ಆರೋಗ್ಯ

ಕೆಳಬೆನ್ನು ನೋವಿಗೆ ಮುಖ್ಯ ಕಾರಣಗಳು ತಿಳಿಯಿರಿ…..(ವೀಡಿಯೋ ವರದಿ)

Pinterest LinkedIn Tumblr

ಬೆನ್ನುನೋವು, ತಲೆನೋವಿನಂತೆ ಅತಿ ಸಾಮಾನ್ಯವಾಗಿ ಕಂಡು ಬರುವ ಮತ್ತೊಂದು ತೊಂದರೆ. ಕುತ್ತಿಗೆಯ ಹಿಂಬದಿಯೂ ಬೆನ್ನ ಭಾಗವೇ ಆದರೂ ಹೆಚ್ಚಾಗಿ, ಬೆನ್ನು ನೋವು ಎನ್ನುವಾಗ ಕೆಳಬೆನ್ನು ಅಥವಾ ಸೊಂಟದ ಭಾಗವನ್ನು ಗಮನದಲ್ಲಿರಿಸಿಕೊಂಡು ಹೇಳುವರು. ಪ್ರತಿಯೊಬ್ಬರಿಗೂ ಒಮ್ಮೆಯಾದರೂ ಈ ಬೆನ್ನು ನೋವು ಕಂಡುಬರುತ್ತದೆ.
ಇದರ ಸಂಖ್ಯೆ ಮತ್ತು ಪ್ರಮಾಣ ಈಗೀಗ ಹೆಚ್ಚುತ್ತಿವೆ. ಕಾರಣ, ಏರುತ್ತಿರುವ ಬೊಜ್ಜು ಮತ್ತು ದೇಹಕ್ಕೆ ವ್ಯಾಯಾಮ ನೀಡದೇ ಗಂಟೆಗಟ್ಟಲೆ ಕುಳಿತೇ ಕೆಲಸ ಮಾಡುವುದು. ಇವುಗಳಿಂದಾಗಿ ಬೆನ್ನು ಹುರಿಯ ಸಹಜ ರಚನೆಯಲ್ಲಿ ವ್ಯತ್ಯಾಸ ತೋರಿ ನೋವುಂಟಾಗುವ ಸಂಭವ ಹೆಚ್ಚು.

ಇದಕ್ಕೆ ಮುಖ್ಯ ಕಾರಣಗಳು:
* ಮೂಳೆಯ ಸವೆತ
* ಬೆನ್ನುಹುರಿಯ ಮೇಲೆ ಅತಿಯೊತ್ತಡ
* ರುಮಟೋಯಿಡ್ ಮುಂತಾದ ಸಂಧಿವಾತ
* ಬೆನ್ನು ಮೂಳೆಗಳ ಮಧ್ಯೆ ಇರುವ ಡಿಸ್ಕ್ ತೊಂದರೆ, ಬೆನ್ನುಹುರಿ ತೊಂದರೆ
* ಬೆನ್ನುಹುರಿಯ ಸುರಂಗ ಚಿಕ್ಕದಾಗುವಿಕೆ.
* ಮಾಂಸಪೇಶಿಗಳ ಬಿಗಿತ ಮುಂತಾದ ತೊಂದರೆ.
* ವಯೋ ಸಹಜ ವಾತ (ಆರ್ತ್ರೈಟಿಸ್)

lower_back_pain_1 lower_back_pain_2

ಕೆಳ ಬೆನ್ನು ನೋವು ಸಾಮಾನ್ಯಾವಾಗಿ, ಆಟವಾಡುವಾಗ, ಬೊಜ್ಜು, ನಿಷ್ಕ್ರಿಯತೆ, ಒತ್ತಡ ಅಥವಾ ಆರ್ತರೈಟಿಸ್‌ನಿಂದ ಬರುತ್ತದೆ. ಸಾಮಾನ್ಯವಾಗಿ ಒಂದು ಅಥವಾ ಕೆಲವು ವಾರಗಳಲ್ಲಿ ನೋವು ಗುಣ ಹೊಂದುತ್ತದೆ. ಇನ್ನೂ ಸರಿಯಾಗದಿದ್ದಲ್ಲಿ ವೈದ್ಯರ ಸಲಹೆ ಮತ್ತು ಕೆಲ ಪರೀಕ್ಷೆಗಳ ಅಗತ್ಯವಿದೆ. ಕಶೇರುವಿನಲ್ಲಿ ೩೦ಕ್ಕೂ ಹೆಚ್ಚು ಬೆನ್ನು ಮೂಳೆಯು ಒಂದರ ಮೇಲೊಂದು ನಮ್ಮ ದೇಹದ ಭಾರವನ್ನು ಹೊರುವಲ್ಲಿ ಸಹಾಯ ಮಾಡುತ್ತ ಕುಳಿತಿರುತ್ತವೆ.

ಅವುಗಳ ಮಧ್ಯೆ ಡಿಸ್ಕ್ ಎಂಬ ಮೆತ್ತನೆಯ ವಸ್ತುವಿರುತ್ತದೆ. ಇವು ಬೆನ್ನು ಬಗ್ಗಿ ಏಳುವಾಗ ತೊಂದರೆಯಾಗದಂತೆ ನೋಡಿಕೊಳ್ಳುತ್ತವೆ. ಈ ಕಶೇರುವಿನ ಮಧ್ಯೆ ಮಿದುಳಿನಿಂದ ಹೊರಟ ದೇಹದ ನರಮಂಡಲದ ಅತಿ ಮುಖ್ಯ ಅಂಗವಾದ ಬೆನ್ನು ಹುರಿ ಸ್ಪೈನಲ್ ಕಾರ್ಡ್ ಇರುತ್ತದೆ. ನೋವು ಕಡಿಮೆಯಾಗದಿದ್ದಲ್ಲಿ ಈ ಅಂಗಕ್ಕೇನಾದರೂ ತೊಂದರೆ ಅಥವಾ ಒತ್ತಡ ಬೀಳುತ್ತಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು.

ನಮಗೆ ವಯಸ್ಸಾದಂತೆ, ಮೂಳೆ ಸವೆಯಲು ತೊಡಗುತ್ತದೆ, ಅದನ್ನು ಹಿಡಿದಿಡುವ ಪೇಶಿಗಳು ದುರ್ಬಲಗೊಳ್ಳುತ್ತವೆ, ಡಿಸ್ಕ್ ನಲ್ಲಿರುವ ನೀರಿನಂಶ ಕಮ್ಮಿಯಾಗುತ್ತದೆ ಹಾಗೂ ಅದರ ಆಕಾರ ಚಿಕ್ಕದಾಗಬಹುದು. ಹತ್ತಿಯಂತಹ ಗುಣ ಕಡಿಮೆಯಾಗುತ್ತದೆ. ಹೆಚ್ಚಾಗಿ ಮುಂದೆ ಬಗ್ಗಿ ಏನಾದರೂ ಭಾರ ಎತ್ತಿದಲ್ಲಿ ಅಥವಾ ದೂರವಿರುವ ವಸ್ತುವನ್ನು ಬಾಗಿ ಎಳೆದು ತೆಗೆಯುವಾಗ ಬೆನ್ನ ಮೇಲೆ ಒತ್ತಡ ಹೆಚ್ಚಾಗಿ ಮಾಂಸ ಪೇಶಿಗಳಲ್ಲಿ ಬಿಗಿತ ಬರುತ್ತದೆ. ಬೊಜ್ಜು, ಗರ್ಭಾವಸ್ಥೆ, ಧೂಮ್ರಪಾನ, ಋತುನಿವೃತ್ತಿ ಸಮಯದಲ್ಲಾಗುವ ಮೂಳೆ ಸವಕಲು, ಮಾನಸಿಕ ಒತ್ತಡ, ಬೆನ್ನನ್ನು ವಕ್ರವಾಗಿಟ್ಟುಕೊಳ್ಳುವುದು ಇತ್ಯಾದಿಗಳಿಂದ ತೊಂದರೆ ಹೆಚ್ಚುತ್ತದೆ.

ಈ ನೋವಿನೊಂದಿಗೆ, ಜ್ವರ ಅಥವಾ ಮಲಮೂತ್ರ ವಿಸರ್ಜನೆಯ ಅನಿಯಂತ್ರತೆ, ಕೆಮ್ಮಿದಾಗ ಹೆಚ್ಚುವ ನೋವು, ಕಾಲುಗಳ ಬಲಹೀನತೆ ಮುಂತಾದುವುಗಳು ಕಂಡು ಬಂದರೆ ತುರ್ತಾಗಿ ವೈದ್ಯರನ್ನು ಕಾಣಬೇಕು. ಇವು ಗಂಭೀರ ಕಾರಣಗಳಿಂದ ಉಂಟಾಗುತ್ತವೆ. ಅಗತ್ಯವಿದ್ದಲ್ಲಿ, ಕ್ಷ ಕಿರಣ, ಎಮ್. ಆರ್. ಐ, ರಕ್ತ ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ.

ಮಾಡಲೇ ಬೇಕಾದ ಅಗತ್ಯ ಚಿಕಿತ್ಸೆಗಳು:
95 ಪ್ರತಿಶತ ಬೆನ್ನು ನೋವು ಕೇವಲ ವಿಶ್ರಾಂತಿ ಮತ್ತು ಸ್ವಲ್ಪ ಔಷಧಿಗಳ ಸಹಾಯದಿಂದ ಸರಿ ಹೋಗುತ್ತದೆ. ಸರಿಯಾದ ಸಲಹೆ ಮಾತ್ರ ಅತಿ ಮುಖ್ಯ. ವಿಶ್ರಾಂತಿಯೆಂದರೆ ಕುಳಿತು ಟಿ.ವಿ. ನೋಡುವುದಲ್ಲ. ಮುಖ್ಯವಾಗಿ ಮುಂದೆ ಬಗ್ಗಿ ಭಾರ ಎತ್ತಬಾರದು. ದಿನದ ಹೆಚ್ಚಿನ ಭಾಗ ಅಂಗಾತ ಮಲಗಿರಬೇಕು. ಡಿಸ್ಕ್ ತೊಂದರೆಗಳಿದ್ದಲ್ಲಿ, ಅಭ್ಯಂಗ, ಕಟಿವಸ್ತಿ ಮತ್ತು ಔಷಧಿಗಳು ಸಹಾಯಕರ. ಮೂರು ವಾರ ಕಳೆದರೂ ಬೆನ್ನು ನೋವು ಕಡಿಮೆಯಾಗದಿದ್ದಲ್ಲಿ ಅಥವಾ ಕಾಲು ಜೋಮು ಹಿಡಿಯುವುದು, ಉಂಟಾದಲ್ಲಿ ಹೆಚ್ಚಿನ ಪರೀಕ್ಷೆ ಹಾಗೂ ಚಿಕಿತ್ಸೆಯ ಅಗತ್ಯವಿದೆ.

ಬೆನ್ನು ನೋವಿನಲ್ಲಿ ಅತಿ ಮುಖ್ಯವಾದ ಪಾತ್ರ ವ್ಯಾಯಾಮದ್ದು. ಹೆಚ್ಚಿನವರು ನೋವು ಗುಣವಾದ ಮೇಲೆ ಸ್ವಲ್ಪ ದಿವಸದಲ್ಲೇ ವ್ಯಾಯಾಮವನ್ನು ಮರೆತುಬಿಡುತ್ತಾರೆ. ಇದರಿಂದ ಪುನ: ಪುನ: ಬಳಲುವ ಸಾಧ್ಯತೆ ಹೆಚ್ಚು. ಹಾಗಾಗಿ ವ್ಯಾಯಾಮ ಸುತಾರಾಂ ಮರೆಯಕೂಡದು, ಬಿಡಬಾರದು. ಮುಖ್ಯವಾದ ಕೆಳಬೆನ್ನಿಗೆ ಸಹಕಾರಿಯಾದ ಐದು ವ್ಯಾಯಾಮಗಳನ್ನು ಇಲ್ಲಿ ಕೊಡಲಾಗಿದೆ. ಹಾಗೆಯೇ ಎಂದೂ ಬೆನ್ನು ಬಗ್ಗಿಸಿ ಭಾರವನ್ನೆತ್ತಬಾರದು. ಭಾರ ಎತ್ತುವಾಗ ಕುಳಿತು, ಮಂಡಿಯನ್ನು ಮಡಚಿ ಎತ್ತಬೇಕು.

lower_back_pain_3 lower_back_pain_4

ಬೆನ್ನು ನೋವು ನಿವಾರಣೆಗೆ ಸಹಾಯಕ ವ್ಯಾಯಾಮಗಳು
* ಅಂಗಾತ ಮಲಗಿ ಒಂದೊಂದಾಗಿ ಕಾಲನ್ನು ನೇರವಾಗಿ (ಮಂಡಿ ಮಡಚದೆ) ಒಂದು ಅಡಿಯಷ್ಟು ಎತ್ತಿ ಹತ್ತು ಸಲ ಎಣಿಸಿ ಕೆಳಗಿಡಿ.
* ಕಾಲೆರಡನ್ನೂ ಮಡಚಿ ಬೆನ್ನು ಮತ್ತು ನಿತಂಬವನ್ನು ಎತ್ತಿ ಹಿಡಿದು ಹತ್ತು ಎಣಿಸುವುದು.
* ಎರಡೂ ಕಾಲನ್ನು ಮಡಚಿ ಕೈಯ್ಯಲ್ಲಿ ಹಿಡಿದು ಮಂಡಿಗೆ ಮೂಗು ತಾಗಿಸಲು ಯತ್ನಿಸುವುದು.
* ಬೋರಲು ಮಲಗಿ ಮೊದಲನೆಯಂತೆ ಕಾಲನ್ನು ನೇರವಾಗಿ ಒಂದು ಅಡಿ ಮೇಲೆತ್ತಿ ಹಿಡಿದು ಬಿಡುವುದು.
* ನಿರಂತರ ವ್ಯಾಯಾಮ ಮಾಡಿದಲ್ಲಿ ಕೆಳಬೆನ್ನು ನೋವನ್ನು ಅತ್ಯಂತ ಸುಲಭ ರೀತಿಯಲ್ಲಿ ಹತೋಟಿಯಲ್ಲಿಡಬಹುದು.

ನೆನಪಿಡಬೇಕಾದ ಅಂಶಗಳು:
* ಕುಳಿತುಕೊಳ್ಳುವಾಗ, ನಿಲ್ಲುವಾಗ, ಮಲಗುವಾಗ ದೇಹವನ್ನು ನೇರವಾಗಿ ಸರಿಯಾಗಿಟ್ಟುಕೊಳ್ಳಬೇಕು.
* ಅತಿ ಮೆತ್ತನೆಯ ಹಾಸಿಗೆ ಬೇಡ. ಅತಿ ಎತ್ತರ ಹಿಮ್ಮಡಿ ಇರುವ ಚಪ್ಪಲಿಗಳನ್ನು ಧರಿಸದಿರಿ.
* ಸೊಂಟದ ಹತ್ತಿರ ಬೊಜ್ಜು ಬೆಳೆಯದಿರಲಿ. ಊಟದಲ್ಲಿ ಸಮತೋಲನ ಕಾಪಾಡಿ.
* ನಿಯಮಿತ ವ್ಯಾಯಾಮ ಮಾಡಿ.
* ಮೂಳೆ ಸವಕಲು ಬಾರದಂತೆ ಕ್ಯಾಲ್ಸಿಯಮ್, ಡಿ ವಿಟಮಿನ್, ಮುಂತಾದುವುಗಳ ಪ್ರಮಾಣ ಗಮನದಲ್ಲಿರಲಿ.

Comments are closed.