ರಾಷ್ಟ್ರೀಯ

ಕುಡಿದು 35 ದಿನಗೂಲಿ ನೌಕರರ ಮೇಲೆ ಕಾರು ಚಲಾಯಿಸಿದ ಮಾಜಿ ಶಾಸಕ!

Pinterest LinkedIn Tumblr


ಉತ್ತರಪ್ರದೇಶ(ಜ.08): ಉತ್ತರ ಪ್ರದೇಶದ ಲಕ್ನೋದಲ್ಲಿ ಕಾರೊಂದು ಗುಡಿಸಲಿಗೆ ನುಗ್ಗಿ ನಾಲ್ವರನ್ನು ಬಲಿ ತೆಗೆದುಕೊಂಡಿದೆ. ಲಕ್ನೋದ ದಾಲಿಬಾಗ್‌ ಏರಿಯಾದಲ್ಲಿ ನಸುಕಿನ ಜಾವ 2 ಗಂಟೆಗೆ ಹುಂಡೈ ಐ-20 ಕಾರೊಂದು ರಸ್ತೆ ಬದಿಯ ಗುಡಿಸಲಿಗೆ ನುಗ್ಗಿದೆ.
ಗುಡಿಸಲಿನಲ್ಲಿ ಸುಮಾರು 35 ದಿನಗೂಲಿ ನೌಕರರು ಮಲಗಿದ್ದರು. ನೌಕರರ ಮೇಲೆ ಕಾರು ಹರಿದಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 6 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ರಕ್ಷಣಾ ಕಾರ್ಯ ಮುಂದುವರಿಸಿದ್ದಾರೆ.
ಇವರೆಲ್ಲರು ಬಹರೈಚ್ ಜಿಲ್ಲೆಯವರು ಎಂದು ತಿಳಿದುಬಂದಿದೆ. ಕೃತ್ಯವೆಸಗಿ ಕಾರಿನ ಸಮೇತ ಚಾಲಕ ಮತ್ತು ಸಹಚರರು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಇತರ ಕಾರ್ಮಿಕರು ಕಾರಿನ ಸಮೇತ ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಇನ್ನು ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಬಂಧಿತರಲ್ಲಿ ಓರ್ವ ಬ್ಯುಸಿನೆಸ್‌’ಮ್ಯಾನ್‌ ಮಗ ಹಾಗೂ ಸ್ಥಳೀಯ ಮಾಜಿ ಶಾಸಕ ಎಂದು ತಿಳಿದುಬಂದಿದೆ. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ಘಟನೆ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಾರಿಯಾಗಿರುವ ಆರೋಪಿಗಳಿಗೆ ಶೋಧ ನಡೆಸಿದ್ದಾರೆ.

Comments are closed.