ಬೆಂಗಳೂರು: ಕೃಷ್ಣರಾಜ ಸಾಗರ ಅಣೆಕಟ್ಟು ಕಟ್ಟಿದ್ದು ನಾವು, ಆದರೆ ನಾವೇ ನೀರನ್ನು ಬಳಕೆ ಮಾಡಲಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ.
ಗಾಂಧಿ ಜಯಂತಿ ನಿಮಿತ್ತ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ ತಮಿಳುನಾಡಿಗೆ ನೀರು ಬಿಡುವಂತೆ ಪದೇ ಪದೇ ಆದೇಶ ಮಾಡುತ್ತಿರುವ ಸುಪ್ರೀಂಕೋರ್ಟ್ ನಡೆ ವಿರುದ್ಧ ಹತಾಶೆ ವ್ಯಕ್ತಪಡಿಸಿದರು.
ಈ ವೇಳೆ ನೇರವಾಗಿ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, “ಕರ್ನಾಟಕದ ರಾಜ್ಯದ ರೈತರಿಗೆ ಅನುಕೂಲವಾಗಲೆಂದು ಕೃಷ್ಣ ರಾಜ ಸಾಗರ ಅಣೆಕಟ್ಟನ್ನು ಮೈಸೂರು ರಾಜವಂಶಸ್ಥರು ಬಹಳ ಕಷ್ಟಪಟ್ಟು ಕಟ್ಟಿದರು. ತಮ್ಮ ರಾಜಮನೆತನದ ಅಪರೂಪದ ಚಿನ್ನಾಭರಣಗಳನ್ನು ಮಾರಿ ಈ ಅಣೆಕಟ್ಟನ್ನು ಕಟ್ಟಿದರು. ಆದರೆ ಈಗ ಪರಿಸ್ಥಿತಿ ಹೇಗಿದೆ ಎಂದರೆ ನಾವು ಕಟ್ಟಿದ ಜಲಾಶಯಿಂದ ನಾವೇ ನೀರನ್ನು ಬಳಸಿಕೊಳ್ಳಲಾಗುತ್ತಿಲ್ಲ. ಕರ್ನಾಟಕದಲ್ಲಿ ಕುಡಿಯುವ ನೀರಿಲ್ಲ, ಹೀಗಾಗಿ ಪ್ರಸ್ತುತ ಇರುವ ನೀರನ್ನು ಕೃಷಿ ಬಿಟ್ಟು ಕುಡಿಯುವ ಸಲುವಾಗಿ ಮಾತ್ರ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
ಇದನ್ನು ಸುಪ್ರೀಂ ಕೋರ್ಟ್ ನಲ್ಲಿಯೂ ಸಾಕಷ್ಟು ಬಾರಿ ಹೇಳಿದ್ದೇವೆ. ಆದರೂ ಸುಪ್ರೀಂ ಕೋರ್ಟ್ ಗೆ ನಮ್ಮ ಸಂಕಷ್ಟ ಅರ್ಥವಾಗುತ್ತಿಲ್ಲ. ಪದೇ ಪದೇ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ಮಾಡುತ್ತಿದೆ. ಹೀಗಾಗಿ ಹಾರಂಗಿ, ಕಬಿನಿ, ಹೇಮಾವತಿ ಮತ್ತು ಕೆಆರ್ ಎಸ್ ನಮ್ಮ ಜಲಾಶಯಗಳೇ ಆಗಿದ್ದರೂ, ಅದರಲ್ಲಿನ ನೀರನ್ನು ನಮ್ಮ ರೈತರಿಗೆ ನೀಡಲಾಗುತ್ತಿಲ್ಲ. ನಾವು ನೀರು ಶೇಖರಣೆ ಮಾಡಿ ತಮಿಳುನಾಡಿಗೆ ಬಿಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಹತಾಶೆ ವ್ಯಕ್ತಪಡಿಸಿದ್ದಾರೆ.
ಕುಡಿಯಲು ನೀರಿಲ್ಲ.. ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಿದರೆ ನಮ್ಮನ್ನು ಕೋರ್ಟ್ ವಿಲನ್ ರೀತಿಯಲ್ಲಿ ನೋಡುತ್ತಿದೆ. ಕಾವೇರಿ ವಿಚಾರದಲ್ಲಿ ವಿಲನ್ ಆಗಿದ್ದೇವೆ, ನಮ್ಮ ಸಂಕಷ್ಟ ಮಾತ್ರ ಕೋರ್ಟ್ಗೆ ಅರ್ಥವಾಗ್ತಿಲ್ಲ. ನೀರು ಬಿಡಲೇಬೇಕು ಎಂದು ಸುಪ್ರೀಂಕೋರ್ಟ್ ಹೇಳುತ್ತಿದೆ. ಹೀಗಾಗಿ ಗಾಂಧಿ ಮಾರ್ಗದಲ್ಲಿ ಹೋರಾಡಿ ನ್ಯಾಯ ಪಡೆಯುವುದೊಂದೇ ನಮ್ಮ ಮುಂದಿರುವ ಮಾರ್ಗ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದೇವೇಳೆ, ಸುಪ್ರೀಂಕೋರ್ಟ್ ಮೇಲೆ ನಮಗೆ ನಂಬಿಕೆ ಇದೆ, ಗೌರವವಿದೆ. ಆದರೆ, ಜನಸಾಮಾನ್ಯರ ಬದುಕಿಗಾಗಿ ನೀರು ಬೇಕು ಎಂದು ಸಿಎಂ ಹೇಳಿದ್ದಾರೆ.
ಕರ್ನಾಟಕ
Comments are closed.