ಕುಂದಾಪುರ: ನಾವಿಲ್ಲಿ ಹೇಳೋ ಕೆಲವು ಗ್ರಾಮಗಳು ತೀರಾ ಗ್ರಾಮೀಣ ಭಾಗವಾದ್ರೂ ಐತಿಹಾಸಿಕವಾಗಿ, ವ್ಯಾವಹರಿಕವಾಗಿ ಎಲ್ಲೆಡೆ ಖ್ಯಾತಿ ಮಾಡಿದ ಪ್ರದೇಶ. ಆದ್ರೇ ಇದೀಗಾ ಇಲ್ಲಿ ನಿತ್ಯ ನಡಿತಿರೋ ಅವ್ಯವಹಾರಗಳು, ದಂಧೆಗಳು ಈ ಗ್ರಾಮಗಳನ್ನು ಕುಖ್ಯಾತಿಯತ್ತ ಕೊಂಡೊಯ್ಯುವ ದಿನಗಳು ಹೆಚ್ಚೇನೂ ದೂರವಿಲ್ಲವಂತೆ. ಕೋಟೇಶ್ವರ, ವಕ್ವಾಡಿ, ಮೂಡುಗೋಪಾಡಿ, ಕುಂಭಾಸಿ ಆಸುಪಾಸಿನಲ್ಲಿ ನಡಿತಾ ಇರೋ ಗಾಂಜಾ ದಂಧೆ ಇದೀಗಾ ನಾಗರೀಕರನ್ನ ಕೆರಳಿಸಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.
ಕೋಟೇಶ್ವರ.. ವ್ಯಾವಹಾರಿಕವಾಗಿ ಬಹಳಷ್ಟು ಮುಂದುವರಿದ ಗ್ರಾಮವಿದು. ಇಲ್ಲಿನ ದೇವಾಲಯಗಳು ಇತಿಹಾಸದ ಪರಂಪರೆಯನ್ನು ಸಾರುತ್ತಿರುವುದು ಒಂದೆಡೆಯಾದರೇ ಇನ್ನೊಂದೆಡೆ ಸಣ್ಣಮಟ್ಟದಿಂದ ಆರಂಭಗೊಂಡು ಅಂತರಾಷ್ಟ್ರೀಯ ಮಟ್ಟದ ಹೋಟೇಲುಗಳು, ವ್ಯವಹಾರ ಕೇಂದ್ರಗಳು ಇಲ್ಲಿನ ಪ್ರಸಿದ್ದತೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದೆ. ಇಂತಹ ಬೆಳೆದ ಊರಲ್ಲಿ ಈಗ ಸದ್ದು ಮಾಡುತ್ತಿರುವುದು ಸ್ವಸ್ಥ ಸಮಾಜ ಹಾಳುಗೈಯುತ್ತಿರೋದು ಗಾಂಜಾ ಹಾಗೂ ಮಾಧಕ ದ್ರವ್ಯಗಳ ಜಾಲ. ಹೌದು… ನಿತ್ಯ ಬೆಳಗ್ಗಾಯಿತೆಂದರೇ ಅಲ್ಲಲ್ಲಿ ನಿರ್ಜನ ಪ್ರದೇಶವನ್ನೇ ಹೊಂಚು ಹಾಕಿ ಕಾಯುವ ಗಾಂಜಾ ಸೇವಿಸುವವರು, ಗಾಂಜಾ ಡೀಲ್ ಮಾಡುವವರು ದಿನಕ್ಕೆ ಬಹಳಷ್ಟು ವ್ಯವಹಾರ ಕುದುರಿಸುತ್ತಾರಂತೆ. ಹೆಚ್ಚಾಗಿ ವಿದ್ಯಾರ್ಥಿಗಳು, ಯುವಕರು ಗಾಂಜಾಕೊಳ್ಳುವ ಗಿರಾಕಿಗಳಾಗಿದ್ದಾರಂತೆ. ಇನ್ನು ಗಾಂಜಾ ಮತ್ತಿನಲ್ಲಿ ಬೈಕ್ ಎರ್ರಾಬಿರ್ರಿ ಚಲಾಯಿಸುವುದು ಮೊದಲಾದ ತೊಂದರೆ ನೀಡುತ್ತಿದ್ದಾರಂತೆ. ಈ ಭಾಗದಲ್ಲಿ ಶಾಲಾ-ಕಾಲೇಜುಗಳು, ಆಸ್ಪತ್ರೆಗಳು ಇದ್ದು ಎಲ್ಲರಿಗೂ ಇದರಿಂದ ತುಂಬಾನೇ ಪ್ರಾಬ್ಲಂ ಆಗುತ್ತಿದೆ ಎನ್ನಲಾಗಿದೆ. ಇನ್ನು ಗಾಂಜಾ ಸೇವನೆ ಮಾಡಿದ ಯುವಕರು ಅಮಾಯಕರ ಮೇಲೆ ಹಲ್ಲೆ ನಡೆಸುವುದು, ರೌಡಿಸಂ ಮಾಡುವುದು ನಾಗರೀಕರನ್ನ ಕೆರಳಿಸಿದೆ.
ಗ್ರಾಮೀಣ ಪ್ರದೇಶಗಳಾದ ಕುಂಭಾಸಿ, ವಕ್ವಾಡಿ, ಮೂಡುಗೋಪಾಡಿ, ಕೋಟೇಶ್ವರ, ನೇರಂಬಳ್ಳಿ ಭಾಗದಲ್ಲಿ ಗಾಂಜಾ ಹಾಗೂ ಮಾಧಕ ದ್ರವ್ಯಗಳ ದರ್ಬಾರ್ ಹೆಚ್ಚಾಗಿದ್ದು ಈ ಬಗ್ಗೆ ನಾಗರೀಕರು ಕೆರಳಿದ್ದಾರೆ. ಹಗಲು ರಾತ್ರಿಯೆನ್ನದೇ ಹೊರ ಜಿಲ್ಲೆಗಳಿಂದ ಗಾಂಜಾ ವಿಕ್ರಯ ತಂಡಗಳು ಸ್ಥಳಿಯರ ಸಹಕಾರದಲ್ಲಿ ಡೀಲಿಂಗ್ ಮಾಡುತ್ತಿದ್ದು ಅದನ್ನು ಖರೀದಿಸುವ ಯುವಪಡೆ ಮಾದಕ ದ್ರವ್ಯದ ಸೇವನೆಗಾಗಿ ನಿರ್ಜನ ಪ್ರದೇಶವನ್ನು ಅರಸಿ ಹೋಗಿ ಅಲ್ಲಿ ಗಾಂಜಾ ಮತ್ತೇರಿಸಿಕೊಂಡು ಊರಲ್ಲಿ ಓಡಾಡುತ್ತಾ ಕಿರಿಕಿರಿ ನೀಡುತ್ತಿದ್ದಾರಂತೆ. ಈ ಬಗ್ಗೆ ಕೋಟೇಶ್ವರದಲ್ಲಿ ಸಮಾನ ಮನಸ್ಕರು ಗ್ರಾಮಪಂಚಾಯತ್ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ ಕುಂದಾಪುರ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ ಅವರಿಗೆ ಮನವಿ ಸಲ್ಲಿಸಿದ್ರು. ಇನ್ನೇನು ಒಂದು ವಾರದಲ್ಲಿ ಪ್ರಸಿದ್ದ ಕೋಟಿಲಿಂಗೇಶ್ವರ ದೇವರ ಜಾತ್ರೆಯೂ ಸಮೀಪಿಸುತ್ತಿದ್ದು ಆ ಸಮಯದಲ್ಲಿ ನಾಗರೀಕರಿಗೆ ಸಮಸ್ಯೆಯಾಗದ ರೀತಿ ಪೊಲೀಸರು ಇಂತಹ ತಂಡಗಳ ಮೇಲೆ ಕಣ್ಣಿಟ್ಟು ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ನಾಗರೀಕರು ಆಗ್ರಹಿಸಿದ್ರು. ಗಾಂಜಾ ವ್ಯವಹಾರದ ಬಗ್ಗೆ ನಾಗರೀಕರು ತಮ್ಮಲ್ಲಿರುವ ಮಾಹಿತಿ ನೀಡಿದ್ರೇ ಕಾನೂನು ಪ್ರಕಾರ ಅಂತಹ ತಂಡಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಇಂತಹ ಅವ್ಯವಹಾರ ತಡೆಗೆ ಇಲಾಖೆ ಕಠಿಣ ಕ್ರಮಕೈಗೊಳ್ಳಲಿದೆ ಎಂದು ಸಿಪಿಐ ಮಂಜಪ್ಪ ಪ್ರತಿಕ್ರಿಯಿಸಿದ್ರು.
ಒಟ್ಟಿನಲ್ಲಿ ಈ ಭಾಗದಲ್ಲಿ ನಡೆಯುತ್ತಿರುವ ಗಾಂಜಾ ಹಾಗೂ ಮಾಧಕ ದ್ರವ್ಯ ಡೀಲಿಂಗ್ ಬಗ್ಗೆ ನಾಗರೀಕರು ಇದೀಗಾ ಕೆರಳಿದ್ದಾರೆ. ಜನರ ಹಾಗೂ ಯುವಸಮುದಾಯದ ಹಿತದೃಷ್ಟಿಯಿಂದ ಪೊಲೀಸರು ಗಾಂಜಾದಂಧೆಗೆ ಬ್ರೇಕ್ ಹಾಕುವಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕಿದೆ.
——————–
ವರದಿ- ಯೋಗೀಶ್ ಕುಂಭಾಸಿ
Comments are closed.