ಮಂಗಳೂರು, ಸೆ.30: ಎತ್ತಿನಹೊಳೆ ಯೋಜನೆ ವಿರುದ್ಧ ಹೋರಾಟ ಚುರುಕುಗೊಳಿಸುವ ಉದ್ದೇಶದಿಂದ ನಗರದಲ್ಲಿ ಗುರುವಾರ ಉನ್ನತ ಮಟ್ಟದ ವಿಶೇಷ ಸಭೆ ನಡೆಯಿತು.
ಸಭೆಯಲ್ಲಿ ಅವರು ಮಾರ್ಗದರ್ಶನ ನೀಡಿದ ರಾಷ್ಟ್ರೀಯ ಗಂಗಾನದಿ ಜಲಾನಯನ ಪ್ರಾಧಿಕಾರದ ಉಪಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಶ್ರೀ ಆನಂದ ಸ್ವರೂಪ ಸ್ವಾಮೀಜಿ ಅವರು ಮಾತನಾಡಿ, ಎತ್ತಿನಹೊಳೆ ಯೋಜನೆ ಸ್ಥಗಿತಗೊಳಿಸಬೇಕಾದ ಅಗತ್ಯದ ಕುರಿತು ಪ್ರಧಾನಿ ಹಾಗೂ ಕೇಂದ್ರದ ಪರಿಸರ ಖಾತೆ ಸಚಿವರಿಗೆ ಮನವರಿಕೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಉಭಯ ನಾಯಕರ ಜೊತೆ ಈ ಕುರಿತು ಶೀಘ್ರದಲ್ಲೇ ಸಮಾಲೋಚನೆ ಜತೆಗೆ ಲಿಖಿತ ಮಾಹಿತಿ ಒದಗಿಸಲಾಗುವುದು. ಪರಿಸರ ಪರ ಹೋರಾಟದಿಂದಲೇ ಇಂದಿನ ಸ್ಥಾನ ತಲುಪಿರುವ ಪರಿಸರ ಸಚಿವರಿಂದ ಸಕಾರಾತ್ಮಕ ಸ್ಪಂದನೆ ದೊರೆಯುವವ ಎಂದು ವಿಶ್ವಾಸವಿದೆ ಎಂದು ಸ್ವಾಮೀಜಿ ತಿಳಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಒಂದು ಹೋರಾಟಕ್ಕೆ ಸ್ವಾತಂತ್ರ ಸಂಗ್ರಾಮ ರೀತಿಯಲ್ಲಿ ಪ್ರತೀ ಹಳ್ಳಿಯ ಜನರನ್ನು ಎಬ್ಬಿಸಬೇಕು. ಒಂದು ತಿಂಗಳೊಳಗೆ ಈ ಬಗ್ಗೆ ರಥಯಾತ್ರೆ ಕೈಗೊಂಡು, ಎತ್ತಿನಹೊಳೆ ಯೋಜನೆ ವಿರುದ್ಧ ಹೋರಾಟ ತೀವ್ರಗೊಳಿಸ ಬೇಕು. ಎತ್ತಿನಹೊಳೆ ಯೋಜನೆ ವಿರುದ್ಧ ಹೋರಾಟ ತೀವ್ರಗೊಳಿಸವ ಉದ್ದೇಶದಿಂದ ಈ ಸಭೆ ಕರೆಯಲಾಗಿದ್ದು, ಗಂಗಾಜಲ ಸಂರಕ್ಷಣಾ ಕಾರ್ಯದಲ್ಲಿ ಪ್ರಧಾನಿ ಜತೆ ಕೈಜೋಡಿಸಿರುವ ಸ್ವಾಮೀಜಿ ಅವರು ನಮ್ಮ ಹೋರಾಟಕ್ಕೆ ಮಾರ್ಗದರ್ಶನ ನೀಡುವ ಮೂಲಕ ನಮ್ಮ ಹೋರಾಟಕ್ಕೆ ಶಕ್ತಿ ತುಂಬ ಬೇಕು ಎಂದವರು ಹೇಳಿದರು. ರಾಜ್ಯ ಸರಕಾರ ತಕ್ಷಣ ಯೋಜನೆಯ ಕಾಮಗಾರಿ ನಿಲ್ಲಿಸಿ ಜಿಲ್ಲೆಯ ಜನರ ಜತೆ ಸಂವಾದ ನಡೆಸಬೇಕು ಎಂದು ನಳಿನ್ ಕುಮಾರ್ ಕಟೀಲ್ ಅವರಿ ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ,ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟ ಸಮಿತಿ ಸಂಚಾಲಕ ಡಾ.ನಿರಂಜನ ರೈ, ಜಲತಜ್ಞ ಎಸ್.ಜಿ.ಮಯ್ಯ, ಅನ್ವರ್ ಮಾಣಿಪ್ಪಾಡಿ, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮುಖಂಡರಾದ ಎಂ.ಜಿ. ಹೆಗಡೆ, ಡಾ. ಅಣ್ಣಯ್ಯ ಕುಲಾಲ್ ಮುಂತಾದವರು ಸಭೆಯಲ್ಲಿ ತಮ್ಮ ಅಭಿಪ್ರಾಯ ಮಡಿಸಿದರು. ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಕಾನೂನು ಸಲಹೆಗಾರ ದಿನಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Comments are closed.