ರಾಷ್ಟ್ರೀಯ

ಲೋಕಸಭೆಯಲ್ಲಿ ನನಗೆ ಮಾತನಾಡಲು ಬಿಡುತ್ತಿಲ್ಲ, ಜನಸಭೆಯಲ್ಲಿ ಮಾತನಾಡುತ್ತೇನೆ: ಮೋದಿ

Pinterest LinkedIn Tumblr

narendra_modi-finalದೀಸಾ ( ಗುಜರಾತ್): ಸದನದಲ್ಲಿ ನೋಟು ರದ್ದತಿ ನಿರ್ಧಾರದ ಚರ್ಚೆಗೆ ವಿಪಕ್ಷಗಳು ಅಡ್ಡಿಯುಂಟು ಮಾಡುತ್ತಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ.

ಶನಿವಾರ ಗುಜರಾತ್‍ನ ದೀಸಾ ಎಂಬಲ್ಲಿ ಸಹಕಾರಿ ಹಾಲು ಉತ್ಪಾದನಾ ಘಟಕ ಉದ್ಘಾಟಿಸಿದ ನಂತರ ರೈತರ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಚರ್ಚೆಗೆ ಸದಾ ಸಿದ್ಧವಾಗಿದೆ. ವಿಪಕ್ಷಗಳು ನನಗೆ ಲೋಕಸಭೆಯಲ್ಲಿ ಮಾತನಾಡಲು ಬಿಡುವುದಿಲ್ಲ. ಆದ್ದರಿಂದ ನಾನು ಜನಸಭೆಯಲ್ಲಿ ಮಾತನಾಡುತ್ತೇನೆ ಎಂದಿದ್ದಾರೆ.

ಸಂಸತ್‍ನಲ್ಲಿ ಚಳಿಗಾಲದ ಅಧಿವೇಶನದಲ್ಲಿ ನಡೆಯುತ್ತಿರುವ ಘಟನೆಗಳು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೂ ನೋವು ತಂದಿದೆ. ಡಿಸೆಂಬರ್ 8ರಂದು ವಿಪಕ್ಷಗಳು ಸದನದಲ್ಲಿ ಚರ್ಚೆಗೆ ಅಡ್ಡಿಯುಂಟು ಮಾಡಿ ಕಲಾಪ ಮುಂದೂಡಲ್ಪಟ್ಟಾಗ, ರಾಷ್ಟ್ರಪತಿ ಅವರು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಸದನವಿರುವುದು ಧರಣಿ ಸತ್ಯಾಗ್ರಹ ಮಾಡುವುದಕ್ಕಲ್ಲ. ಅದಕ್ಕಾಗಿ ರಸ್ತೆಗಳಿವೆ. ದಯವಿಟ್ಟು ನೀವು ನಿಮ್ಮ ಕೆಲಸ ಮಾಡಿ ಎಂದು ರಾಷ್ಟ್ರಪತಿ ವಿಪಕ್ಷದವರ ವಿರುದ್ಧ ಕಿಡಿ ಕಾರಿದ್ದರು.

₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಮೋದಿ, ದೇಶದಲ್ಲಿನ ಕಪ್ಪು ಹಣವನ್ನು ಮತ್ತು ನಕಲಿ ನೋಟುಗಳ ವಿರುದ್ಧದ ಸಮರವಾಗಿದೆ ಎಂದಿದ್ದಾರೆ.

ಗರಿಷ್ಠ ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದು ಮಾಡುವ ಮೂಲಕ ನಾವು ನಕಲಿ ಕರೆನ್ಸಿ ನೋಟುಗಳನ್ನು ಚಲಾವಣೆ ಮಾಡುವ ಉಗ್ರರ ಜಾಲವನ್ನು ಭೇದಿಸುತ್ತೇವೆ. ಈ ಎಲ್ಲ ಬದಲಾವಣೆಗಳಿಗಾಗಿ 50 ದಿನಗಳನ್ನು ಕೊಡಿ ಎಂದು ನಾನು ವಿನಂತಿಸಿದ್ದೆ. ಮುಂದೆ ಯಾವ ರೀತಿಯ ಬದಲಾವಣೆಯಾಗುತ್ತದೆ ಎಂದು ನೀವು ನೋಡುತ್ತೀರಿ. ದೇಶದಲ್ಲಿ ಭ್ರಷ್ಟಾಚಾರ ಮುಕ್ತಗೊಳಿಸಲು ಇದು ಪ್ರಧಾನ ಹೆಜ್ಜೆ ಎಂದು ಪ್ರಧಾನಿ ಹೇಳಿದ್ದಾರೆ.

ಕಪ್ಪುಹಣ ಮತ್ತು ಭ್ರಷ್ಟಾಚಾರ ದೇಶದ ಪ್ರಗತಿಯನ್ನು ಕುಂಠಿತಗೊಳಿಸುತ್ತಿದ್ದು, ಇದು ಬಡವರ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ. ಹೀಗೆ ಬಡವರನ್ನು ಲೂಟಿ ಮಾಡಿ, ಮಧ್ಯಮ ವರ್ಗದವರನ್ನು ಶೋಷಣೆಗೊಳಪಡಿಸುವ ಆಟ ಇನ್ನು ಮುಂದೆ ನಡೆಯುವುದಿಲ್ಲ.

ದೇಶದಲ್ಲಿ ನಗದು ರಹಿತ ವ್ಯವಸ್ಥೆ ಜಾರಿಗೆ ಬರಬೇಕಾದರೆ ಪ್ರತಿಯೊಬ್ಬರು ಇ- ಬ್ಯಾಂಕಿಂಗ್ ಮತ್ತು ಇ-ವಾಲೆಟ್‍ಗಳನ್ನು ಬಳಸಬೇಕು.

ಹೌದು, ನೀವು ನನ್ನ ಈ ನಿರ್ಧಾರವನ್ನು ವಿರೋಧಿಸುವಿರಿ. ಆದರೆ ನೀವೇ ಇನ್ನೊಬ್ಬರಿಗೆ ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ಬಳಸಿ ಬ್ಯಾಂಕಿಂಗ್ ವ್ಯವಹಾರಗಳನ್ನು ನಡೆಸುವುದು ಹೇಗೆ ಎಂಬುದನ್ನು ಹೇಳಿಕೊಡಿ. ಇಂದು ನಿಮ್ಮ ಮೊಬೈಲ್ ಮತ್ತು ನಿಮ್ಮ ವಾಲೆಟ್‍ ನಿಮ್ಮ ಬ್ಯಾಂಕ್ ಆಗಿದೆ.

ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವುದರಿಂದ ಭಯೋತ್ಪಾದನೆ ಮತ್ತು ನಕ್ಸಲಿಸಂನ ಬೆನ್ನುಮೂಳೆ ಮುರಿದಂತಾಗಿದೆ. ನೋಟು ರದ್ದತಿ ನಿರ್ಧಾರವು ಈ ದೇಶದಲ್ಲಿನ ಬಡವರಿಗೆ ಹೆಚ್ಚಿನ ಶಕ್ತಿಯನ್ನು ನೀಡಿದೆ ಎಂದು ಮೋದಿ ಹೇಳಿದ್ದಾರೆ.

Comments are closed.