ಅಂತರಾಷ್ಟ್ರೀಯ

ಜಯಲಲಿತಾ ಕುರಿತು ಹಾರ್ವರ್ಡ್ ವಿದ್ಯಾರ್ಥಿಯೋರ್ವ ಪೋಸ್ಟ್ ವೈರಲ್!

Pinterest LinkedIn Tumblr

jayalalithaaಚೆನ್ನೈ: ತಮಿಳುನಾಡು ಸಿಎಂ ಹಾಗೂ ಎಐಎಡಿಎಂಕೆ ಪಕ್ಷದ ಅಧಿನಾಯಕಿ ಜಯಲಲಿತಾ ಅವರ ಕುರಿತಂತೆ ಹಾರ್ವರ್ಡ್ ವಿದ್ಯಾರ್ಥಿಯೋರ್ವ ಪೋಸ್ಟ್ ಮಾಡಿದ್ದ ಒಂದು ಪೋಸ್ಟ್ ಇದೀಗ ವೈರಲ್ ಆಗಿದ್ದು. ಬರೊಬ್ಬರಿ 30 ಸಾವಿರ ಮಂದಿ ಈ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ.
ಜಯಲಲಿತಾ ಅವರ ಬದುಕಿನ ದಿಕ್ಕನ್ನು ಬದಲಿಸಿದ ಆ ಎರಡು ಘಟನೆಗಳು ಎಂಬ ಶೀರ್ಷಿಕೆಯಡಿಯಲ್ಲಿ ವಿದ್ಯಾರ್ಥಿ ಮಾಡಿದ್ದ ಪೋಸ್ಟ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಕೇವಲ 2 ದಿನಗಳಲ್ಲಿ ಬರೊಬ್ಬರಿ 31 ಸಾವಿರಕ್ಕೂ ಅಧಿಕ ಮಂದಿ ಈ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಈ ಪೋಸ್ಟ್ ನಲ್ಲಿ ಜಯಲಲಿತಾ ಅವರ ಬದುಕಿನ ಎರಡು ಘಟನಾವಳಿಗಳನ್ನು ವಿವರಿಸಿರುವ ಚರಣ್ಯಾ ಕಣ್ಣನ್ ಎಂಬುವವರು ಈ ಘಟನಗಳು ಜಯಲಲಿತಾ ಅವರ ಬದುಕಿನ ದಿಕ್ಕನ್ನೇ ಬದಲಿಸಿದವು ಎಂದು ಹೇಳಿದ್ದಾರೆ.
ಘಟನೆ1
ಜಯಲಲಿತಾ ಅವರ ಮೊದಲ ತಮಿಳು ಸಿನಿಮಾ ಆಯಿರತ್ತಿಲ್ ಒರುವನ್. ಈ ಚಿತ್ರದಲ್ಲಿ ಖ್ಯಾತ ಸೂಪರ್ ಸ್ಟಾರ್ ಎಂಜಿಆರ್ ಅವರು ನಾಯಕ ನಟರಾಗಿದ್ದರು. ಅಂದು ಚಿತ್ರದ ಚಿತ್ರೀಕರಣ ವೇಳೆ ಎಂಜಿಆರ್ ಚಿತ್ರೀಕರಣ ಘಟಕಕ್ಕೆ ಆಗಮಿಸಿದಾಗ ಇಡೀ ಚಿತ್ರತಂಡ ಎದ್ದುನಿಂತ ಗೌರವ ಸಲ್ಲಿಸಿತ್ತು. ಆದರೆ ಅಂದು ಚಿತ್ರದ ನಾಯಕಿಯಾಗಿದ್ದ ಜಯಲಲಿತಾ ಅವರು ಮಾತ್ರ ಕುರ್ಚಿ ಮೇಲೆ ಕುಳಿತು ಕಾಲ ಮೇಲೆ ಕಾಲು ಹಾಕಿ ಪುಸ್ತಕ ಓದುತ್ತಿದ್ದರು. ಆಗಲೇ ಎಂಜಿಆರ್ ಅವರು ಜಯಲಲಿತಾರನ್ನು ಮೊದಲ ಬಾರಿಗೆ ನೋಡಿದ್ದು. ಬಳಿಕ ಈ ಜೋಡಿ ಬರೊಬ್ಬರಿ 28 ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿತ್ತು. ಈ ಎಲ್ಲ ಚಿತ್ರಗಳೂ ಸೂಪರ್ ಹಿಟ್ ಆಗಿದ್ದವು. ಜಯಲಲಿತಾರಲ್ಲಿದ್ದ ನಾಯಕತ್ವ ಗುಣ ಹಾಗೂ ಹಿಂದಿ ಮತ್ತು ಇಂಗ್ಲೀಷ್ ಭಾಷೆಯ ಮೇಲಿದ್ದ ಹಿಡಿತವನ್ನು ಗಮನಿಸಿದ್ದ ಎಂಜಿಆರ್ ಭವಿಷ್ಯದಲ್ಲಿ ಈ ಹುಡುಗಿ ದೊಡ್ಡ ನಾಯಕಿಯಾಗುತ್ತಾಳೆ ಎಂದು ಎಣಿಸಿದ್ದರು. ಬಳಿಕ ಇದೇ ಎಂಜಿಆರ್ ಅವರು ಜಯಲಲಿತಾರನ್ನು ರಾಜಕೀಯಕ್ಕೆ ಕರೆತಂದರು. ಬಳಿಕ ನಡೆದದ್ದೆಲ್ಲಾ ಇತಿಹಾಸ….
ಘಟನೆ 2
ಜಯಲಲಿತಾ ರಾಜಕೀಯಕ್ಕೆ ಬಂದ ಬಳಿಕ ಸಾಕಷ್ಟು ಸವಾಲು ಹಾಗೂ ಅಪಮಾನಗಳನ್ನು ಎದುರಿಸಿದ್ದರು. ಪ್ರಮುಖವಾಗಿ 1989ರಲ್ಲಿ ನಡೆದ ಘಟನೆಯೊಂದು ಜಯಾ ರಾಜಕೀಯ ಜೀವನದಲ್ಲೇ ಅತ್ಯಂತ ಕೆಟ್ಟ ಘಳಿಗೆಯಾಗಿ ಮಾರ್ಪಟ್ಟಿತ್ತು. ರಾಜಕೀಯದಲ್ಲಿ ಜಯಲಲಿತಾ ಹೆಮ್ಮರವಾಗಿ ಬೆಳೆಯಲು ಒಂದು ಅರ್ಥದಲ್ಲಿ ಈ ಘಟನೆ ಕೂಡ ಕಾರಣವಾಗಿತ್ತು. ಅಂದು ಆಡಳಿತಾರೂಢ ಡಿಎಂಕೆ ಪಕ್ಷ ತಮಿಳುನಾಡು ವಿಧಾನಸಭೆಯಲ್ಲಿ ಬಜೆಟ್ ಮಂಡನೆಯಲ್ಲಿ ತೊಡಗಿತ್ತು. ಈ ವೇಳೆ ಸದನದಲ್ಲಿ ಚರ್ಚೆ ತಾರಕಕ್ಕೇರಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷದ ಕಾರ್ಯಕರ್ತರು ಪರಸ್ಪರ ಕೈ ಕೈಮಿಲಾಯಿಸಿದ್ದರು. ಇದು ಎಷ್ಟರ ಮಟ್ಟಿಗೆ ಹೋಗಿತ್ತು ಎಂದರೆ ಡಿಎಂಕೆ ಪಕ್ಷದ ಸದಸ್ಯರು ಜಯಲಲಿತಾ ಅವರನ್ನು ಮನಸೋ ಇಚ್ಛೆ ಥಳಿಸಿ ಅವರ ಕೂದಲನ್ನು ಹಿಡಿದು ಎಳೆದಾಡಿದ್ದರು. ಅಲ್ಲದೆ ಅವರ ಸೀರೆಯನ್ನು ಎಳೆದಿದ್ದರು. ಈ ಘಟನೆಯಿಂದ ತೀವ್ರ ಆಕ್ರೋಶರಾಗಿದ್ದ ಜಯಲಲಿತಾ ಅಂದು ವಿಧಾನಸಭೆಯಲ್ಲೇ ಒಂದು ಶಪಥ ಮಾಡಿದ್ದರು. ಕರುಣಾನಿಧಿ ಮುಖ್ಯಮಂತ್ರಿಯಾಗಿರುವವರೆಗೂ ತಾವು ವಿಧಾನಸಭೆಯನ್ನು ಪ್ರವೇಶಿಸುವುದಿಲ್ಲ. ವಿಧಾನಸಭೆಗೆ ಕಾಲಿಟ್ಟರೆ ಅದು ಮುಖ್ಯಮಂತ್ರಿಯಾಗಿ ಮಾತ್ರ ಎಂದು ಶಪಥ ಮಾಡಿದ್ದರು. ಈ ಘಟನೆ ತಮಿಳುನಾಡಿನಾದ್ಯಂತ ವ್ಯಾಪಕ ಸುದ್ದಿಗೆ ಕಾರಣವಾಗಿತ್ತು.
ಈ ಘಟನೆ ಬಳಿಕ ಪಕ್ಷದಲ್ಲಿ ಪ್ರಬಲ ನಾಯಕರಾಗಿ ಗುರುತಿಸಿಕೊಂಡ ಜಯಲಲಿತಾ 2 ವರ್ಷಗಳಲ್ಲಿ ಪಕ್ಷವನ್ನು ಪರಿಣಾಮಕಾರಿಯಾಗಿ ಸಂಘಟಿಸಿದರು. ತಮ್ಮ ಮೇಲಾದ ಹಲ್ಲೆಯನ್ನು ಪುರುಷ ಪ್ರಧಾನ ಸರ್ಕಾರದ ಕ್ರೌರ್ಯ ಎಂದು ಬಿಂಬಿಸುವಲ್ಲಿ ಜಯ ಯಶಸ್ವಿಯಾಗಿದ್ದರು. ವಿಧಾನಸಭೆಯಲ್ಲಿ ಒಂದು ಹೆಣ್ಣಿಗಾದ ಅಪಮಾನವನ್ನು ಸಹಿಸದ ಜನ ಮುಂದಿನ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷದ ಕೈ ಹಿಡಿದಿದ್ದರು.1991ರ ಚುನಾವಣೆಯಲ್ಲಿ ಎಐಎಡಿಎಂಕೆ ಅಭೂತಪೂರ್ವ ಯಶಸ್ಸು ಸಾಧಿಸಿತ್ತು. ಜಯಲಲಿತಾ ಕೂಡ ಸಿಎಂ ಗಾದಿಗೇರಿದ್ದರು. ತಮಿಳುನಾಡಿನ ಮೊದಲ ಮಹಿಳಾ ಸಿಎಂ ಎಂಬ ಖ್ಯಾತಿ ಪಡೆದ ಜಯಾ, ತಮಿಳುನಾಡಿನ ಅತ್ಯಂತ ಚಿಕ್ಕವಯಸ್ಸಿನ ಮುಖ್ಯಮಂತ್ರಿ ಎಂಬ ಖ್ಯಾತಿ ಕೂಡ ಪಡೆದರು. ಬಳಿಕ ತಮ್ಮ ಜನ ಸ್ನೇಹಿ ಕಾರ್ಯಗಳಿಂದಾಗಿ ಜಯಾ ತಮಿಳುನಾಡಿನ ಜನತೆಯ ಅಮ್ಮಾ ಆದರು.

Comments are closed.