ಕರ್ನಾಟಕ

ಮಕ್ಕಳು ಬೆರಳು ಚೀಪುವುದು ಸಹಜ ಬೆಳವಣಿಗೆಯೇ ಅಥವಾ ಇದೊಂದು ಮಕ್ಕಳಲ್ಲಿ ಕಂಡುಬರುವ ಸಮಸ್ಯೆ.? … ಮುಂದೆ ಓದಿ…

Pinterest LinkedIn Tumblr

baby_tumb_biting

ಮಂಗಳೂರು: ಬೆರಳು ಚೀಪುವುದು ಒಂದು ವರ್ಷದೊಳಗಿನ ಮಗುವಿನಲ್ಲಿ ಒಂದು ಸಹಜ ಕ್ರಿಯೆ. ಮಗುವಿಗೆ ಹಸಿವಾದಾಗ ಅಥವಾ ಸಾಕಷ್ಟು ಆಹಾರ ಸಿಗದಿದ್ದಾಗ ಅಥವಾ ಏಕಾಂತದಲ್ಲಿದ್ದಾಗ ಬೆರಳು ಚೀಪಬಹುದು. ಬೆರಳು ಚೀಪುವುದು ಈ ವಯಸ್ಸಿನ ಮಕ್ಕಳಿಗೆ ಆನಂದ ನೀಡುವ ಹಾಗೂ ಸಮಾಧಾನವಾಗುವಂತೆ ಮಾಡುವ ಕ್ರಿಯೆಯಾಗಿದೆ. ಮಗು ಬೆಳೆದಂತೆ ಇದು ತನ್ನಷ್ಟಕ್ಕೆ ತಾನೇ ಕಡಿಮೆಯಾಗುತ್ತ ಹೋಗುವುದು.
3ರಿಂದ 5 ವರ್ಷದ ಕೆಲವು ಮಕ್ಕಳೂ ಬೆರಳು ಚೀಪುತ್ತಾರೆ. ಮಗು ದಣಿದಾಗ ಅಥವಾ ನಿದ್ರೆ ಹೋಗುವ ಸಮಯದಲ್ಲಿ ಹೀಗೆ ಮಾಡುವುದು ಸಹಜ.

ಆದರೆ 5 ವರ್ಷದ ವಯಸ್ಸಿನ ನಂತರವೂ ಮಗು ಬೆರಳು ಚೀಪುವುದನ್ನು ಮುಂದುವರೆಸಿದಲ್ಲಿ ಅದೊಂದು ನಿಜವಾದ ಸಮಸ್ಯೆಯಾಗಿ ಕಂಡು ಅದರ ಪರಿಹಾರಕ್ಕಾಗಿ ಸಕಲ ಪ್ರಯತ್ನಗಳನ್ನು ಪಾಲಕರು ಮಾಡಬೇಕಾದುದು ಅತ್ಯವಶ್ಯಕವಾಗಿದೆ.

ಈ ಸಂಧರ್ಭದಲ್ಲಿ ಪಾಲಕರು ಈ ಕೆಳಗಿನ ಅಂಶಗಳನ್ನು ಗಮನದಲ್ಲಿಡಬೇಕು.
*1-2 ವರ್ಷಗಳವರೆಗೆ ಬೆರಳು ಚೀಪುವುದು ಸಹಜ ಬೆಳವಣಿಗೆಯ ಹಂತವಾಗಿದ್ದು, ಇದೊಂದು ಸಮಸ್ಯೆಯಲ್ಲ. ಇದನ್ನು ಒತ್ತಾಯಪೂರ್ವಕವಾಗಿ ಬಿಡುವುದು ಅನಗತ್ಯವಷ್ಟೇ ಅಲ್ಲ, ಇದರಿಂದ ಮಗು ಬೆರಳು ಚೀಪುವುದರ ಬದಲಿಗೆ ಮತ್ತೊಂದು ಅಸಹ ಕ್ರಿಯೆಯಲ್ಲಿ ತೊಡಗುವ ಸಾಧ್ಯತೆಯಿದೆ. ಇಷ್ಟೇ ಅಲ್ಲ, ಮಗು ಹಸಿವಿನ ಬಾಧೆಯಿಂದ ಬಳಲುವ, ವಾಂತಿ ಮಾಡಿಕೊಳ್ಳುವ ಅಥವಾ ಹಟಮಾರಿ ಆಗುವ ಸಾಧ್ಯತೆ ಇದೆ.
*ಬೆರಳು ಚೀಪುವುದಕ್ಕಾಗಿ ಶಿಕ್ಷಿಸುವುದು ತಪ್ಪು. ಇದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ.
*5 ವರ್ಷದ ನಂತರ ಮಕ್ಕಳಲ್ಲಿ ಬೆರಳು ಚೀಪುವುದು ಮಗುವಿನ ಕಡೆಗೆ ಸರಿಯಾದ ಗಮನ ನೀಡದಿರುವುದರ, ಮಗುವಿನಲ್ಲಿ ಅಸುರಕ್ಷತೆಯ ಭಾವನೆ ಮೂಡಿಸಿರುವ ಅಥವಾ ಮಗುವಿಗೆ ಮೇಲಿಂದ ಮೇಲೆ ಬೇಸರ ತರುವಂತಹ ವಾತಾವರಣ ನಿರ್ಮಾಣ ಆದುದರ ಸಂಕೇತವಾಗಿದ್ದು ಮಗುವಿನ ಬಗ್ಗೆ ಹೆಚ್ಚು ಕಾಳಜಿ, ಪ್ರೀತಿ ಹಾಗೂ ತಿಳುವಳಿಕೆಯಿಂದ ನಡೆದುಕೊಂಡಲ್ಲಿ ಇದು ಬೇಗನೇ ಗುಣವಾಗಬಲ್ಲ ಸಮಸ್ಯೆಯಾಗಿದೆ.
* ಹಲ್ಲುಗಳು ಓರೆಕೋರೆಯಾಗಿ ಬೆಳೆಯುತ್ತವೆ, ಬೆರಳುಗಳಿಗೆ ಸೋಂಕು ಆಗುತ್ತದೆ ಎಂಬುದಕ್ಕೆಲ್ಲ ಹುರುಳಿಲ್ಲ. ಆದ್ದರಿಂದ ಮಗುವಿನ ಬೆರಳು ಚೀಪುವ ಅಭ್ಯಾಸಕ್ಕೆ ತಡೆ ಹಾಕಬೇಡಿ. ನಿಮಗೊಂದು ಗೊತ್ತೆ? ಮಗು ಗರ್ಭದಲ್ಲಿರುವಾಗಲೇ ಬೆರಳು ಚೀಪುವ ಅಭ್ಯಾಸವಿರುತ್ತದೆ. ಮಗು ಹಸಿವು ಆದಾಗ ತಿನ್ನುವ ಅಭ್ಯಾಸವನ್ನು ಬೆರಳು ಚೀಪುವ ಅಭ್ಯಾಸದಿಂದ ಕಲೆಯುತ್ತದೆ ಅಂತೆ. ಬೆರಳು ಚೀಪುವುದರಿಂದ ಮಗುವಿಗೆ ಹೆಚ್ಚಿನ ಸಂತೋಷ ಸಿಗುತ್ತದೆ ಹಾಗೂ ಹೆಚ್ಚಿನ ಗಲಾಟೆ ಮಾಡದೆ ನಿದ್ರೆಗೆ ಜಾರುತ್ತದೆ. ಇದು ತಾಯಿಗೆ ಹೆಚ್ಚಿ ಸಹಕಾರಿಯಾಗುತ್ತದೆ. ಮಗುವಿನ ಗಮನ ಬೆರಳು ಚೀಪುವುದರ ಮೇಲೆ ಇದ್ದರೆ ಹೆಚ್ಚಾಗಿ ಅಳುವುದಿಲ್ಲ. ಅದು ಮಗುವಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಬೆರಳು ಚೀಪುವ ಮಗು ತಾಯಿ ಹಾಲನ್ನು ಸಹ ಸರಿಯಾಗಿ ಕುಡಿಯುತ್ತದೆ. ಇದರಿಂದ ಮಗುವಿಗೆ ಹೆಚ್ಚಿನ ಪೌಷ್ಠಿಕ ಅಂಶ ದೊರೆಯುತ್ತದೆ.

ಬೆರಳು ಚೀಪುವುದ್ದಕ್ಕೆ ಕಾರಣವೇನು?
ಹಲವು ಸಂಶೋಧಕರು ಇದರ ಕುರಿತಾಗಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯಲ್ಲಿ ಬೆರಳು ಚೀಪುವಿಕೆ ಅಭ್ಯಾಸ ಒಂದು ಹಂತವೆಂದು ಹೇಳಲಾಗಿದೆ. ಇದಲ್ಲದೇ, ಸ್ತನ್ಯಪಾನವನ್ನು ಹೆಚ್ಚಿನ ವಯಸ್ಸಿನವರೆಗೆ ಮಾಡಿಸುವುದೂ ಬೆರಳು ಚೀಪುವಿಕೆಗೆ ಒಂದು ಕಾರಣವೆಂದು ಹೇಳಲಾಗಿದೆ.

ತಂದೆ ತಾಯಿಯರಿಂದ ದೊರಕಬೇಕಾದ ಪ್ರೀತಿ, ಮಮತೆಗಳು ಸಮರ್ಪಕವಾಗಿ ದೊರಕದಿದ್ದಲ್ಲಿ, ಮಕ್ಕಳ ಮನಸ್ಸಿನಲ್ಲಿ ಅಭದ್ರತೆಯ ಭಾವನೆ ಉಂಟಾಗುತ್ತದೆ. ಇದೂ ಬೆರಳು ಚೀಪುವಿಕೆಯ ದುರಭ್ಯಾಸಕ್ಕೆ ಕಾರಣ ಎಂದು ಮನೋವೈಜ್ಞಾನಿಕ ಸಂಶೋಧನೆಗಳು ಹೇಳುತ್ತವೆ. ಬೆಳವಣಿಗೆಯ ಸಮಯದಲ್ಲಿ ತಾಯಿಯಿಂದ ದೊರಕುವ ಆರೈಕೆ ಅತಿಮುಖ್ಯ.

ತಾಯಿಯು ಈ ಸಮಯದಲ್ಲಿ ವೃತ್ತಿ ಕಾರಣವಾಗಿ ಮಗುವನ್ನು ಮನೆಯಲ್ಲಿ ಬೇರೆಯವರ ಜತೆ ಬಿಟ್ಟು ಹೋಗುವುದರಿಂದ ಕೆಲವು ಮಕ್ಕಳ ಮನಸ್ಸಿನಲ್ಲಿ ಅಭದ್ರತೆಯ ಭಾವನೆ ಬೆಳೆಯುತ್ತದೆ. ಇದರಿಂದಲೂ ಮಕ್ಕಳು ಬೆರಳು ಚೀಪುವಿಕೆಯ ಅಭ್ಯಾಸಕ್ಕೆ ದಾಸರಾಗಬಹುದು. ಹೀಗೆ ಹಲವು ಕಾರಣಗಳನ್ನು ಸಂಶೋಧಕರು ಪ್ರಸ್ತಾಪಿಸಿದ್ದಾರೆ.

ಇದರ ದುಷ್ಪರಿಣಾಮಗಳೇನು?
ಬೆರಳು ಚೀಪುವಿಕೆಯಿಂದ ಮೇಲ್ದವಡೆಯ ಮೇಲೆ ಹೆಚ್ಚು ಒತ್ತಡ ಬಿದ್ದು, ಎದುರಿನಲ್ಲಿ ಉಬ್ಬು ಹಲ್ಲುಗಳು ಉಂಟಾಗಬಹುದು. ಇದರಿಂದ ಕೆಲವು ವಕ್ರದಂತತೆಯೂ ಉಂಟಾಗುತ್ತದೆ. ತುಟಿಗಳ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.

ಬೆರಳು ಚೀಪುವುದನ್ನು ಬಿಡಿಸುವುದು ಹೇಗೆ ?
– ಮಕ್ಕಳನ್ನು ಬೈದು, ಹೊಡೆದು ಈ ದುರಭ್ಯಾಸವನ್ನು ಬಿಡಿಸುವ ಪ್ರಯತ್ನಕ್ಕೆ ಕೈ ಹಾಕದಿರಿ.
– ಕೆಲವು ಮದ್ದುಗಳನ್ನು ಬೆರಳಿಗೆ ಲೇಪಿಸುವಂತಹ ತಂತ್ರಗಳೂ ಅಷ್ಟಾಗಿ ಸರಿಯಲ್ಲ.
– ಮೊದಲು ಕಾರಣವನ್ನು ತಿಳಿದು ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಉತ್ತಮ.
– ನಿಮ್ಮ ಮಗುವಿಗೆ ಬೆರಳು ಚೀಪುವುದು ಒಂದು ದುರಭ್ಯಾಸ ಎಂದು ಶಾಂತ ರೀತಿಯಲ್ಲಿ, ಅವರಿಗೆ ಮನದಟ್ಟಾಗುವಂತೆ ವಿವರಿಸಿ. ಚೀಪದೆ ಇದ್ದಾಗ ಹೊಗಳಿ, ಚೀಪದಿರಲು ಪ್ರೇರೇಪಿಸಿ.
– ಸದಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ನೋಡಿಕೊಳ್ಳಿ.
– ಮಕ್ಕಳ ಬೆರಳು ಚೀಪುವಿಕೆಯನ್ನು ಬಿಡಿಸುವ ಹಲವು ವಿಧಾನಗಳ ಬಗ್ಗೆ ಪರಿಣತಿ ಪಡೆದಿರುವ ಮಕ್ಕಳ ದಂತ ವೈದ್ಯರ ಸಲಹೆ ಪಡೆದು ನಿರ್ದಿಷ್ಟವಾದ ರೀತಿಯಲ್ಲಿ ಇದನ್ನು ಬಿಡಿಸುವುದು ಕ್ಷೇಮ

Comments are closed.