ಕರಾವಳಿ

ಪಿಯುಸಿ ವಿದ್ಯಾರ್ಥಿನಿ ಬಾವಿಗೆ ಹಾರಿ ಆತ್ಮಹತ್ಯೆ : ಪ್ರೇಮ ವೈಫಲ್ಯ ಶಂಕೆ..?

Pinterest LinkedIn Tumblr

sushmita_sucide_1

ಬೆಳ್ತಂಗಡಿ, ಅ.09 : ಖೋಖೋ ಪಂದ್ಯಾವಳಿಯಲ್ಲಿ ಅತ್ಯುತ್ತಮ ಸಾಧನೆಗೈದು ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದಲ್ಲಿ ನಿನ್ನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು ಗ್ರಾಮದ ಜಂತಿಗೋಳಿ ಮೋಹಾನಂದ ಭಂಡಾರಿ ಹಾಗೂ ಪ್ರೇಮ ದಂಪತಿಯ ಪುತ್ರಿ ಸುಶ್ಮಿತಾ(17) ಎಂದು ಗುರುತಿಸಲಾಗಿದೆ.

ಈಕೆ ಶುಕ್ರವಾರ ರಾತ್ರಿ ಮನೆಯವರೊಂದಿಗೆ ಊಟ ಮಾಡಿ ಮಲಗಿದ್ದು, ಶನಿವಾರ ಬೆಳಿಗ್ಗೆ ನಾಪತ್ತೆಯಾಗಿದ್ದಳು. ಮನೆಯವರು ಹುಡುಕಾಟ ನಡೆಸಿದಾಗ ಮನೆಯ ಮುಂಭಾಗದ ಬಾವಿಯಲ್ಲಿ ಸುಷ್ಮಿತಾ ಮೃತದೇಹ ಪತ್ತೆಯಾಗಿದೆ.

ಸುಷ್ಮಿತಾ ಕೊಕ್ರಾಡಿ ಸರಕಾರಿ ಪ.ಪೂ. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದರು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭಾನ್ವಿತಳಾಗಿದ್ದ ಸುಶ್ಮಿತಾ ಇತ್ತೀಚೆಗೆ ಮಂಗಳೂರಿನ ಕಪಿತಾನಿಯೋ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಅತ್ಯುತ್ತಮ ಸಾಧನೆಗೈದು ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದ್ದರು. ಸ್ಥಳಕ್ಕೆ ವೇಣೂರು ಪೋಲಿಸರು, ಬೆಳ್ತಂಗಡಿ ತಹಸೀಲ್ದಾರ ತಿಪ್ಪೇಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಿಯಕರನ ಜೊತೆ ಜಗಳ ಆತ್ಮಹತ್ಯೆಗೆ ಕಾರಣವಾಯಿತೇ..?

ಸುಷ್ಮಿತಾ ಮಂಗಳೂರಿನಲ್ಲಿ ಉದ್ಯೋಗ ಹೊಂದಿರುವ ಯುವಕನನ್ನು ಪ್ರೀತಿಸುತ್ತಿದ್ದು ಇತ್ತೀಚೆಗೆ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತೆನ್ನಲಾಗಿದೆ. ಶುಕ್ರವಾರ ತಡರಾತ್ರಿಯವರೆಗೂ ಸುಷ್ಮಿತಾ ಆತನ ಜೊತೆ ಚಾಟಿಂಗ್ ನಿರತಳಾಗಿದ್ದು ನೂರಾರು ಮೆಸೇಜ್‌ಗಳು ಇಬ್ಬರ ಮೊಬೈಲ್‌ನಿಂದಲೂ ಹರಿದಾಡಿದೆ.

ಪ್ರೇಮಿಯ ಜೊತೆಗಿನ ಜಗಳದಿಂದ ಇಂಥ ನಿರ್ಧಾರಕ್ಕೆ ಸುಷ್ಮಿತಾ ಬಂದಿರಬಹುದು ಎಂದು ಶಂಕಿಸಲಾಗಿದೆ. ಆತ್ಮಹತ್ಯೆ ಪ್ರಕರಣ ದಾಖಲಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಯುವಕನ ಹುಡುಕಾಟ ಆರಂಭಿಸಿದ್ದಾರೆ.

Comments are closed.