ಹೊಸದಿಲ್ಲಿ : ಮಿನರಲ್ ವಾಟರ್ ಹಾಗೂ ತಂಪು ಪಾನೀಯಗಳನ್ನು ಗರಿಷ್ಠ ಮಾರಾಟ ಬೆಲೆಗಿಂತ ಅಧಿಕ ದರಕ್ಕೆ ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರಕಾರ ನಿರ್ಧರಿಸಿದೆ. ವಿಮಾನ ನಿಲ್ದಾಣಗಳಲ್ಲಿ, ರೆಸ್ಟೋರೆಂಟ್ಗಳಲ್ಲಿ ಹಾಗೂ ಮಲ್ಟಿಪ್ಲೆಕ್ಸ್ ಸೇರಿದಂತೆ ವಿವಿಧೆಡೆಗಳಲ್ಲಿ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ, ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ರಾಮ್ವಿಲಾಸ್ ಪಾಸ್ವಾನ್ ಹೇಳಿದ್ದಾರೆ.
ಗ್ರಾಹಕರ ಸಾಮಾನ್ಯ ಅಭಿಪ್ರಾಯದಂತೆ, ಮಿನರಲ್ ವಾಟರ್ ಬಾಟಲಿಗಳನ್ನು ಗರಿಷ್ಠ ಮಾರಾಟ ಬೆಲೆಗಿಂತ ಶೇಕಡ 10-20ರಷ್ಟು ಅಧಿಕ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆಲ ಬಾಟಲಿಗಳಲ್ಲಿ ಗರಿಷ್ಠ ದರ ನಮೂದಿಸಿರುವುದೂ ಇಲಲ್ಲ ಎಂದು 47ನೆ ವಿಶ್ವ ಗುಣಮಟ್ಟ ದಿನಾಚರಣೆ ಸಮಾರಂಭದ ವೇಳೆ ಮಾತನಾಡಿದ ಸಚಿವರು ವಿವರಿಸಿದ್ದಾರೆ.
ಕಾನೂನು ಮಾಪನ ಇಲಾಖೆಯ ಸೆಕ್ಷನ್ 36ರ ಅನ್ವಯ ಪ್ಯಾಕ್ ಮಾಡಿದ ವಸ್ತುಗಳನ್ನು ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ, 25 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಎರಡನೆ ಬಾರಿ ಇಂಥ ತಪ್ಪು ಎಸಗಿದರೆ 50 ಸಾವಿರ ರೂ. ದಂಡ ವಿಧಿಸಲಾಗುವುದು. ಇದು ಮರುಕಳಿಸಿದರೆ 1 ಲಕ್ಷ ರೂ. ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.
ಈ ಕಾಯ್ದೆ 2009ರಲ್ಲೇ ಜಾರಿಗೆ ಬಂದಿದ್ದರೂ, ಗ್ರಾಹಕರ ಹಿತರಕ್ಷಿಸುವ ಈ ಕಾಯ್ದೆ ಬಗ್ಗೆ ಜಾಗೃತಿ ಇಲ್ಲ. ಆದ್ದರಿಂದ ವ್ಯಾಪಾರಿಗಳು ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
Comments are closed.