ಪ್ರಮುಖ ವರದಿಗಳು

ವಿಜಯ್ ಮಲ್ಯರ ಬೆನ್ನಲ್ಲೇ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಬಂಡಾರಿ ಲಂಡನ್’ಗೆ ಪರಾರಿ !

Pinterest LinkedIn Tumblr

sanjay_bhandari

ನವದೆಹಲಿ: ವಿವಿಧ ಬ್ಯಾಂಕುಗಳಿಂದ ಪಡೆದ ಸಾಲದ ಮೊತ್ತವನ್ನು ಪಾವತಿ ಮಾಡದೇ ವಿದೇಶಕ್ಕೆ ಹಾರಿರುವ ಉದ್ಯಮಿ ವಿಜಯ್ ಮಲ್ಯ ಮಾದರಿಯಲ್ಲೇ ಭಾರತದ ಮತ್ತೊರ್ವ ಉದ್ಯಮಿ ಲಂಡನ್ ಗೆ ಹಾರಿರುವ ಶಂಕೆ ವ್ಯಕ್ತವಾಗುತ್ತಿದೆ.

ವಿವಿಧ ಪ್ರಕರಣಗಳಲ್ಲಿ ಭಾರತದ ವಿವಿಧ ಇಲಾಖೆಗಳ ತನಿಖೆ ಎದುರಿಸುತ್ತಿರುವ ಖ್ಯಾತ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಬಂಡಾರಿ ಲಂಡನ್ ಪರಾರಿಯಾಗಿರುವ ಕುರಿತು ಶಂಕೆಗಳು ವ್ಯಕ್ತವಾಗುತ್ತಿವೆ. ಸರ್ಕಾರಿ ಮೂಲಗಳು ತಿಳಿಸಿರುವಂತೆ ಉದ್ಯಮಿ ಸಂಜಯ್ ಬಂಡಾರಿ ನೇಪಾಳ ಮಾರ್ಗವಾಗಿ ಬ್ರಿಟೀಷ್ ಏರ್ ವೇಸ್ ಮೂಲಕ ಲಂಡನ್ ಗೆ ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವಿಜಯ್ ಮಲ್ಯ ಪ್ರಕರಣದಿಂದ ಈಗಾಗಲೇ ಸಾಕಷ್ಟು ಮುಜುಗರ ಎದುರಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಇದೀಗ ಸಂಜಯ್ ಬಂಡಾರಿ ಪ್ರಕರಣ ಮತ್ತೊಂದು ಹೊಸ ತಲೆನೋವನ್ನು ತಂದಿಟ್ಟಿದೆ.

ಈ ಹಿಂದೆ ಹಲವು ಪ್ರಕರಣಗಳಲ್ಲಿ ಸಂಜಯ್ ಬಂಡಾರಿ ವಿಚಾರಣೆ ಎದುರಿಸಿದ್ದರು. ಅಕ್ಬೋಬರ್ ತಿಂಗಳಲ್ಲಿ ನಡೆದಿದ್ದ ಐಟಿ ಅಧಿಕಾರಿಗಳ ವೇಳೆ ಸಂಜಯ್ ಬಂಡಾರಿ ಅವರ ನಿವಾಸ ಹಾಗೂ ಕಚೇರಿಗಳಲ್ಲಿ ಭಾರತೀಯ ಸೇನೆಗೆ ಸೇರಿದ ಶಸ್ತ್ರಾಸ್ತ್ರಗಳ ರಹಸ್ಯ ಕಡತಗಳ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಇವರ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆ ಸೆಕ್ಷನ್ 3 ಮತ್ತು 5ರಡಿಯಲ್ಲಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಏಪ್ರಿಲ್ ನಲ್ಲಿ ನಡೆದ ಆದಾಯ ತೆರಿಗೆ ಇಲಾಖೆಗಳ ದಾಳಿ ವೇಳೆಯಲ್ಲೂ ಸಾಕಷ್ಚು ದಾಖಲೆಗಳು ಪತ್ತೆಯಾಗಿದ್ದವು. ಏಪ್ರಿಲ್ 27ರಂದು ನಡೆದಿದ್ದ ದಾಳಿ ವೇಳೆ ಸಂಜಯ್ ಬಂಡಾರಿ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ನಡುವೆ ನಡೆದಿದ್ದ ವ್ಯವಹಾರಗಳ ದಾಖಲೆಗಳು ಲಭ್ಯವಾಗಿದ್ದವು.

ಆದರೆ ಸಂಜಯ್ ಬಂಡಾರಿ ಅವರೊಂದಿಗೆ ತಾವು ಯಾವುದೇ ರೀತಿಯ ವ್ಯವಹಾರ ಹೊಂದಿಲ್ಲ ಎಂದು ರಾಬರ್ಟ್ ವಾದ್ರಾ ಆರೋಪವನ್ನು ತಳ್ಳಿ ಹಾಕಿದ್ದರು. ಇನ್ನು ಅಧಿಕೃತ ರಹಸ್ಯಗಳ ಕಾಯ್ದೆಯಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದ ಸಂಜಯ್ ಬಂಡಾರಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು. ಹೀಗಾಗಿ ಈ ಉದ್ಯಮಿ ವಿರುದ್ಧ ತನಿಖೆ ನಡೆಸಲು ದೆಹಲಿ ಪೊಲೀಸ್, ಆದಾಯ ತೆರಿಗೆ ಇಲಾಖೆ ಹಾಗೂ ರಕ್ಷಣಾ ಇಲಾಖೆ ತನಿಖಾ ತಂಡಗಳು ಸಿದ್ಧತೆಯಲ್ಲಿರುವಾಗಲೇ ಉದ್ಯಮಿ ಅನುಮಾನಾಸ್ಪದವಾಗಿ ಲಂಡನ್ ಗೆ ಪರಾರಿಯಾಗಿದ್ದಾರೆ.

ಭಾರತದಲ್ಲಿ ವಿಚಾರಣೆ ಎದುರಿಸುತ್ತಿರುವ ಉದ್ಯಮಿಗಳಿಗೆ ಲಂಡನ್ ಸ್ವರ್ಗವಾಗಿ ಪರಿಗಣಿಸಿದ್ದು, ಮದ್ಯದ ದೊರೆ ವಿಜಯ್ ಮಲ್ಯ ಬಳಿಕ ಇದೀಗ ಶಸ್ತ್ರಾಸ್ತ್ರ ಉದ್ಯಮಿ ಸಂಜಯ್ ಬಂಡಾರಿ ಕೂಡ ಲಂಡನ್ ನಲ್ಲಿ ತಲೆ ಮರೆಸಿಕೊಂಡಿದ್ದಾರೆ. ವಿಜಯ್ ಮಲ್ಯ ಲಂಡನ್ ಗೆ ತೆರಳಿದ ಕೆಲವೇ ದಿನಗಳಲ್ಲಿ ಅಲ್ಲಿ ವಾಸಿಸುವ ಹಕ್ಕು ಹಾಗೂ ಪೌರತ್ವ ಪಡೆದರು. ಹೀಗಾಗಿ ಕೇಂದ್ರ ಸರ್ಕಾರ ಎಷ್ಟೇ ಪ್ರಯತ್ನಿಸಿದರೂ ಅವರನ್ನು ಭಾರತಕ್ಕೆ ಕರೆತರಲು ಸಾಧ್ಯವಾಗುತ್ತಿಲ್ಲ. ಇಂತಹುದೇ ಬೆಳವಣಿಗೆಗಳು ಸಂಜಯ್ ಬಂಡಾರಿ ವಿಚಾರದಲ್ಲೂ ಆಗುವ ಭೀತಿ ಎದುರಾಗಿದ್ದು, ಒಂದು ವೇಳೆ ಸಂಜಯ್ ಬಂಡಾರಿ ಕೂಡ ವಿಜಯ್ ಮಲ್ಯ ಪ್ರದರ್ಶಿಸಿದ ಜಾಣತನ ಪ್ರದರ್ಶಿಸಿದರೆ ಆಗ ಖಂಡಿತ ಅವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಗಳು ಕ್ಷೀಣಿಸಿ ಮತ್ತೆ ಕೇಂದ್ರ ಸರ್ಕಾರ ತೀವ್ರ ಮುಜುಗರ ಎದುರಿಸಬೇಕಾಗುತ್ತದೆ.

Comments are closed.