ಪ್ರಕೃತಿಯ ಮಡಿಲಲ್ಲಿಯೇ ಮದುವೆ ಆಗಬೇಕು ಎಂಬ ಆಸೆಯನ್ನು ‘ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ’ ಚಿತ್ರದಲ್ಲಿ ರಾಧಿಕಾ ಪಂಡಿತ್ ವ್ಯಕ್ತಪಡಿಸಿದ್ದರು. ಬರೀ ರೀಲ್ ಅಲ್ಲ, ಅವರ ರಿಯಲ್ ಆಸೆ ಕೂಡ ಅದೇ ಆಗಿತ್ತು. ಆ ಪ್ರಕಾರವೇ ಶುಕ್ರವಾರ ಅವರ ವಿವಾಹ ನೆರವೇರಿದ್ದು ವಿಶೇಷ. ನೂರು ವರ್ಷಗಳಿಗೂ ಹಳೆಯದಾದ ಮರಗಳನ್ನು ಹೊಂದಿರುವ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೊಟೇಲ್ನ ಹಸಿರು ಪರಿಸರದ ನಡುವೆ ಯಶ್-ರಾಧಿಕಾ ಸಪ್ತಪದಿ ತುಳಿದರು.
ಶುಕ್ರವಾರ ಮುಂಜಾನೆಯಿಂದಲೇ ಶುರುವಾದ ವಿವಾಹ ಸಮಾರಂಭದಲ್ಲಿ ಎರಡೂ ಕುಟುಂಬದ ಸದಸ್ಯರು, ಆಪ್ತ ಸ್ನೇಹಿತರು ಮತ್ತು ಆಮಂತ್ರಿತ ಗಣ್ಯರು ಪಾಲ್ಗೊಂಡಿದ್ದರು. ಬೆಳ್ಳಿಗೆ 11.30ರಿಂದ ಮಧ್ಯಾಹ್ನ 12.30ರವರೆಗಿನ ಅಭಿಜಿನ್ ಶುಭಲಗ್ನದಲ್ಲಿ ರಾಧಿಕಾ ಅವರಿಗೆ ಯಶ್ ಮಾಂಗಲ್ಯ ಧಾರಣೆ ಮಾಡಿದರು. ಒಕ್ಕಲಿಗ ಮತ್ತು ಕೊಂಕಣಿ ಸಂಪ್ರದಾಯದಂತೆ ಶಾಸ್ತ್ರಗಳು ನೆರವೇರಿದವು. ಇಂದು ನಡೆಯಲಿರುವ ಆರತಕ್ಷತೆ ಸಮಾರಂಭಕ್ಕೆ ಚಿತ್ರರಂಗದವರು, ರಾಜಕೀಯ ಮುಖಂಡರು ಮತ್ತು ಆತ್ಮೀಯರನ್ನು ಆಹ್ವಾನಿಸಲಾಗಿದೆ.
ಚೆನ್ನಕೇಶವ ದೇವಾಲಯದಂತೆ ಮಂಟಪ: ಕಲಾವಿದ ಅರುಣ್ ಸಾಗರ ನಿರ್ವಿುಸಿರುವ ಮದುವೆ ಮಂಟಪ ಕೂಡ ಈ ಸೆಲೆಬ್ರಿಟಿ ವಿವಾಹದ ಆಕರ್ಷಣೆಯಾಗಿತ್ತು. ಸೋಮನಾಥಪುರದ ಚನ್ನಕೇಶವ ದೇವಾಲಯದ ಮಾದರಿಯಲ್ಲಿ ಮಂಟಪ ನಿರ್ವಿುಸಲಾಗಿತ್ತು. ಅದರ ಸುತ್ತಲೂ ಕಾಣಿಸುತ್ತಿದ್ದ ಶಿವ-ಪಾರ್ವತಿ, ಗಣಪತಿ, ಶಿಲಾಬಾಲಿಕೆಯರ ಪ್ರತಿಮೆಗಳಿಂದಾಗಿ ಇತಿಹಾಸದ ವೈಭವವೇ ಮರುಕಳಿಸಿದಂತಹ ವಾತಾವರಣ ಸೃಷ್ಟಿಯಾಗಿತ್ತು. ಈ ಖಾಸಗಿ ಸಮಾರಂಭದಲ್ಲೂ ರೈತಪರ ಕಾಳಜಿ ಮೆರೆದಿದ್ದು ಯಶ್ ಹೆಚ್ಚುಗಾರಿಕೆ. ಮದುವೆ ನಡೆದಿದ್ದು ರಾಧಿಕಾ ಮನದಿಚ್ಛೆಯಂತಾದರೂ ಅಲ್ಲಿನ ವಾತಾವರಣ ಸಿಂಗಾರಗೊಂಡಿದ್ದು ಯಶ್ ಆಸೆಯಂತೆ. ಅಂದರೆ, ಇಡೀ ಸಮಾರಂಭಕ್ಕೆ ಬೇಕಾದ ಸುಗಂಧರಾಜ, ತಾವರೆ, ಸೇವಂತಿಗೆ ಮುಂತಾದ ಹೂವುಗಳನ್ನು ಅವರು ನೇರವಾಗಿ ರೈತರಿಂದ ಖರೀದಿಸಿದ್ದರು.
Comments are closed.