ಬೆಂಗಳೂರು, ನ. ೩- ಟಿಪ್ಪು ಜಯಂತಿ ಆಚರಣೆಗೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿರುವ ಮಧ್ಯೆಯೇ ಹೈಕೋರ್ಟ್ ಟಿಪ್ಪು ಜಯಂತಿ ಸಂಬಂಧ ಸರ್ಕಾರಕ್ಕೆ ಬೆವರಿಳಿಸಿದ ಘಟನೆ ನಡೆದಿದೆ.
ಟಿಪ್ಪು ಜಯಂತಿ ಆಚರಣೆ ಏಕೆ ಮಾಡುತ್ತೀರಿ, ಅದರಿಂದ ಪ್ರಯೋಜನವಾದರೂ ಏನು, ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನೆನ್ನುವುದು ಸರಿಯೇ ಎಂಬಿತ್ಯಾದಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಅವರ ಪ್ರಶ್ನೆಗೆ ರಾಜ್ಯ ಸರ್ಕಾರ ತಬ್ಬಿಬ್ಬಾಗುವಂತಾಯಿತು. ಸರ್ಕಾರದ ಪರವಾಗಿ ವಾದ ಮಂಡಿಸುತ್ತಿದ್ದ ಅಡ್ವೊಕೇಟ್ ಜನರಲ್ ಮಧುಸೂದನ್ ನಾಯಕ್, ಇದು ಸರ್ಕಾರದ ನೀತಿ-ನಿರೂಪಣೆಯ ವಿಷಯ. ಈ ಬಗ್ಗೆ ಇನ್ನಷ್ಟು ವಿವರ ನೀಡಲು ಕಾಲಾವಕಾಶ ಬೇಕು ಎಂದು ಮನವಿ ಮಾಡಿಕೊಂಡರು.
* ಈ ತಿಂಗಳ 8ರೊಳಗೆ ಸೂಕ್ತ ನಿರ್ಧಾರ ಕೈಗೊಳ್ಳುಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ
* ನಾಳೆ ಮುಖ್ಯ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಲು ಕೂಡ ಸೂಚನೆ
* ಟಿಪ್ಪು ಜಯಂತಿಯನ್ನು ಸರ್ಕಾರ ಏಕೆ ಆಚರಿಸುತ್ತದೆ.- ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ಪ್ರಶ್ನೆ
* ಟಿಪ್ಪು ಸಂಬಂಧಿಕರು ಕೊಲ್ಕತ್ತಾದ ತಮ್ಮ ಮನೆ ಬಳಿಯೇ ವಾಸವಾಗಿದ್ದಾರೆ – ಮುಖ್ಯ ನ್ಯಾಯಮೂರ್ತಿ
* ಜಯಂತಿ ಆಚರಣೆ ಸಂಬಂಧ ಇನ್ನಷ್ಟು ವಿವರಣೆ ನೀಡಲು ಅಡ್ವಕೇಟ್ ಜನರಲ್ ಅವರಿಂದ ಕಾಲಾವಕಾಶ
* ಕೊಡವರು ಹಾಗೂ ಕೊಂಕಣಿ ಸಮುದಾಯದವರನ್ನು ಕೊಂದ ಟಿಪ್ಪುವಿನ ಜಯಂತಿ ಬೇಡ
* ಅರ್ಜಿದಾರರ ಪರ ವಕೀಲರಿಂದ ಹೈಕೋರ್ಟ್‌ಗೆ ಮನವಿ
ಟಿಪ್ಪು ಜಯಂತಿಯನ್ನು ಈ ತಿಂಗಳ 10 ರಂದು ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವ ಕ್ರಮಕ್ಕೆ ಮುಖ್ಯ ನ್ಯಾಯಮೂರ್ತಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ತಿಂಗಳ 8ರ ಒಳಗೆ ಟಿಪ್ಪು ಜಯಂತಿ ಆಚರಿಸುವ ಸಂಬಂಧ ಪರಿಶೀಲಿಸಿ ನಿರ್ಧರಿಸಿ ಎಂದು ಮುಖ್ಯ ಕಾರ್ಯದರ್ಶಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಅಲ್ಲದೆ ಟಿಪ್ಪು ಜಯಂತಿ ಆಚರಣೆಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರರಿಗೆ ಟಿಪ್ಪು ಜಯಂತಿ ಆಚರಣೆ ಸಂಬಂಧ ನಾಳೆ ಬೆಳಿಗ್ಗೆ ಮುಖ್ಯ ಕಾರ್ಯದರ್ಶಿಗಳಿಗೆ ಅರ್ಜಿ ಸಲ್ಲಿಸಿ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಸೂಚನೆ ನೀಡಿದ್ದಾರೆ.
ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರ ಆಚರಣೆ ಮಾಡುವುದಕ್ಕೆ ಪ್ರತಿಪಕ್ಷ ಬಿಜೆಪಿ ಸೇರಿದಂತೆ ವಿವಿಧ ಸಂಘಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಅಲ್ಲದೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ, ಹೋರಾಟವೂ ನಡೆದಿತ್ತು. ಬಿಜೆಪಿ ಈ ತಿಂಗಳ 8 ರಂದು ರಾಜ್ಯಾದ್ಯಂತ ಟಿಪ್ಪು ಜಯಂತಿಯನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಟಿಪ್ಪು ಜಯಂತಿ ಆಚರಣೆ ಮಾಡುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ನಿನ್ನೆಯೂ ಈ ಸಂಬಂಧ ವಿಚಾರಣೆ ನಡೆದು ಇಂದಿಗೆ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಕಾಯ್ದಿರಿಸಿದ್ದರು. ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ವಾದ ಮಂಡಿಸಿದ್ದರು.
ಟಿಪ್ಪು ಜಯಂತಿಯನ್ನು ಆಚರಿಸುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿ, ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಎನ್ನುವುದು ಸರಿಯೇ. ಆತನೊಬ್ಬ ಸಂಸ್ಥಾನದ ರಾಜನಷ್ಟೇ. ಟಿಪ್ಪು ಸಂಬಂಧಿಕರು ಕೊಲ್ಕತ್ತಾದಲ್ಲಿರುವ ನನ್ನ ಮನೆಯ ಪಕ್ಕದಲ್ಲೇ ವಾಸ ಮಾಡುತ್ತಿದ್ದಾರೆ. ಟಿಪ್ಪು ಜಯಂತಿಯನ್ನು ಯಾತಕ್ಕಾಗಿ ಆಚರಿಸುತ್ತಿದ್ದೀರಿ ಎಂದು ಅಡ್ವೊಕೇಟ್ ಜನರಲ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಆಗ ಅಡ್ವೊಕೇಟ್ ಜನರಲ್ ಮಧುಸೂದನ್ ನಾಯಕ್, ಟಿಪ್ಪು ಜಯಂತಿ ಆಚರಣೆ ಸರ್ಕಾರದ ನೀತಿ ನಿರೂಪಣೆಯಾಗಿದೆ. ಕಾಲಾವಕಾಶ ಸಲ್ಲಿಸಲು ಸಮಯಾವಕಾಶ ಕೊಡಿ ಎಂದು ಮನವಿ ಮಾಡಿದರು.
ಇದಕ್ಕೆ ಅರ್ಜಿದಾರರ ಪರ ವಕೀಲ ಸಜನ್ ಪೂವಯ್ಯ, ಟಿಪ್ಪು ಸುಲ್ತಾನನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸುವುದು ಸರಿಯಲ್ಲ. ಆತ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ. ಆತನ ಆಳ್ವಿಕೆಯಲ್ಲಿ ಅನೇಕ ಕೊಡವರು ಹಾಗೂ ಕೊಂಕಣಿ ಸಮುದಾಯದವರನ್ನು ಕೊಂದು ಹಾಕಿದ್ದಾನೆ. ಇಂತಹವನ ಜಯಂತಿಯನ್ನು ಆಚರಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿಕೊಂಡರು.
ಅರ್ಜಿದಾರರ ಪರ ವಕೀಲ ಹಾಗೂ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಅವರ ವಾದ- ಪ್ರತಿವಾದನನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಅವರು ಟಿಪ್ಪು ಜಯಂತಿಯನ್ನು ಸರ್ಕಾರ ಆಚರಿಸಬೇಕೆ ಬೇಡವೇ ಎನ್ನುವ ಕುರಿತು ಈ ತಿಂಗಳ 8ರೊಳಗೆ ನಿರ್ಧರಿಸಿ ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೆ ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳಿಗೆ ನಾಳೆ ಮನವಿ ಸಲ್ಲಿಸಿ ಎಂದು ಅರ್ಜಿದಾರರಿಗೆ ಸೂಚನ ನೀಡಿದ್ದಾರೆ.
Comments are closed.