ಕರ್ನಾಟಕ

ಕಾವೇರಿ ಗಲಾಟೆ ವೇಳೆಯ ಹಿಂಸಾಚಾರಕ್ಕೆ ಹೊಸ ತಿರುವು ! ಹಿಂಸೆಯ ಹಿಂದೆ ತಮಿಳರ ಕೈವಾಡ !

Pinterest LinkedIn Tumblr

kaveri

ಬೆಂಗಳೂರು: ಕಾವೇರಿ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದ ವೇಳೆ ನಡೆದ ಹಿಂಸಾಚಾರ ಹೊಸ ತಿರುವು ಪಡೆದುಕೊಂಡಿದ್ದು, ಇದರ ಹಿಂದೆ ತಮಿಳರ ಕೈವಾಡವಿರುದು ಬಯಲಾಗಿದೆ.

ಶಾಂತಿಪ್ರಿಯರ ನಾಡೆಂದೇ ಹೆಸರಾಗಿರುವ ಕರ್ನಾಟಕದ ಹೆಸರನ್ನು ಹಾಳು ಮಾಡಲು ನಡೆದಿದ್ದ ಮಹಾ ಸಂಚು ಇದೀಗ ಬಯಲಾಗಿದೆ. ಕಳೆದ ಸೆ.12 ರಂದು ಸುಪ್ರೀಂಕೋರ್ಟ್ನಿಂದ ವ್ಯತಿರಿಕ್ತ ತೀರ್ಪು ಹೊರಬಿದ್ದ ಕೂಡಲೇ ಮಹಾನಗರಿಯಲ್ಲಿ ಹಿಂಸಾಚಾರ ನಡೆದಿತ್ತು. ಅವತ್ತು ರಾಜಾಜಿನಗರದಲ್ಲಿರುವ ಎಂಆರ್ಪಿಎಲ್ ಕಚೇರಿ ಮೇಲೆ ದಾಳಿ ನಡೆದು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ಆರ್ ಸತ್ಯ, ಅರುಲ್, ಎಸ್.ಸೆಲ್ವಾ, ಸ್ಟೆಫನ್ ರಾಜ್ ಎಂಬುವರನ್ನು ಅರೆಸ್ಟ್ ಮಾಡಿದ್ದು, ಈ ನಾಲ್ವರೂ ತಮಿಳುನಾಡಿನ ತಿರುವಣ್ಣಾಮಲೈಗೆ ಸೇರಿದವರಾಗಿದ್ದಾರೆ.

ಇದೇ ದಿನ ನಾಯಂಡಹಳ್ಳಿಯಲ್ಲಿ ಕೆಪಿಎನ್ ಟ್ರಾವೆಲ್ಸ್ ಗೆ ಸೇರಿದ 45 ಬಸ್ಗಳಿಗೆ ಬೆಂಕಿ ಹಚ್ಚಲಾಗಿತ್ತು. ಪ್ರಕರಣ ಸಂಬಂಧ ನಿನ್ನೆ 11 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಅವರಲ್ಲಿ 22 ವರ್ಷದ ಭಾಗ್ಯಶ್ರೀ ಯಾದಗಿರಿ ಮೂಲದಾಕೆ. ದಿನಗೂಲಿ ಕಾರ್ಮಿಕಳಾಗಿರುವ ಈಕೆ ಎರಡು ವರ್ಷದ ಹಿಂದೆ ತನ್ನ ಹೆತ್ತವರೊಂದಿಗೆ ಬೆಂಗಳೂರಿಗೆ ಬಂದಿದ್ದಳು. ಈಕೆಯನ್ನು ಬಳಸಿಕೊಂಡು ಬೆಂಕಿ ಹಚ್ಚಿಸಲಾಗಿದೆ ಅನ್ನೋ ಮಾಹಿತಿಯನ್ನು ಪೊಲೀಸ್ ಮೂಲಗಳು ನೀಡುತ್ತಿವೆ. ಇದಲ್ಲದೇ ಕೆಪಿಎನ್ ಟ್ರಾವೆಲ್ಸ್ ಗೆ ಸೇರಿದ ಬಸ್ಗಳಿಗೆ ಬೆಂಕಿ ಹಚ್ಚಿದ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿದೆ.

ಟ್ರಾವೆಲ್ಸ್ ನವರ ಮೇಲೆಯೇ ಅನುಮಾನ
ಕಾವೇರಿ ಪ್ರತಿಭಟನೆಯಲ್ಲಿ ಕೆಪಿಎನ್ ಟ್ರಾವೆಲ್ಸ್ಗೆ ಬೆಂಕಿ ಹಚ್ಚಿದ್ದು ಯಾರು? ಎನ್ನುವುದನ್ನು ಪರಿಶೀಲಿಸಲು ಹೊರಟಿದ್ದ ಪೊಲೀಸರಿಗೆ ಕೆಪಿಎನ್ ಟ್ರಾವೆಲ್ಸ್ ನವರ ಮೇಲೆಯೇ ಅನುಮಾನ ಮೂಡಿದೆ. ಬಸ್ಗಳಿಗೆ ಬೆಂಕಿ ಹಚ್ಚಿದ್ದು ಪ್ರತಿಭಟನಕಾರನೇ ಅಥವಾ ಕೆಪಿಎನ್ ಟ್ರಾವೆಲ್ಸ್ನವರೆಯೇ ಎಂಬ ಅನುಮಾನ ಮೂಡಿದ್ದು, ಕೆಪಿಎನ್ ಟ್ರಾವೆಲ್ಸ್ ನವರೇ ವಿಮೆ ಹಣ ಪಡೆಯಲು ಪ್ರತಿಭಟನೆಯ ಹೆಸರಲ್ಲಿ ಈ ರೀತಿ ಮಾಡಿದ್ದಾರೆಯೇ ಎಂಬ ಸಂಶಯಗಳು ಪೊಲೀಸರಿಂದ ವ್ಯಕ್ತವಾಗಿದೆ.

ಶಂಕೆ…
ಕೆಪಿಎನ್ ಟ್ರಾವೆಲ್ಸ್ ಬಸ್ಗಳ ಮೇಲೆ ಹೀಗೆ ಬೆಂಕಿ ಹಚ್ಚಲಾಗಿರುವುದು ಮೊದಲೇನಲ್ಲ, ಈ ಹಿಂದೆ ರಾಜ್ಕುಮಾರ್ ಮೃತಪಟ್ಟಾಗ ನಡೆದ ಗಲಭೆಯಲ್ಲೂ ಕೆಪಿಎನ್ ಟ್ರಾವೆಲ್ಸ್ಗೆ ಬೆಂಕಿ ಹಚ್ಚಲಾಗಿತ್ತು. ಆಗ 48 ಬಸ್ಗಳು ಬೆಂಕಿಗಾಹುತಿಯಾಗಿದ್ದವು. ನಾಲ್ಕೈದು ವರ್ಷದ ಹಿಂದೆಯೂ ಇದೇ ರೀತಿ ಕೆಪಿಎನ್ ಟ್ರಾವೆಲ್ಸ್ಗೆ ಬೆಂಕಿ ಬಿದ್ದಿತ್ತು. ಹೀಗಾಗಿ ಇನ್ಶೂರೆನ್ಸ್ ಹಣ ಪಡೆಯಲು ಕೆಪಿಎನ್ ಟ್ರಾವೆಲ್ಸ್ ಮಾಡಿದ್ಯಾ ಪ್ಲಾನ್ ಎನ್ನುವುದು ಪೊಲೀಸರ ಅನುಮಾನವಾಗಿದೆ. ಘಟನೆಯಲ್ಲಿ ಪ್ರತಿಭಟನಕಾರರು ನುಗ್ಗಿ ಬೆಂಕಿ ಹಚ್ಚಿರುವ ಸಾಕ್ಷ್ಯಾಧಾರ ಸಿಕ್ಕಿಲ್ಲ, ಹೀಗಾಗಿ ಕೆಪಿಎನ್ ಟ್ರಾವೆಲ್ಸ್ ಮೇಲೆಯೇ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಅದೇ ಅನುಮಾನದ ಮೇಲೆ ತನಿಖೆ ಆರಂಭಿಸಿದ್ದಾರೆ.

ಗಲಭೆಗೆ ಕಾರಣ…
ಸಂತೋಷ್ ಎನ್ನುವ ತಮಿಳುನಾಡು ಮೂಲದ ಯುವಕ ಸಾಮಾಜಿಕ ತಾಣ ಫೇಸ್ ಬುಕ್ನಲ್ಲಿ ಕನ್ನಡ ಸಿನಿಮಾ ಕಲಾವಿದರು ಮತ್ತು ಕಾವೇರಿ ಬಗ್ಗೆ ಅತ್ಯಂತ ಕೀಳಾಗಿ ಅಣಕವಾಡಿದ್ದ.ಇದಕ್ಕೆ ಕನ್ನಡಪರ ಹೋರಾಟಗಾರರು ಅವನಿಗೆ ಬಿಸಿ ಮುಟ್ಟಿಸಿ ಕಾವೇರಿ ಕರ್ನಾಟಕದ್ದು ಎನ್ನುವ ಹೇಳಿಕೆಯನ್ನು ಪಡೆದುಕೊಂಡಿದ್ದರು. ಈ ಘಟನೆಯ ವಿಡಿಯೋ ವಾಟ್ಸಾಪ್ ನಲ್ಲಿ ಹರಿದಾಡಿ ರಾಷ್ಟ್ರೀಯ ವಾಹಿನಿಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಈ ಘಟನೆಗೆ ಪ್ರತೀಕಾರ ತೀರಿಸುವ ಹಾಗೆ, ಬೆಂಗಳೂರಿನಿಂದ ಪ್ರವಾಸಿಗರನ್ನು ಟಿಟಿ ವಾಹನದ ಮೂಲಕ ರಾಮೇಶ್ವರಂಗೆ ಕರೆದುಕೊಂಡು ಹೋಗಿದ್ದ ಕರ್ನಾಟಕ ಮೂಲದ ಡ್ರೈವರ್ ನನ್ನು ಚೆನ್ನಾಗಿ ಥಳಿಸಿ ಕಾವೇರಿ ತಮಿಳುನಾಡಿನದ್ದು ಎನ್ನುವ ಹೇಳಿಕೆ ನೀಡುವಂತೆ ತಮಿಳುಪರ ಸಂಘಟನೆಯ ಸದಸ್ಯರು ಒತ್ತಾಯಿಸಿದ್ದರು. ಆದರೆ ಡ್ರೈವರ್ ಒತ್ತಾಯಕ್ಕೆ ಮಣಿಯದಿದ್ದಾಗ ಮತ್ತಷ್ಟು ಏಟನ್ನು ನೀಡಿದ್ದರು.

ಇದರ ವಿಡಿಯೋ ತುಣುಕನ್ನು ಕನ್ನಡದ ಮಾಧ್ಯಮಗಳು ಅವಶ್ಯಕತೆಗಿಂತ ಹೆಚ್ಚಾಗಿ ಪ್ರಚಾರ ಮಾಡಲಾರಂಭಿಸಿದವು. ಇದಾದ ನಂತರ ಚೆನ್ನೈನಲ್ಲಿ ಕನ್ನಡಿಗ ಮೂಲದ ಹೋಟೆಲ್ ಮೇಲೆ ಪೆಟ್ರೋಲ್ ಬಾಂಬ್ ಎಸೆದ ನಂತರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ರಾಮೇಶ್ವರಂನಲ್ಲಿ ಕರ್ನಾಟಕದ ಟಿಟಿ ವಾಹನದ ಡ್ರೈವರ್ ಮೇಲಿನ ಹಲ್ಲೆಯ ವಿಡಿಯೋ ವೈರಲ್. ಕರ್ನಾಟಕದಲ್ಲಿ ತಮಿಳರ ಮೇಲೆ ಹಲ್ಲೆ ಮುಂದುವರೆದರೆ ಇಲ್ಲಿರುವ ಕನ್ನಡಿಗರಿಗೂ ಅದೇ ಗತಿಯಾಗುತ್ತದೆ ಎಂಬರ್ಥದ ಕರಪತ್ರಗಳ ಹಂಚಿಕೆ. ನಮ್ ತಮಿಳರ ಕಚ್ಚಿ ಸಂಘಟನೆಯ ಗೂಂಡಾಗಳಿಂದ ಈ ಕೃತ್ಯ.

ಕನ್ನಡಿಗರಿಗೆ ಸೇರಿರುವ ವಾಹನ, ಕಚೇರಿ ಮೇಲೆ ಚೆನ್ನೈನಲ್ಲಿ ದಾಳಿ. ಚೆನ್ನೈನ ವುಡ್ಲ್ಯಾಂಡ್ಸ್ ಹೋಟೇಲ್ ಮೇಲೆ 6 ಪೆಟ್ರೋಲ್ ಬಾಂಬ್ ಎಸೆತ, ಬೆಂಗಳೂರಿನಲ್ಲಿ ತಮಿಳುನಾಡು ಮೂಲದ ಯುವಕನೊಬ್ಬನಿಗೆ ಕನ್ನಡಿಗರು ಗೂಸಾ ಕೊಟ್ಟ ಪ್ರತೀಕಾರಕ್ಕಾಗಿ ಈ ದಾಳಿ, ಇದರ ಬೆನ್ನಲ್ಲೇ 12ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕು ಎನ್ನುವ ಸುರ್ಪೀಂಕೋರ್ಟಿನ ತೀರ್ಪಿನಿಂದಾಗಿ ಕನ್ನಡಪರ ಹೋರಾಟಗಾರ ಹೋರಾಟದ ಕಿಚ್ಚು ತಾರಕಕ್ಕೇರಿತು. ಇದಿಷ್ಟು ಬೆಂಗಳೂರು ಹೊತ್ತಿ ಉರಿಯಲು ಕಾರಣವಾದ ಅಂಶೆ ಎನ್ನುತ್ತವೆ ಪೊಲೀಸ್ ಮೂಲಗಳು.

Comments are closed.