ಮಂಗಳೂರು,ಡಿಸೆಂಬರ್,22: ಮಂಗಳೂರಿನ ಬಂದರು ಹಾಗೂ ಸುರತ್ಕಲ್ ಸಮೀಪ ಇಂದು ಬೆಳಿಗ್ಗೆ ನಡೆದ ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಇಂದು ಬೆಳಿಗ್ಗೆ ಮಂಗಳೂರಿನ ಬಂದರ್ ದಕ್ಕೆಯಲ್ಲಿ ಲಾರಿಯೊಂದು ಢಿಕ್ಕಿ ಹೊಡೆದು ಪಾದಚಾರಿಯೊಬ್ಬರು ಮೃತಪಟ್ಟಿದ್ದಾರೆ.ಮೃತರನ್ನು ಮೀನು ವ್ಯಾಪಾರಿ, ಮೋರ್ಗನ್ಗೇಟ್ ನಿವಾಸಿ ಇಸ್ಮಾಯೀಲ್ ಬೋಳಾರ(63) ಎಂದು ಗುರುತಿಸಲಾಗಿದೆ.
ಇವರು ದಕ್ಕೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಲಾರಿಯೊಂದು ಇವರಿಗೆ ಢಿಕ್ಕಿ ಹೊಡೆದಿದೆ. ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಇಂದು ಬೆಳಿಗ್ಗೆ ಸುರತ್ಕಲ್ ಸಮೀಪದ ಕುಳಾಯಿ ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಕುಳಾಯಿ ನಿವಾಸಿ ಮಹಾಬಲೇಶ್ವರ ಎಂದು ಗುರುತಿಸಲಾಗಿದೆ. ಇವರು ಕುಳಾಯಿಯ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಇವರಿಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ಮಹಾಬಲೇಶ್ವರ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.