ಕುಂದಾಪುರ: ಸುಮಾರು ನಾಲ್ಕು ವರ್ಷಗಳ ಕಾಲ ಪ್ರೇಮಿಸಿ ಬಳಿಕ ಆತನ ಜೊತೆಗೆ ಕಳೆದ 9 ತಿಂಗಳ ಹಿಂದೆ ಮದುವೆಯಾಗಿದ್ದ ಮಹಿಳೆಯೋರ್ವಳು ಗಂಡನ ಮನೆಯಲ್ಲಿಯೇ ವಿಷವುಂಡು ಆತ್ಮಹತ್ಯೆಗೆ ಶರಣಾದ ಘಟನೆ ಕುಂದಾಪುರ ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಜನ್ಸಾಲೆ ಎಂಬಲ್ಲಿ ನಡೆದಿದೆ.
ಜ್ಯೋತಿ ಪೂಜಾರಿ (26) ಮನೆಯಲ್ಲಿ ಕೀಟನಾಶಕ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಶರಣಾದವರು.
(ಜ್ಯೋತಿ ಪೂಜಾರಿ)
ಮದುವೆಯಾಗಿ 9 ತಿಂಗಳಾಗಿತ್ತು..
ಮೂಲತಃ ಕುಂದಾಪುರದ ಬಳ್ಕೂರು ಎಂಬಲ್ಲಿನ ನಿವಾಸಿಯಾದ ಜ್ಯೋತಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಬಂದ ಮೊಬೈಲ್ ಕರೆ ಅವಳ ಮನಸ್ಸಲ್ಲಿ ಪ್ರೀತಿಯ ಚಿಗುರೊಡೆಸಿತ್ತು. ಜನ್ಸಾಲೆ ನಿವಾಸಿ ಉಮೇಶ್ ಎಂಬಾತನ ಜೊತೆ ಪ್ರೀತಿ ಮಾಡಿ ಮನೆಯವರನ್ನು ಒಪ್ಪಿಸಿ ಕಳೆದ ಎಫ್ರಿಲ್ ತಿಂಗಳಿನಲ್ಲಿ ಮದುವೆಯನ್ನು ಆಗಿದ್ದರು. ಬೆಂಗಳೂರಿನಲ್ಲಿ ಹೋಟೇಲೊಂದರಲ್ಲಿ ಸೂಪರ್ ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಉಮೇಶ್ ಜ್ಯೋತಿಯನ್ನು ತನ್ನ ನಿವಾಸದಲ್ಲಿ ಬಿಟ್ಟು ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದ.
ಅತ್ತೆ ಕಿರುಕಳ ಕಾರಣವೇ..?
ಜನ್ಸಾಲೆಯ ಉಮೇಶನ ನಿವಾಸದಲ್ಲಿ ಅತ್ತೆ, ಮಾವ, ಇಬ್ಬರು ಮೈದುನರು ಹಾಗೂ ನಾದಿನಿ ಜೊತೆಗೆ ವಾಸವಿದ್ದ ಜ್ಯೋತಿ ತನ್ನ ತವರು ಮನೆಗೆ ಆಗ್ಗಾಗೆ ಫೋನ್ ಕರೆ ಮಾಡಿ ಮಾತನಾಡುತ್ತಿದ್ದು ಬಿಟ್ಟರೇ ಹೆಚ್ಚಾಗಿ ಅವರೊಂದಿಗೆ ಸಂಪರ್ಕದಲ್ಲಿರಲಿಲ್ಲ. ಆದರೇ ಇತ್ತೀಚೆಗೆ ಕೆಲವು ಬಾರಿ ಕರೆ ಮಾಡಿದಾಗ ಅತ್ತೆ ಬೈಯುತ್ತಾರೆ, ನಿಂದಿಸುತ್ತಾರೆ ಎಂದು ತನ್ನ ತಾಯಿಯ ಬಳಿ ದೂರಿಕೊಂಡಿದ್ದರು. ಎರಡು ದಿನಗಳ ಹಿಂದೆಯೂ ತಾಯಿಗೆ ಕರೆ ಮಾಡಿ ಮಾತನಾಡಿದ್ದ ಆಕೆ ಕೊನೆಗೆ ಮನೆಯವರಿಗೆ ನೋಡಲು ಸಿಕ್ಕಿದ್ದು ಹೆಣವಾಗಿ.
ವಿಷವುಂಡ ಜ್ಯೋತಿ…
ಶನಿವಾರ ಸಂಜೆ ಸುಮಾರಿಗೆ ಜ್ಯೋತಿಯವರ ತಂದೆಗೆ ಆಕೆಗೆ ಮೈ ಹುಷಾರಿಲ್ಲ ಕೂಡಲೇ ಬನ್ನಿರಿ ಎನ್ನುವ ದೂರವಾಣಿ ಕರೆ ಬರುತ್ತದೆ. ಆದರಂತೆಯೇ ಅವರು ಹೊರಡಲು ಅಣಿಯಾದಾಗ ಕುಂದಾಪುರ ಆಸ್ಪತ್ರೆಗೆ ಬರಲು ಉಮೇಶನ ಸಂಬಂಧಿಕರು ತಿಳಿಸುತ್ತಾರೆ. ಅಲ್ಲಿ ತೆರಳಿ ನೋಡಿದಾಗ ಜ್ಯೋತಿ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬರುತ್ತದೆ. ಆಕೆ ಗಂಡನ ಮನೆಯಲ್ಲಿಯೇ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮ ಮಗಳ ಈ ಆತ್ಮಹತ್ಯೆಯ ನಿರ್ಧಾರಕ್ಕೆ ಆಕೆ ಅತ್ತೆ ನೀಡಿದ ಕಿರುಕುಳವೇ ಕಾರಣ ಎಂದು ಜ್ಯೋತಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
Comments are closed.