ಶಶಿಕಲಾ ನಟರಾಜನ್. ಈ ಹೆಸರು ಕೇಳಿದೊಡನೆಯೇ ಇವರು ಜಯಲಲಿತಾರ ಆಪ್ತ ಗೆಳತಿಯಲ್ವೇ ಎಂದು ಎಂಥವರೂ ಹೇಳುವುದುಂಟು. ಈ ಶಶಿಕಲಾ ಅವರು ಜಯಲಲಿತಾರ ಆಪ್ತ ಗೆಳತಿಯಷ್ಟೇ ಅಲ್ಲ, ಜಯಾರ ಕಣ್ಣು, ಕಿವಿ, ಮೂಗು, ಬಾಯಿ ಎಲ್ಲ ಆಗಿದ್ದುಂಟು ಎಂದು ಟೀಕಾಕಾರರು ಕುಹಕವಾಡುವುದೂ ಉಂಟು.
ಶಶಿಕಲಾ ಮತ್ತು ಜಯಲಲಿತಾ ಅವರ ಗೆಳೆತನ ಆರಂಭವಾಗಿದ್ದು 80ರ ದಶಕದಲ್ಲಿ. ಜಯಲಲಿತಾ ಅವರು ಎಂಜಿಆರ್ಜತೆ ರಾಜಕೀಯದಲ್ಲಿ ಅವರ ಆಪ್ತರಾಗಿ ಆಗಿನ್ನೂ ಭಾರಿ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದರು. ಈ ವೇಳೆ ವಿಡಿಯೋಗ್ರಫಿಯಲ್ಲಿ ಅತೀವ ಆಸಕ್ತಿ ಹೊಂದಿದ್ದ ಶಶಿಕಲಾ ಅವರು, ‘ನಿಮ್ಮ ಡಾಕ್ಯುಮೆಂಟರಿ ಮಾಡುತ್ತೇನೆ’ ಎಂದು ಒಮ್ಮೆ ಜಯಾರನ್ನು ಸಂಪರ್ಕಿಸಿದರು. ಆಗ ಉಭಯ ಮಹಿಳೆಯರ ನಡುವೆ ಆದ ಪರಿಚಯ ಇಂದು ಈ ಪರಿಯ ಗೆಳೆತನದ ಮಟ್ಟಕ್ಕೆ ಬೆಳೆದು ನಿಂತಿತು. ಜಯಲಲಿತಾರ ಕಷ್ಟಕಾಲ ಮತ್ತು ಅವರ ಅತ್ಯಂತ ಉತ್ತುಂಗದ ದಿನ – ಎರಡರಲ್ಲೂ ಜತೆಗಿದ್ದವರು ಶಶಿಕಲಾ. ವಿಶೇಷವೆಂದರೆ ಜಯಾರ ಮನೆಯಲ್ಲೇ ಶಶಿಕಲಾ ಇರುತ್ತಿದ್ದರು. ಈ ನಡುವೆ 2011ರಲ್ಲಿ ಒಮ್ಮೆ ಜಯಾರ ಕೆಂಗಣ್ಣಿಗೆ ಗುರಿಯಾಗಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದೂ ಉಂಟು. ಮನೆಯಿಂದಲೂ ಶಶಿಕಲಾರನ್ನು ಜಯಾ ಹೊರಹಾಕಿದ್ದರು. ಆದರೆ ಒಂದೇ ವರ್ಷದಲ್ಲಿ ಜಯಾ ಮನಕರಗಿ ಮತ್ತೆ ಶಶಿಕಲಾರನ್ನು ತಮ್ಮ ಹತ್ತಿರ ಕರೆಸಿಕೊಂಡಿದ್ದರು.
ಜಯಾ ಹಾಗೂ ಶಶಿಕಲಾ ಇಬ್ಬರೂ ಸಲಿಂಗಿಗಳು ಎಂಬ ವದಂತಿಯೂ ಒಂದು ಕಾಲಕ್ಕೆ ತಮಿಳುನಾಡಿನಲ್ಲಿ ಹಬ್ಬಿತ್ತು. ಜಯಲಲಿತಾ ಅವರು ಆರೋಗ್ಯ ಸಮಸ್ಯೆ ಸಂಬಂಧ ವೈದ್ಯರೊಬ್ಬರಿಗೆ ಬರೆದಿದ್ದರು ಎನ್ನಲಾದ ಪತ್ರದಿಂದ ಈ ರೀತಿ ಆಗಿತ್ತು. ಆದರೆ ಅಂತಹ ಪತ್ರವನ್ನು ಬರೆದಿದ್ದನ್ನು, ಸ್ವೀಕರಿಸಿದ್ದನ್ನು ಜಯಾ, ವೈದ್ಯ ಇಬ್ಬರೂ ನಿರಾಕರಿಸಿದ್ದರು. ಅಲ್ಲದೆ ತಾವು ಸಲಿಂಗಿ ಎಂಬ ಆರೋಪಗಳನ್ನು ಜಯಾ ತಿರಸ್ಕರಿಸಿದ್ದರು.
ಜಯಾ ಜತೆಗಿನ ಆಪ್ತತೆಯನ್ನು ಬಳಸಿಕೊಂಡು ಶಶಿಕಲಾ ಅವರು ಸಂವಿಧಾನೇತರ ಶಕ್ತಿಯಾಗಿ ತಮಿಳುನಾಡಿನಲ್ಲಿ ಮೆರೆಯುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬಂದಿದ್ದವು. ಆದರೆ ಜಯಲಲಿತಾ ಅವಕ್ಕೆಲ್ಲಾ ತಲೆಕೆಡಿಸಿಕೊಂಡಿರಲಿಲ್ಲ. ಅದೂ ಅಲ್ಲದೆ ಶಶಿಕಲಾ ಅವರನ್ನು ಜತೆಯಲ್ಲಿ ಏಕೆ ಇಟ್ಟುಕೊಂಡಿದ್ದೇನೆ ಎಂಬುದಕ್ಕೆ ಒಮ್ಮೆ ಜಯಲಲಿತಾ ಉತ್ತರವನ್ನೂ ಕೊಟ್ಟಿದ್ದರು. ‘ರಾಜಕಾರಣಿಗಳಿಗೆ ತನ್ನನ್ನು ಅಥವಾ ತನ್ನ ಮನೆಯನ್ನು ನೋಡಿಕೊಳ್ಳಲು ಯಾರಾದರೂ ಬೇಕಾಗುತ್ತದೆ. ಪುರುಷ ರಾಜಕಾರಣಿಗಳಿಗೆ ಹೆಂಡತಿ ಇರುತ್ತಾಳೆ. ಮಹಿಳಾ ರಾಜಕಾರಣಿಗೆ ಪತಿ ಅಥವಾ ಸೋದರ ಇರುತ್ತಾರೆ. ಆದರೆ ನನಗೆ ಯಾರೂ ಇಲ್ಲ. ಹೀಗಾಗಿ ಶಶಿಕಲಾ ನನ್ನ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಾರೆ. ನಾನು ರಾಜಕಾರಣದ ಮೇಲೆ ಗಮನ ಕೇಂದ್ರೀಕರಿಸಬಹುದು. ಎಂಜಿಆರ್ನಿಧನಾನಂತರ ನಾನು ಸಂಕಷ್ಟದ ಘಟ್ಟದಲ್ಲಿದ್ದೆ. ಯಾರೊಬ್ಬರೂ ಸಹಾಯಕ್ಕೆ ಇರಲಿಲ್ಲ. ಅಂತಹ ವೇಳೆ ಶಶಿಕಲಾ ಹಾಗೂ ಪತಿ ನಟರಾಜನ್ಇಬ್ಬರೂ ಸಹಾಯಹಸ್ತ ಚಾಚಿದರು. ನಾನು ಒಪ್ಪಿದೆ, ನಾವೆಲ್ಲಾ ಒಟ್ಟಿಗೆ ಬಾಳಲು ಆರಂಭಿಸಿದೆವು’ ಎಂದು ತಿಳಿಸಿದ್ದರು. ಜಯಲಲಿತಾ ಮನೆ ಸೇರಿಕೊಂಡ ಬಳಿಕ ತಮ್ಮ ಕಡೆಯ ಜನರನ್ನೇ ಶಶಿಕಲಾ ಕೆಲಸಕ್ಕೆ ಸೇರಿಸಿಕೊಂಡಿದ್ದರು. ಜಯಲಲಿತಾಗೆ ಸಂಬಂಧಿಸಿದ ಹಣಕಾಸು ವ್ಯವಹಾರಗಳನ್ನು ಶಶಿಕಲಾ ಪತಿ ನಟರಾಜನ್ನೋಡಿಕೊಳ್ಳುತ್ತಿದ್ದರು. ನಟರಾಜನ್ವ್ಯಾಪ್ತಿ ಮೀರಿ ವರ್ತಿಸಿ ತೊಡಗಿದ ಹಿನ್ನೆಲೆಯಲ್ಲಿ ಜಯಲಲಿತಾ ಅವರು ಆತನನ್ನು ಮನೆಯಿಂದ ಹೊರಹಾಕಿದರು. ಆದರೂ ಶಶಿಕಲಾ ಮಾತ್ರ ಜಯಾ ಜತೆಗೇ ಉಳಿದರು. ಜಯಾಗಾಗಿ ಪತಿಯನ್ನೇ ತ್ಯಾಗ ಮಾಡಿದ್ದರು.
Comments are closed.