ನವದೆಹಲಿ: 500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದ ಭಾರತೀಯ ರಿಸರ್ವ್ ಬ್ಯಾಂಕ್ ನ ಕ್ರಮವನ್ನು ಸಂಸದೀಯ ಸಮಿತಿ ಪ್ರಶ್ನಿಸಿದ್ದು, ಈ ಬಗ್ಗೆ ಜನವರಿ 20ರೊಳಗೆ ಉತ್ತಕ ನೀಡುವಂತೆ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರಿಗೆ ಸೂಚನೆ ನೀಡಿದೆ.
ಕಾಂಗ್ರೆಸ್ ಪಕ್ಷ ಮುಖಂಡರು ಹಾಗೂ ಸಂಸದೀಯ ಸಮಿತಿಯ ಅಧ್ಯಕ್ಷರೂ ಕೂಡ ಆಗಿರುವ ಕೆವಿ ಥಾಮಸ್ ಅವರನ್ನೊಳಗೊಂಡ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರಿಗೆ ನೋಟು ನಿಷೇಧ ಸಂಬಂಧ ಕೆಲ ಪ್ರಶ್ನೆಗಳನ್ನು ಮುಂದಿಟ್ಟಿದ್ದು, ನೋಟು ನಿಷೇಧದ ಬಳಿಕ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಆರ್ ಬಿಐ ಕೈಗೊಂಡಿರುವ ಕ್ರಮಗಳ ಕುರಿತೂ ಕೂಡ ವಿವರ ನೀಡಬೇಕು ಎಂದು ಸೂಚಿಸಿದೆ.
ಕಳೆದ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ರು. ನೋಟುಗಳನ್ನು ನಿಷೇಧಿಸಿದ ದಿನದಿಂತ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ನಿಷೇಧಿತ ಹಳೆಯ ನೋಟುಗಳಿಗೆ ಪರ್ಯಾಯವಾಗಿ ಬಿಡುಗಡೆಯಾಗಿರುವ ಹೊಸ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಇಲ್ಲ. ಹೀಗಾಗಿ ದೇಶದಲ್ಲಿ ನಗದು ಬಿಕ್ಕಟ್ಟು ಎದುರಾಗಿದ್ದು, ಜನ ಕಂಗಾಲಾಗುವಂತೆ ಮಾಡಿದೆ. ದೇಶದ ಬಹುತೇಕ ಎಟಿಎಂಗಳು ನೋಟು ಭರ್ತಿಯಾದ ಕೆಲವೇ ಗಂಟೆಗಳಲ್ಲಿ ಖಾಲಿಯಾಗುತ್ತಿದ್ದು, ನೋಟು ಅಭಾವಕ್ಕೆ ಹಿಡಿದ ಕನ್ನಡಿಯಾಗಿದೆ.
ಇನ್ನು ಕೇಂದ್ರ ಸರ್ಕಾರದ ನಿರ್ಧಾರವನ್ನು ವಿಪಕ್ಷಗಳು ವ್ಯಾಪಕವಾಗಿ ಟೀಕಿಸಿದ್ದು, ಸರ್ಕಾರದ ನಿರ್ಧಾರಕ್ಕೆ ಸಂಸತ್ ಉಭಯ ಕಲಾಪಗಳಲ್ಲಿ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕಾಗಿ ಸಂಸದೀಯ ಸಮಿತಿ ನೋಟು ನಿಷೇಧ ಸಂಬಂಧ ವಿಚಾರಣೆ ನಡೆಸುತ್ತಿದೆ.
ಕೇಂದ್ರ ಸರ್ಕಾರ ನಗದುರಹಿತ ವಹಿವಾಟಿಗೆ ಉತ್ತೇಜನ ನೀಡುತ್ತಿದೆಯಾದರೂ ಒಮ್ಮಿಂದೊಮ್ಮೆಲೆ ನಗದು ವಹಿವಾಟಿನಿಂದ ನಗದು ರಹಿತ ವಹಿವಾಟಿಗೆ ಬದಲಾಗಲು ದೇಶದ ಜನತೆಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆರ್ಥಿಕ ಬಿಕ್ಕಟ್ಟು ಮುಂದುವರೆದಿದ್ದು, ನಗದು ಅಭಾವದಿಂದಾಗಿ ಸಾಕಷ್ಟು ಕ್ಷೇತ್ರಗಳು ವಹಿವಾಟಿಲ್ಲದೇ ನಷ್ಟ ಅನುಭವಿಸುತ್ತಿವೆ.
ರಾಷ್ಟ್ರೀಯ
Comments are closed.