾತ್ರ ಕೂಡಾ ಚೆನ್ನಾಗಿ ಮೂಡಿಬಂದಿದೆ ಎಂದು ಖುಷಿಯಿಂದ ಹೇಳಿದರು. ಮೊದಲ

6. ಬಾಲಿವುಡ್‌ಗೆ ನೀವು ಪ್ರಯತ್ನಿಸುತ್ತಿದ್ದಾರಂತೆ?
– ಬಾಲಿವುಡ್‌ ಎಂದಲ್ಲ, ನನಗೆ ಎಲ್ಲಾ ಭಾಷೆಗಳಲ್ಲೂ ನಟಿಸಬೇಕೆಂಬ ಆಸೆ ಇದೆ. ಯಾವುದೇ ಒಂದು ಚಿತ್ರರಂಗಕ್ಕೆ ಸೀಮಿತವಾಗಿರದೇ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ … ಹೀಗೆ ಎಲ್ಲಾ ಭಾಷೆಯ ಚಿತ್ರಗಳಲ್ಲೂ ನಟಿಸಬೇಕೆಂಬ ಆಸೆ ಇದೆ. ಒಂದಷ್ಟು ಅವಕಾಶಗಳು ಕೂಡಾ ಬರುತ್ತಿವೆ.

7. ಸಿನಿಮಾ ನೋಡಿದಾಗ ನಿಮ್ಮ ಪ್ಲಸ್‌ ಮತ್ತು ಮೈನಸ್‌ ಯಾವುದೆಂದು ಅನಿಸಿತು ನಿಮಗೆ?
– ಯಾರು ಎಷ್ಟೇ ಚೆನ್ನಾಗಿ ಮಾಡಿದ್ದೀಯಾ ಎಂದರೂ ನನಗೆ ಮತ್ತಷ್ಟು ಚೆನ್ನಾಗಿ ನಟಿಸಬಹುದಿತ್ತು, ಇನ್ನಷ್ಟು ಬೆಟರ್‌ ಮಾಡಬಹುದಿತ್ತು ಅನಿಸುತ್ತದೆ. ನನಗೆ ನಾನೇ ದೊಡ್ಡ ಕ್ರಿಟಿಕ್‌. ತೆರೆಮೇಲೆ ನೋಡಿದಾಗ ಈ ದೃಶ್ಯದಲ್ಲಿ ಇನ್ನಷ್ಟು ಚೆನ್ನಾಗಿ ನಟಿಸಬಹುದು ಎಂದೆನಿಸಿದ್ದು ಸುಳ್ಳಲ್ಲ. ಇದು ಮೊದಲ ಸಿನಿಮಾ, ಮುಂದಿನ ಸಿನಿಮಾಗಳಲ್ಲಿ ನಾನು ಮಾಡಿದ ತಪ್ಪುಗಳನ್ನು ಸುಧಾರಿಸಿಕೊಳ್ಳುತ್ತಾ ಹೋಗುತ್ತೇನೆ.

8. ಮೊದಲ ಚಿತ್ರ ನಿಮಗೆ ತೃಪ್ತಿ ಕೊಟ್ಟಿದೆಯಾ?
– ಖಂಡಿತಾ. ತುಂಬಾ ತೃಪ್ತಿ ಕೊಟ್ಟಿದೆ. ಒಂದು ಪರಿಪೂರ್ಣ ಪ್ಯಾಕೇಜ್‌ ಸಿನಿಮಾ “ಮುಂಗಾರು ಮಳೆ-2′. ಮೊದಲ ಚಿತ್ರದಲ್ಲೇ ತುಂಬಾ ಸ್ಕೋಪ್‌ ಇರುವ ಪಾತ್ರ ಸಿಕ್ಕಿದೆ. ನಂದಿನಿ ಎಂಬ ಪಾತ್ರದ ಮೂಲಕ ಕಥೆಗೆ ಹೊಸ ಟ್ವಿಸ್ಟ್‌ ಸಿಗುತ್ತಾ ಹೋಗುತ್ತದೆ.

9. ಎಜುಕೇಶನ್‌ ಎಲ್ಲಿಗೆ ಬಂತು?
– ಬಿಸಿಎ ಓದುತ್ತಿದ್ದೇನೆ.

10. ಮುಂದಿನ ಚಿತ್ರ?
– ಇನ್ನೂ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಅವಕಾಶಗಳು ಬರುತ್ತಿವೆ. “ಮುಂಗಾರು ಮಳೆ-2′ ಬಿಡುಗಡೆಯಾಗುವವರೆಗೆ ಯಾವುದೇ ಸಿನಿಮಾ ಒಪ್ಪಿಕೊಳ್ಳೋದು ಬೇಡ ಎಂದು ನಿರ್ಧರಿಸಿದ್ದೆ. ಸದ್ಯದಲ್ಲೇ ಒಂದೊಳ್ಳೆಯ ಕತೆಯನ್ನು ಒಪ್ಪಿಕೊಳ್ಳುತ್ತೇನೆ.

– ರವಿಪ್ರಕಾಶ್‌ ರೈ

-ಉದಯವಾಣಿ

Comments are closed.