ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಪದ್ಮಾವತಿ’ಯನ್ನು ಸಿನಿಪ್ರಿಯರು ಈಗಾಗಲೇ ಬೆರಗುಗಣ್ಣುಗಳಿಂದ ನಿರೀಕ್ಷಿಸುತ್ತಿದ್ದಾರೆ. ಈಗ ಆ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಲಿದೆ. ಅದಕ್ಕೆ ಕಾರಣ ಐಶ್ವರ್ಯಾ ರೈ ಬಚ್ಚನ್. ‘ಪದ್ಮಾವತಿ’ಯಲ್ಲಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ, ರಾಣಿ ಪದ್ಮಿನಿಯ ಗೆಟಪ್ನಲ್ಲಿ ಅದ್ದೂರಿಯಾಗಿ ಮಿಂಚಲಿದ್ದಾರೆ. ಅವರ ಜತೆಗೆ ಐಶ್ವರ್ಯಾ ರೈ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಲೇಟೆಸ್ಟ್ ನ್ಯೂಸ್. ಆ ಮೂಲಕ ಸಿನಿಪ್ರಿಯರ ಕಣ್ಣಿಗೆ ಹಬ್ಬ ಮಾಡಿಸಲು ಮುಂದಾಗಿದ್ದಾರಂತೆ ನಿರ್ದೇಶಕ ಬನ್ಸಾಲಿ.
ಚಿತ್ರದ ಪ್ರಮುಖ ಪಾತ್ರದಲ್ಲಿ ದೀಪಿಕಾ ಜತೆ ರಣವೀರ್ ಸಿಂಗ್ ಹಾಗೂ ಶಾಹಿದ್ ಕಪೂರ್ ಇರುವುದರಿಂದ ತಾರಾಗಣ ಈಗಾಗಲೇ ಅದ್ದೂರಿಯಾಗಿದೆ. ಆದರೆ ಅದನ್ನು ಮತ್ತಷ್ಟು ಕಳೆಗಟ್ಟಿಸಲು ನಿರ್ಧರಿಸಿರುವ ನಿರ್ದೇಶಕ ಬನ್ಸಾಲಿ, ಐಶ್ವರ್ಯಾ ಅವರನ್ನು ವಿಶೇಷ ಅತಿಥಿ ಪಾತ್ರವೊಂದಕ್ಕೆ ಆಯ್ಕೆ ಮಾಡಿಕೊಂಡಿದ್ದಾರಂತೆ. ‘ಪದ್ಮಾವತಿ’ಗೆಂದೇ ವಿಶೇಷವಾದ ಹಾಡೊಂದನ್ನು ರಚಿಸಿರುವ ಅವರು, ಆ ಹಾಡಿಗೆ ಐಶ್ ಬಿಟ್ಟು ಇನ್ಯಾರೇ ಹೆಜ್ಜೆ ಹಾಕಿದರೂ ಅಷ್ಟು ಆಕರ್ಷಕವಾಗಿರಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ್ದಾರೆ. ಅದಕ್ಕಾಗಿ ಐಶ್ ಅವರನ್ನು ನಿಗದಿಗೊಳಿಸಿದ್ದಾರೆ. ಈಗಾಗಲೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಈ ಹಾಡಿನ ಶೂಟಿಂಗ್ ನಡೆಯಲಿದೆ. ರಿಹರ್ಸಲ್ ಸೇರಿ ಅದಕ್ಕೆ ಒಟ್ಟಿಗೆ 15 ರಿಂದ 20 ದಿನಗಳನ್ನು ಮೀಸಲಿಡಲಾಗಿದೆ. ಆದರೆ ದೀಪಿಕಾ ಹಾಗೂ ಐಶ್ ಇಬ್ಬರೂ ಒಟ್ಟಿಗೇ ನರ್ತಿಸಲಿದ್ದಾರಾ ಎಂಬುದಿನ್ನೂ ಖಚಿತವಾಗಿಲ್ಲ.
ಅಂದಹಾಗೆ, ಸಂಜಯ್ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಐಶ್ವರ್ಯಾ ರೈ ಅಭಿನಯಿಸಿದ್ದ ‘ಹಮ್ ದಿಲ್ ದೇ ಚುಕೆ ಸನಮ್ ಹಾಗೂ ‘ದೇವ್ದಾಸ್’ ಚಿತ್ರಗಳು ಭರ್ಜರಿ ಯಶಸ್ಸು ಗಳಿಸಿದ್ದವು. ಈ ಹಿಂದಿನ ಅವರ ‘ಬಾಜಿರಾವ್ ಮಸ್ತಾನಿ’ಯಲ್ಲಿ ಮಸ್ತಾನಿಯಾಗಿ ಐಶ್ ಕಾಣಿಸಿಕೊಳ್ಳಬೇಕಿತ್ತು, ಆದರೆ ಕಾರಣಾಂತರದಿಂದ ಆಗಿರಲಿಲ್ಲ. ಅದಕ್ಕೂ ಮುನ್ನ ‘ಗುಜಾರಿಷ್’ ನಲ್ಲಿ ಇಬ್ಬರು ಜತೆಯಾಗಿದ್ದೇ ಕೊನೆ. ಈಗ ಮತ್ತೆ ಬನ್ಸಾಲಿ ನಿರ್ದೇಶನದಲ್ಲಿ ಐಶ್ ಕಾಣಿಸಿಕೊಳ್ಳಲಿ ರುವುದರಿಂದ ‘ಪದ್ಮಾವತಿ’ಯ ಬಗ್ಗೆ ಅಪಾರ ಕುತೂಹಲ ಸೃಷ್ಟಿಯಾಗಿದೆ.
Comments are closed.