ಆರೋಗ್ಯ

1 ರಿಂದ 9 ತಿಂಗಳವರೆಗಿನ ಗರ್ಭಿಣಿಯ ಆರೈಕೆ ಬಗ್ಗೆ ಮಾಹಿತಿ

Pinterest LinkedIn Tumblr

9months_full_pic

ಮಂಗಳೂರು: “ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ” ಎನ್ನುವುದು ಲೋಕೋಕ್ತಿ. ಅದರಂತೆ “ಮಾತೃ ದೇವೋ ಭವ” ತಾಯಿಗಿಂತ ಮಿಗಿಲಾದ ದೇವರಿಲ್ಲ ಇನ್ನುವುದೂ ಕೂಡ ವಾಡಿಕೆಯಲ್ಲಿರುವ ಸಂಸ್ಕತ ನುಡಿ. ಇಷ್ಟೇ ಅಲ್ಲದೆ ಕಥೆ, ಕಾದಂಬರಿ, ಸಿನಿಮಾಗಳಲ್ಲಿ ಕೂಡ ಮಾತೃ ಪ್ರಾಧಾನ್ಯತೆಯನ್ನು ನಾವು ನೋಡಿರುತ್ತೇವೆ, ಕೇಳಿರುತ್ತೇವೆ ಹಾಗೂ ಓದಿರುತ್ತೇವೆ. ದೇವರು ತಾನು ಎಲ್ಲ ಕಡೆಯಲ್ಲಿಯೂ ಇದ್ದು ಮಕ್ಕಳ ರಕ್ಷಣೆಯನ್ನು ಮಾಡಲಾಗುವುದಿಲ್ಲವೆಂದು ತಾಯಿಯನ್ನು ಸೃಷ್ಟಿಸಿದನಂತೆ.

ಒಂಭತ್ತು ತಿಂಗಳು ಗರ್ಭದಲ್ಲಿ ಶಿಶುವಿನ ರಕ್ಷಣೆಯನ್ನು ನೀಡುವುದು ಮಹಿಳೆಯ ಜೀವನದ ಒಂದು ಸೂಕ್ಷ್ಮ ಹಾಗೂ ಮಹತ್ತರ ಘಟ್ಟ. ಇಲ್ಲಿ ತಾಯ್ತನದ ಅನುಭವವನ್ನು ಮಹಿಳೆ ಪಡೆಯುತ್ತಾಳೆ. ಇಷ್ಟೇ ಅಲ್ಲದೆ ಈ ಅವಧಿಯು ಮಹಿಳೆಯ ತ್ಯಾಗ ಜೀವನ ಹಾಗೂ ಸಹನಶೀಲತೆಯ ಸಂಕೇತ. “ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಂದಿರು ಇರಲು ಸಾಧ್ಯವಿಲ್ಲ” ಇನ್ನುವುದೂ ಕೂಡ ಒಂದು ಪ್ರಚಲಿತ ಸಂಸ್ಕತ ಸುಭಾಷಿತ. ಗರ್ಭಿಣಿ ಮಹಿಳೆ ಈ ಅವಧಿಯಲ್ಲಿ ಸೇವಿಸುವ ಆಹಾರ ಹಾಗೂ ವಿಹಾರಗಳ ಮೇಲೆ ಜನಿಸುವ ಶಿಶುವಿನ ಆರೋಗ್ಯವು ನಿರ್ಧಾರಿತವಾಗುತ್ತದೆ.

ಗರ್ಭಿಣಿ ಸೇವಿಸುವ ಆಹಾರವು ಪ್ರಧಾನವಾಗಿ ಮೂರು ಪ್ರಯೋಜನಗಳನ್ನು ಒದಗಿಸಬೇಕು.
1. ಗರ್ಭಿಣಿಯ ದೇಹದ ಪೋಷಣೆ
2. ಬೆಳೆಯುತ್ತಿರುವ ಶಿಶುವಿನ ಪೋಷಣೆ
3. ಮಗುವಿನ ಹಾಲುಣಿಸಲು ಸ್ತನಗಳ ಪೋಷಣೆ

ಗರ್ಭಿಣಿ ಸ್ತ್ರೀಯು ಅಧಿಕ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿದರೆ ಸಾಲದು. ಆಹಾರವು ಪೌಷ್ಟಿಕಾಂಶಯುಕ್ತವಾಗಿರಬೇಕು. ಅಲ್ಲದೆ ಗರ್ಭಿಣಿಯಲ್ಲಿ ರಕ್ತ ಕಣಗಳ ಉತ್ಪತ್ತಿ, ಕಬ್ಬಿಣಾಂಶಗಳ ದಾಸ್ತಾನು, ಪ್ರಸವ ವೇದನೆಯನ್ನು ಸಹಿಸಿಕೊಳ್ಳಲು ಶಾರೀರಿಕ ಹಾಗೂ ಮಾನಸಿಕ ಬಲ ಮಾಂಸಖಂಡಗಳಲ್ಲಿ ಬಲವನ್ನು ನೀಡುವಂತಿರಬೇಕು.

1.ಮೊದಲನೆಯ ತಿಂಗಳು: ಮೊದಲ ಮೂರು ತಿಂಗಳುಗಳಲ್ಲಿ ಸಾಮಾನ್ಯವಾಗಿ ಗರ್ಭಿಣಿ ಸ್ತ್ರೀಯರಲ್ಲಿ ವಾಂತಿ, ಸುಸ್ತು, ತಲೆ ಸುತ್ತು ಇತ್ಯಾದಿಗಳು ಇರುತ್ತವೆ. ಈ ತಿಂಗಳಿನಲ್ಲಿ ಹಾಲು ಪ್ರಮುಖವಾದ ಆಹಾರವಾಗಬೇಕು. ಸಿಹಿ, ಶೀತ, ದ್ರವ ಹಾಗೂ ಜೀರ್ಣಕ್ಕೆ ಹಗುರವಾದಂಥಹ ಆಹಾರ ಸೇವನೆ ಹಿತಕರ. ಹಣ್ಣಿನ ರಸ, ಗಂಜಿ, ಎಳನೀರು ಇತ್ಯಾದಿಗಳೂ ಕೂಡ ಈ ತಿಂಗಳಿನಲ್ಲಿ ಉತ್ತಮ. ಅಲ್ಲದೆ ಚೆನ್ನಾಗಿ ಬೆಂದ ಅನ್ನವನ್ನು ತೊವ್ವೆ ಅಥವಾ ಬೇಳೆಕಟ್ಟು ಇತ್ಯಾದಿಗಳೊಂದಿಗೆ ಅಥವಾ ಬೆಣ್ಣೆ, ತುಪ್ಪ, ಮೊಸರಿನೊಂದಿಗೆ ಸೇವಿಸಬೇಕು.

2.ಎರಡನೆಯ ತಿಂಗಳು: ಈ ತಿಂಗಳಿನಲ್ಲಿಯೂ ಕೂಡ ಆಹಾರ ಮೊದಲನೆಯ ತಿಂಗಳಿನಂತೆ ಇದ್ದು, ಹಾಲಿಗೆ ಅತಿ ಮಧುರ (ಜೇಷ್ಠವಧು) ಶತಾವರಿ (ಹಲವು ಮಕ್ಕಳ ತಾಯಿ ಬೇರು) ಸಸ್ಯಗಳ ಬೇರನ್ನು ಬೆರೆಸಿ, ಕುದಿಸಿ, ಶೋಧಿಸಿ ದಿನಕ್ಕೆ ಎರಡು ಲೋಟದಷ್ಟು ಹಾಲನ್ನು ಗರ್ಭಿಣಿಯು ಕುಡಿಯಬೇಕು. ಅತಿ ಮಧುರ ಮತ್ತು ಶತಾವರಿಗಳು ಎದೆ ಹಾಲಿನ ಉತ್ಪತ್ತಿ ಮತ್ತು ಕಫ ದೋಷಗಳ ನಿವಾರಣೆ ಮಾಡುತ್ತವೆ.

3.ಮೂರನೆಯ ತಿಂಗಳು: ಸಿಹಿ ಪದಾರ್ಥಗಳನ್ನು ಸೇವಿಸಬೇಕು. ಹಾಲು, ತುಪ್ಪ, ಜೇನುತುಪ್ಪ, ಬೆಣ್ಣೆ, ಮೊಸರುಗಳನ್ನು ಸೇವಿಸಬೇಕು. ಅನ್ನವನ್ನು ಹಾಲಿನೊಂದಿಗೆ ಸೇರಿಸಿ ಸೇವಿಸುವುದು ಹಿತಕರ. ಕಸಕಸೆ, ಶಾವಿಗೆ, ಹೆಸರುಬೇಳೆ, ಕಡ್ಲೆಬೇಳೆಗಳಿಂದ ತಯಾರಿಸಿದ ಪಾಯಸಕ್ಕೆ ತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಪೌಷ್ಠಿಕಾಂಶಗಳು ದೊರೆಯುತ್ತವೆ. ಅಲ್ಲದೆ ತುಪ್ಪವು ದೇಹಕ್ಕೆ ಶಕ್ತಿ ಹಾಗೂ ಶಾಖವನ್ನು ನೀಡುತ್ತದೆ. ಚರ್ಮವು ಬಿರುಕು ಬಿಡುವುದನ್ನು ತಡೆದು, ಕಾಂತಿಯನ್ನು ನೀಡುತ್ತದೆ. ಮಗುವಿನ ಬುದ್ಧಿಶಕ್ತಿಯು ಬೆಳವಣಿಗೆಗೂ ಇದು ಸಹಕಾರಿ.

4.ನಾಲ್ಕನೆಯ ತಿಂಗಳು: ಈ ತಿಂಗಳಿನಲ್ಲಿ ಗರ್ಭಿಣಿಯರಲ್ಲಿ ವಾಕರಿಕೆ ಸ್ವಲ್ಪ ಕಡಿಮೆಯಾಗುತ್ತದೆ. ಆಹಾರವನ್ನು ತಿನ್ನಲು ಇಚ್ಛೆಯಾಗುತ್ತದೆ. ಆದುದರಿಂದ ಘನ ಆಹಾರದ ಪ್ರಮಾಣವನ್ನು ಹೆಚ್ಚಿಸಬೇಕು. ಈ ತಿಂಗಳಿನಲ್ಲಿ ಚೆನ್ನಾಗಿ ಬೆಂದ ಅನ್ನವನ್ನು ಮೊಸರು ಅಥವಾ ಬೆಣ್ಣೆಯೊಂದಿಗೆ ಸೇವಿಸಬೇಕು. ಬಿಸಿಯಾದ ಆಹಾರದೊಂದಿಗೆ ಬೆಣ್ಣೆಯನ್ನು ಬೆರೆಸಿ ಸೇವಿಸುವುದು ಹಿತಕರ. ಮಾಂಸಾಹಾರ ಸೇವನೆ ಮಾಡುವವರು ಒಣ ಪ್ರದೇಶದ ಪ್ರಾಣಿಗಳ ಮಾಂಸ (ಕೋಳಿ, ಕುರಿ) ದಿಂದ ಸಿದ್ಧಪಡಿಸಿದ ಆಹಾರವನ್ನು ಸೇವಿಸಬಹುದು. ಮಾಂಸ ರಸದ ಸೇವನೆ ಕೂಡ ಒಂದು ಉತ್ತಮ ಆಹಾರ.

ಹಸಿ ತರಕಾರಿ, ತಾಜಾ ಹಣ್ಣುಗಳು, ರಾಗಿ, ಗೋಧಿ, ಜೋಳ ಏಕದಳ ಧಾನ್ಯಗಳು, ದ್ವಿದಳ ಧಾನ್ಯಗಳು, ಮೊಟ್ಟೆ ಇತ್ಯಾದಿಗಳ ಸೇವನೆ ಈ ತಿಂಗಳಿನಲ್ಲಿ ಉತ್ತಮ.

5.ಐದನೆಯ ತಿಂಗಳು: ಹಣ್ಣಿನ ಸೇವನೆ ಈ ಅವಧಿಯಲ್ಲಿ ಅಗತ್ಯ. ಬೆಣ್ಣೆ, ತುಪ್ಪ, ಹಾಲು, ಜೇನುತುಪ್ಪಗಳೂ ಕೂಡ ಈ ತಿಂಗಳಿನಲ್ಲಿ ಹಿತಕರ, ಸೊಪ್ಪು, ತರಕಾರಿ, ಬೇಳೆಕಾಳುಗಳು ಆಹಾರದಲ್ಲಿದ್ದರೆ ಉತ್ತಮ. ಅನ್ನದ ಗಂಜಿ, ಅಕ್ಕಿಯಿಂದ ತಯಾರಿಸಿದ ಪಾಯಸ ಆಥವಾ ಖೀರೂ ಕೂಡ ಈ ಅವಧಿಯಲ್ಲಿ ಉತ್ತಮ ಪೌಷ್ಠಿಕಾಂಶಗಳನ್ನು ನೀಡುವುದು. ಮಾಂಸಾಹಾರಿಗಳು ಒಣ ಪ್ರದೇಶದ ಪ್ರಾಣಿಗಳ ಮಾಂಸ ಸೇವನೆಯನ್ನು ಹೆಚ್ಚಿನ ಮಸಾಲೆ ಪದಾರ್ಥಗಳು ಖಾರದ ಬಳಕೆಯನ್ನು ಕಡಿಮೆ ಮಾಡಿ ಬಳಸಬಹುದು. ಈ ರೀತಿ ಎಲ್ಲ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಬೇಕು.

6.ಆರನೆಯ ತಿಂಗಳು: ಮೇಲೆ ಹೇಳಿದ ಎಲ್ಲ ಆಹಾರ ಪದಾರ್ಥಗಳನ್ನು ನಿತ್ಯ ಸೇವಿಸಬೇಕು. ಮೂತ್ರಕ್ಕೆ ಸಂಬಂಧಿಸಿದ ಸಣ್ಣ ಪುಟ್ಟ ತೊಂದರೆಗಳು ಈ ಅವಧಿಯಲ್ಲಿ ಸಾಮಾನ್ಯವಾಗಿ ಕಾಣಿಸುವುದು. ಇವುಗಳನ್ನು ಅಲ್ಪವಾಗಿರುವಾಗಲೇ ನಿವಾರಿಸಿಕೊಳ್ಳಬೇಕು. ಹಾಗಾಗಿ ಈ ಅವಧಿಯಲ್ಲಿ ನೀರನ್ನು ಸಂಸ್ಕರಿಸಿ ಕುಡಿಯಬೇಕು. ನೀರಿಗೆ ನೆಗ್ಗಿಲಮುಳ್ಳಿನ ಸಸ್ಯದ ಬೇರನ್ನು ಹಾಕಿ ಕುದಿಸಿ ಅನಂತರ ಶೋಧಿಸಿ ಕುಡಿಯಬೇಕು. ನೆಗ್ಗಿಲ ಮುಳ್ಳು ಹಾಕಿ ತಯಾರಿಸಿದ ಗೋಕ್ಷುರಾದಿ ಘೃತವನ್ನು ಅನ್ನದೊಂದಿಗೆ ಅಥವಾ ಬಿಸಿ ನೀರಿನೊಂದಿಗೆ ಸೇವಿಸಬೇಕು. ಹಾಲು, ತುಪ್ಪ, ಮೊಸರು, ಲಸ್ಸಿ, ಪಾಯಸ ಇತ್ಯಾದಿಗಳ ಸೇವನೆಯನ್ನು ಮುಂದುವರಿಸಬೇಕು.

7.ಏಳನೆಯ ತಿಂಗಳು: ತುಪ್ಪವನ್ನು ಹೆಚ್ಚಾಗಿ ಹಾಕಿ ತಯಾರಿಸಿದಂತಹ ಸಿಹಿ ತಿಂಡಿಯನ್ನು ಸೇವಿಸುವುದು ಹಿತಕರ. ಸಂಸ್ಕರಿತ ಘೃತಗಳಾದ ಫಲಘೃತ, ಮಹಾಕಲ್ಯಾಣಕ ಘೃತಗಳನ್ನು ಹಾಲಿನೊಂದಿಗೆ ಸೇವಿಸಬೇಕು.

8.ಎಂಟನೆಯ ತಿಂಗಳು: ಪ್ರಧಾನವಾಗಿ ಈ ತಿಂಗಳಿನಲ್ಲಿ ದ್ರವ ಆಹಾರವನ್ನು ಸೇವಿಸುವುದು ಉತ್ತಮ. ಪೌಷ್ಟಿಕಾಂಶಯುಕ್ತವಾದ ಆಹಾರವನ್ನು ಸೇವಿಸಬೇಕು. ತಿಂದ ಆಹಾರವು ಬೇಗನೇ ಜೀರ್ಣವಾಗುವಂತಿರಬೇಕು. ಅಲ್ಲದೆ ಉದರದಲ್ಲಿ ವೇದನೆಯನ್ನುಂಟು ಮಾಡುವಂತಿರಬಾರದು. ಹಣ್ಣಿನ ರಸ, ಹಾಲು ಗಂಜಿ ಎಳನೀರು, ಸಕ್ಕರೆ ನೀರು, ಗ್ಲೂಕೋಸ್ ನೀರು ಈ ತಿಂಗಳುಗಳಲ್ಲಿ ಹಿತಕರ.

ಹಾಲು ಮತ್ತು ತುಪ್ಪವನ್ನು ಸೇರಿಸಿ ತಯಾರಿಸಿದ ಗಂಜಿಯನ್ನು ಮೇಲಿಂದ ಮೇಲೆ ಸೇವಿಸಬೇಕು. ಹೆರಿಗೆ ಆಗುವವರೆಗೂ ತುಪ್ಪ ಹಾಕಿ ಸಿದ್ಧಪಡಿಸಿದ ಗಂಜಿ ಮತ್ತು ಮಾಂಸಾಹಾರ ಸೇವನೆ ಮಾಡುವವರು ಒಣ ಪ್ರದೇಶದ ಪ್ರಾಣಿಗಳ ಮಾಂಸರಸ ಸೇವನೆ ಮಾಡಬೇಕು.

ಅಲ್ಲದೆ ಈ ತಿಂಗಳೀನಲ್ಲಿ ವೈದ್ಯರ ಸಲಹೆಯ ಮೇರೆಗೆ ಆಸ್ಥಾಪನಾ ಬಸ್ತಿ (ಗುದದ್ವಾರದ ಮೂಲಕ ಔಷಧಿಯ ದ್ರವ್ಯ ಹಾಗೂ ತುಪ್ಪವನ್ನು ಸೇರಿಸುವುದು) ಯನ್ನು ತೆಗೆದುಕೊಳ್ಳಬೇಕು.

9.ಒಂಭತ್ತನೆಯ ತಿಂಗಳು: ಎಂಟನೆಯ ತಿಂಗಳಿನಲ್ಲಿ ಸೇವಿಸಿದ ಆಹಾರವನ್ನೇ ಮುಂದುವರಿಸಬೇಕು. ವೈದ್ಯರ ಸಲಹೆಯ ಮೇರೆಗೆ ಯೋನಿ ಪಿಚು ಅಂದರೆ ಔಷಧಿಯ ತೈಲವನ್ನು ಹತ್ತಿಯಲ್ಲಿ ಅದ್ದಿ ಯೋನಿ ಮಾರ್ಗದಲ್ಲಿ ಪ್ರಸವವಾಗುವವರಗೂ ಇಟ್ಟುಕೊಳ್ಳುವುದು. ಇದರಿಂದ ಯೋನಿ ಮಾರ್ಗವು ಮೃದುವಾಗುವುದಲ್ಲದೆ ಸುಖ ಪ್ರಸವವೂ ಆಗುವುದು.

ಗರ್ಭಿಣಿಯರಿಗೆ ನಿಷಿದ್ಧವಾದ ಆಹಾರ
1. ಒಣಗಿದ, ಹಳಸಿದ, ಕೆಟ್ಟ ಹಾಗು ಸೀದ ಆಹಾರ ಭಕ್ಷ್ಯಗಳನ್ನು ಗರ್ಭಿಣಿ ವರ್ಜಿಸಬೇಕು.
2. ತಂಬಾಕು, ಮಧ್ಯಪಾನ ಸೇವನೆ ಕೂಡದು.
3. ತುಂಬಾ ಖಾರ, ಸಿಹಿ, ಬಿಸಿಯಾದ ಆಹಾರ ಸೇವನೆ ನಿಷಿದ್ಧ.
4. ಗುರು ಅಥವಾ ಜೀರ್ಣಕ್ಕೆ ಕಷ್ಟಕರವಾದ ಆಹಾರ ಸೇವನೆಯನ್ನು ಮಾಡಬಾರದು.

ಗಭೀಣಿಯರಿಗೆ ನಿಷಿದ್ಧವಾದ ಜೀವನ ಶೈಲಿ:
1. ಗರ್ಭಿಣಿಯರಿಗೆ ತೀಕ್ಷ್ಣವಾದ ಔಷಧಿಗಳು, ವ್ಯಾಯಾಮ, ಮೈಥುನ, ಅತಿಯಾಗಿ ಆಯಾಸ ಪಡುವುದು ಪ್ರಯಾಣ ಮಾಡುವುದು ಅಹಿತಕರ.
2. ಅತಿಯಾದ ಆಹಾರ ಸೇವನೆ ಹಾಗೂ ಅತಿ ಕಡಿಮೆ ಆಹಾರ ಸೇವನೆ ಕೂಡ ವಜ್ರ್ಯ. ಮಧ್ಯಾಹ್ನ ಮಲಗುವುದು, ರಾತ್ರಿ ಜಾಗರಣೆ ಮಾಡುವುದು, ದ್ವಿ ಚಕ್ರ ವಾಹನದಲ್ಲಿ ಪ್ರಯಾಣ ಮಾಡುವುದು ನಿಷಿದ್ಧ.
3. ಆಯುರ್ವೇದದಲ್ಲಿ ವಿವರಿಸಲಾದ ಪಂಚಕರ್ಮ ಚಿಕಿತ್ಸೆಗಳನ್ನು ಅನುಸರಿಸಬಾರದು.
4. ಮಲಿನ, ವಿಕೃತ, ಹೀನ ವಸ್ತುಗಳ ಸ್ಪರ್ಶನ ದುರ್ಗಂಧ, ದುರ್ದರ್ಶನ ಮಾಡಬಾರದು.
5. ಎತ್ತರದ ಪ್ರದೇಶದಲ್ಲಿ, ಸ್ಮಶಾನದಲ್ಲಿ ಓಡಾಡುವುದು, ಕತ್ತಲೆಯಿರುವ ಜಾಗಕ್ಕೆ ಒಂಟಿ ಪ್ರವೇಶ ಹಾಗೂ ಮನಸ್ಸಿಗೆ ಆಘಾತ ತರುವ ಪ್ರದೇಶಗಳ ವೀಕ್ಷಣೆ ಮಾಡಬಾರದು.
6. ಅಸಮತಲವಾದ ಹಾಸಿಗೆ, ಆಸನ ಹಾಗೂ ಕಠಿಣ ಆಸನಗಳ ಉಪಯೋಗ ನಿಷಿದ್ಧ.
7. ಯಾವಾಗಲೂ ಶೋಕದಿಂದ ಕೂಡಿರುವುದು, ಚಿಂತೆ, ಭಯ ಕೋಪ, ಉದ್ವೇಗ, ಕಿರುಚಾಟಗಳೂ ಕೂಡ ಸಲ್ಲದು.

ಗರ್ಭಿಣಿ ಅನುಸರಿಸಬೇಕಾದ ಕೆಲವು ವಿಹಾರ ಅಥವಾ ಜೀವನ ಶೈಲಿ:
1. ಗರ್ಭಿಣಿ ಸ್ತ್ರೀ ನಿತ್ಯವೂ ಸ್ನಾನ ಮಾಡಿ, ಶುಭ್ರವಸ್ತ್ರ ಹಾಗೂ ಆಭರಣಗಳನ್ನು ಧರಿಸಿ ಪೂಜಾ ಕಾರ್ಯಗಳನ್ನು ಮಾಡಬೇಕು.
2. ಸ್ತೋತ್ರ ಪಠಣ, ಧರ್ಮಗ್ರಂಥಗಳ ಪಠಣ, ವೀರರ ಶೂರರ ಕಥೆಗಳನ್ನು ಕೇಳುವುದು, ಓದುವುದು, ಭಕಿಗೀತೆಗಳನ್ನು, ಮಂತ್ರಗಳನ್ನು ಆಲಿಸುವುದು ಇತ್ಯಾದಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು.
3. ಗರ್ಭಿಣಿಯು ಮೃದುವಾದ ಸ್ವಚ್ಛವಾದ, ಸಮತಟ್ಟಾದ ಹಾಸಿಗೆಯಲ್ಲಿ ಮಲಗುವುದು ಉತ್ತಮ.
4. ಅತಿಯಾಗಿ ಎಣ್ಣೆ ಹಚ್ಚಿ ಮೈಯನ್ನು ಉಜ್ಜಿ ಸ್ನಾನ ಮಾಡುವುದು ನಿಷಿದ್ಧ.
5. ನಿತ್ಯವೂ ಸಂತೋಷದಿಂದ ಧೈರ್ಯದಿಂದ ಇರಬೇಕು.
6. ಸ್ನಾನಕ್ಕೆ ಬಿಲ್ವ, ಗುಲಾಬಿ, ಬೇವು, ಹರಳೆಣ್ಣೆ ಗಿಡಗಳ ಎಲೆಗಳ ಕಷಾಯ ಮತ್ತು ಸುಗಂಧ ದ್ರವ್ಯಗಳನ್ನೊಳಗೊಂಡ ನೀರನ್ನು ಉಪಯೋಗಿಸಬೇಕು.
7. ರಾತ್ರಿ 7ರಿಂದ 8 ಘಂಟೆಗಳ ಕಾಲ ನಿದ್ರಿಸುವುದು ಹಿತಕರ.
8. ಸ್ತನದ ತೊಟ್ಟನ್ನು ಶುಚಿಯಾಗಿಟ್ಟುಕೊಳ್ಳಬೇಕು. ನಿತ್ಯವೂ ಸ್ನಾನ ಮಾಡುವಾಗ ಗರ್ಭಿಣಿ ಅದರಲ್ಲೂ ಚೊಚ್ಚಲ ಗರ್ಭದಲ್ಲಿ ಸ್ತನದ ತೊಟ್ಟಿಗೆ ಎಣ್ಣೆ ಹಚ್ಚಿ ತಿಕ್ಕಿ ಹೊರಗೆಳೆದುಕೊಳ್ಳುತ್ತಿರಬೇಕು.

ಗರ್ಭಿಣಿಯ ಸಾಮಾನ್ಯ ತೊಂದರೆಗಳು ಹಾಗೂ ಚಿಕಿತ್ಸೆ:
1. ವಾಂತಿ: ಮೊದಲ 2 – 3 ತಿಂಗಳಲ್ಲಿ ವಾಂತಿ, ಸುಸ್ತು, ತಲೆ ಸುತ್ತು ವಿಶೇಷವಾಗಿ ಬೆಳಗಿನ ಹೊತ್ತು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.
ಚಿಕಿತ್ಸೆ: 1. ಆಗಾಗ ಸಿಹಿಯಾದ, ಶೀತವಾದ ಹಾಲನ್ನು ಸ್ವಲ್ಪ ಸ್ವಲ್ಪವಾಗಿ ತೆಗೆದುಕೊಳ್ಳಬೇಕು.
2. ದಾಳಿಂಬೆ ಹಣ್ಣಿನ ರಸಕ್ಕೆ ಸಕ್ಕರೆ ಹಾಗೂ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಸೇವಿಸಬೇಕು.
3. ದೊಡ್ಡ ಏಲಕ್ಕಿ ಪುಡಿಯನ್ನು ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ಆಗಾಗ ಸೇವಿಸಬೇಕು.
4. ಪ್ರತಿ ದಿನ ಬೆಳಗ್ಗೆ ಒಂದು ನೆಲ್ಲಿಕಾಯಿಯನ್ನು ತಿನ್ನಬೇಕು.
5. ಆಗಾಗ ಒಣ ದ್ರಾಕ್ಷಿಯನ್ನು ತಿನ್ನುತ್ತಿರಬೇಕು.
6. ನಿಂಬೆ ಹಣ್ಣನ್ನು ಕತ್ತರಿಸಿ 2 ಭಾಗ ಮಾಡಿಕೊಂಡು ಅದಕ್ಕೆ ಉಪ್ಪು ಅಥವಾ ಸಕ್ಕರೆಯನ್ನು ಸಿಂಪಡಿಸಿಕೊಂಡು ಚೀಪಬೇಕು,

2. ಹಸಿವೆ ಇಲ್ಲದಿರುವುದು
1. ಬಡೆಸೊಪ್ಪು (ಸೋಂಪು), ಕೊತ್ತುಂಬರಿ, ಜೀರಿಗೆ, ಕಾಲುಮೆಣಸು ಇವೆಲ್ಲವುಗಳನ್ನು ಪುಡಿ ಮಾಡಿ ಇಟ್ಟುಕೊಂಡು, ನೀರಿಗೆ ಬೆರೆಸಿ, ಕುದಿಸಿ ಸೋಸಿ, ಸಕ್ಕರೆಯೊಂದಿಗೆ ಸೇವಿಸಬೇಕು.
2. ಒಂದು ಸಣ್ಣ ತುಂಡು ಶುಂಠಿಯನ್ನು ನಿಂಬೆರಸದಲ್ಲಿ ಅದ್ದಿ, ಸ್ವಲ್ಪ ಉಪ್ಪು ಬೆರೆಸಿ ಚಪ್ಪರಿಸುತ್ತಿರಬೇಕು.

3. ಮಲಬದ್ಧತೆ
1. ತಾಜಾ ಹಸಿ ತರಕಾರಿಯ ಸೇವನೆ ಉತ್ತಮ.
2. ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು.
3. ಸೀಬೆ ಹಣ್ಣು, ಬಾಳೆಹಣ್ಣುಗಳನ್ನು ಸೇವಿಸಬೇಕು.
4. ಒಣ ದ್ರಾಕ್ಷಿಯನ್ನು ಹಾಲಿನೊಂದಿಗೆ ಸೇರಿಸಿ ಕುದಿಸಿ ಆ ಹಾಲನ್ನು ದ್ರಾಕ್ಷಿಯೊಡನೆ ಸೇವಿಸಬೇಕು.
5. ಒಂದು ಲೋಟ ಬಿಸಿ ನೀರಿಗೆ ಉಪ್ಪು ಹಾಗೂ ಲಿಂಬೆರಸವನ್ನು ಬೆರೆಸಿ ಬಳಸುವುದರಿಂದ ವಾಯುವಿನ ಅನುಲೋಮನವಾಗುವುದು.

4. ಹೊಟ್ಟೆ ಉರಿ ಮತ್ತು ಹುಳಿ ತೇಗು
ಸಿಹಿ ಹಾಲು, ಎಳೆ ನೀರು, ಸೋರೆಕಾಯಿ ಸೂಪ್, ನೆಲ್ಲಿಕಾಯಿ ಪುಡಿಯೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸಬೇಕು. ಒಣದ್ರಾಕ್ಷಿ ಸೇವನೆ ಹಾಗೂ ಜೇಷ್ಠಮಧುವಿನ ಕ್ಷೀರ ಪಾಕ ಸೇವನೆ ಹಿತಕರ. (ಒಂದು ಚಮಚ ಜೇಷ್ಠಮಧು ಪುಡಿಯನ್ನು ಒಂದು ಲೋಟ ಹಾಲು ಹಾಗೂ ಒಂದು ಲೋಟ ನೀರಿನ ಮಿಶ್ರಣಕ್ಕೆ ಬೆರೆಸಿ ಕುದಿಸಿ ಒಂದು ಲೋಟ ಹಾಲಿನ ಪ್ರಮಾಣಕ್ಕೆ ಇಳಿಸಿ ಸೋಸಬೇಕು).

5. ಕೈ ಕಾಲುಗಳಲ್ಲಿ ಊತ
ಕೈ ಕಾಲುಗಳಲ್ಲಿ ಊತ ಅಲ್ಪ ಪ್ರಮಾಣದಲ್ಲಿದ್ದು, ಇನ್ನಿತರ ಪರೀಕ್ಷೆಗಳು ಸಾಮಾನ್ಯವಾಗಿದ್ದಲ್ಲಿ, ಮನೆ ಮದ್ದುಗಳ ಉಪಯೋಗ ಮಾಡಬಹುದು. ಇಲ್ಲದಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು.

Comments are closed.