ಜಕಾರ್ತ: ಇಂಡೋನೇಷ್ಯಾದ ಅಕೇಹ್ ಪ್ರಾಂತ್ಯದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ ಕನಿಷ್ಠ 25 ಮಂದಿ ಸಾವಿಗೀಡಾಗಿದ್ದು, ನೂರಾರು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.
ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.5ರಷ್ಟು ದಾಖಲಾಗಿದ್ದು, ಭೂಕಂಪನದ ತೀವ್ರತೆಗೆ ಹಲವು ಕಟ್ಟಡಗಳು ನೆಲಕ್ಕುರುಳಿವೆ. ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿರುವ ಅಕೇಹ್ ಪ್ರಾಂತ್ಯದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಹಲವಾರು ಮನೆಗಳು ನೆಲಸಮಗೊಂಡಿವೆ. ಪರಿಣಾಮ 25ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಅವಶೇಷಗಳಡಿಯಲ್ಲಿ ನೂರಾರು ಮಂದಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.
ಸುಮಾತ್ರಾ ದ್ವೀಪದ ಪುಟ್ಟ ಪಟ್ಟಣವಾಗಿರುವ ಮ್ಯೂರೆಡ್ಯು ಪಟ್ಟಣಕ್ಕೆ ಅತೀ ಹೆಚ್ಚು ಹಾನಿಯಾಗಿದ್ದು, ಮುಸ್ಲಿಂ ಸಮುದಾಯವದವರು ಹೆಚ್ಚಾಗಿ ನೆಲೆಸಿರುವ ಇಲ್ಲಿ ಬೆಳಗಿನ ಪ್ರಾರ್ಥನೆ ಸಿದ್ಧವಾಗುತ್ತಿರುವಾಗಲೇ ಭೂಕಂಪನ ಸಂಭವಿಸಿದೆ ಎಂದು ತಿಳಿದುಬಂದಿದೆ. ಭೂಕಂಪನದಿಂದಾಗಿ ಇಲ್ಲಿನ ಪ್ರಮುಖ ಮಸೀದಿಯ ಗೋಪುರ ಕುಸಿದಿದ್ದು, ಹಲವರು ಗಾಯಗೊಂಡಿದ್ದಾರೆ. ಪ್ರಸ್ತುತ ಅಗ್ನಿಶಾಮಕ ದಳಗಳು ಹಾಗೂ ರಾಷ್ಟೀಯ ವಿಪತ್ತು ನಿಗ್ರಹದಳ ಸಿಬ್ಬಂದಿಗಳು ದೌಡಾಯಿಸಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಇನ್ನು ಸ್ಥಳೀಯ ಆಸ್ಪತ್ರೆಗಳಲ್ಲಿ ಸುಮಾರು 100ಕ್ಕೂ ಅಧಿಕ ಗಾಯಾಳುಗಳು ದಾಖಲಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆಸಲಾಗುತ್ತಿದೆ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಸ್ಥಳೀಯರು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಸುನಾಮಿ ಎಚ್ಚರಿಕೆ ಇಲ್ಲ
ಇನ್ನು ಪ್ರಬಲ ಭೂಕಂಪನ ಸಂಭವಿಸಿದ್ದರೂ ಹವಾಮಾನ ಇಲಾಖೆ ಯಾವುದೇ ಸುನಾಮಿ ಎಚ್ಚರಿಕೆ ನೀಡಿಲ್ಲ. ಸುಮಾತ್ರಾ ದ್ವೀಪದ ಭೂಭಾಗದಲ್ಲಿ ಭೂಕಂಪನ ಸಂಭವಿಸಿದ್ದು, ಇದರಿಂದ ಸುನಾಮಿ ಸಂಭವಿಸುವ ಭೀತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments are closed.