ಬೆಂಗಳೂರು: ಗುಂಡೇಟಿನಿಂದ ಗಾಯಗೊಂಡಿದ್ದ ಗೆಳೆಯ ಅಮಿತ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ವಸತಿಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡ ಶ್ರುತಿ ಗೌಡ, ರಾಜ್ಯದ ಶ್ರೀಮಂತ ಪಿಡಿಒಗಳ ಪಟ್ಟಿಯಲ್ಲಿ ಮೊದಲಿಗರಾಗಿದ್ದರು.
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ರಾಜ್ಯದ ಪ್ರತಿಯೊಬ್ಬ ಪಿಡಿಒಗಳು ವರ್ಷಕ್ಕೊಮ್ಮೆ ಆಸ್ತಿ ವಿವರ ಸಲ್ಲಿಸುತ್ತಾರೆ. ಅದರಂತೆ ಶ್ರುತಿ ಸಹ ನಿಗದಿತ ನಮೂನೆಯಲ್ಲಿ ಆಸ್ತಿ ವಿವರ ಸಲ್ಲಿಸಿದ್ದು, ತಮ್ಮ ಹೆಸರಿನಲ್ಲಿರುವ ಚರಾಸ್ತಿ ಹಾಗೂ ಸ್ಥಿರಾಸ್ತಿ ಬಗ್ಗೆ ಉಲ್ಲೇಖಿಸಿದ್ದಾರೆ.
ಶ್ರುತಿ ಅವರ ತಂದೆ ರಾಮೋಹಳ್ಳಿ ಬಳಿಯ ದೊಡ್ಡ ಆಲದಮರ ಗ್ರಾಮದಲ್ಲಿ ನೆಲೆಸಿದ್ದಾರೆ. ಅವರ ಹೆಸರಿನಲ್ಲಿ ಅಲ್ಲಿ 50 ಎಕರೆ ತೋಟ ಸೇರಿ ಕೋಟ್ಯಂತರ ರೂಪಾಯಿ ಆಸ್ತಿ ಇದೆ. ಅದರಲ್ಲಿ ಶ್ರುತಿ ಅವರ ಪಾಲೂ ಇದೆ. ಜತೆಗೆ ರಾಜೇಶ್ ಆಸ್ತಿಯಲ್ಲೂ ಅವರಿಗೆ ಪಾಲು ಬರುತ್ತದೆ. ಈ ಎಲ್ಲ ವಿವರಗಳನ್ನು ಅವರು ನಮೂನೆಯಲ್ಲಿ ಬರೆದಿದ್ದರು ಎಂದು ಗೊತ್ತಾಗಿದೆ.
‘ಪಿಡಿಒ, ಆಸ್ತಿ ವಿವರವುಳ್ಳ ಅಫಿಡೆವಿಟನ್ನು ಪಂಚಾಯಿತಿ ಅಧ್ಯಕ್ಷರಿಗೆ ಕೊಡುತ್ತಾರೆ. ಅದನ್ನು ಪರಿಶೀಲಿಸಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ಈ ದಾಖಲೆಗಳ ಪ್ರಕಾರ ರಾಜ್ಯದ ಶ್ರೀಮಂತ ಪಿಡಿಒಗಳ ಪಟ್ಟಿಯಲ್ಲಿ ಶ್ರುತಿ ಗೌಡ ಅವರೇ ಮೊದಲಿಗರು’ ಎಂದು ಗೊಲ್ಲಹಳ್ಳಿ ಗ್ರಾ.ಪಂ. ಸದಸ್ಯ ಎಸ್.ಮಲ್ಲಯ್ಯ ತಿಳಿಸಿದರು.
‘ಎಲ್ಲರನ್ನು ಅಣ್ಣಾ ಎನ್ನುತ್ತಲೇ ಮಾತನಾಡಿಸುತ್ತಿದ್ದರು. ನಮ್ಮ ಕ್ಷೇತ್ರದ ಕೆಲಸವಿದ್ದಾಗ ಮಾತ್ರ ಅವರನ್ನು ಭೇಟಿ ಮಾಡುತ್ತಿದ್ದೇವೆ. ಅವರ ಖಾಸಗಿ ಜೀವನದ ವಿಷಯ ನಮಗೆ ಅಷ್ಟಾಗಿ ಗೊತ್ತಿಲ್ಲ’ ಎಂದು ಹೇಳಿದರು.
ನಿಯೋಜನೆ ಮೇಲೆ ಕೆಲಸ: ಪಿಡಿಒ ಹುದ್ದೆಗೆ ಆಯ್ಕೆಯಾದ ಬಳಿಕ ಶ್ರುತಿ ಅವರನ್ನು ನೆಲಮಂಗಲ ತಾಲ್ಲೂಕಿನ ಟಿ.ಬೇಗೂರು ಗ್ರಾ.ಪಂ.ಗೆ ನೇಮಕ ಮಾಡಲಾಗಿತ್ತು. ಅಲ್ಲಿ ಮೂರೂವರೆ ವರ್ಷಗಳವರೆಗೆ ಕೆಲಸ ಮಾಡಿದ ಅವರು, ಕಳೆದ ವರ್ಷ ಆಯ್ಕೆಯಾಗಿ ಬಂದ ಹೊಸ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು.
‘ಬೇಗೂರು ಪಂಚಾಯಿತಿಯಿಂದ ವರ್ಗಾವಣೆ ಬಯಸಿ ಶ್ರುತಿ ಅವರು ಮನವಿ ಸಲ್ಲಿಸಿದ್ದರು. ಅದನ್ನು ಜಿಲ್ಲಾ ಪಂಚಾಯಿತಿ ಸಿಇಒಗೆ ಕಳುಹಿಸಿದ್ದೆ. ಅದರ ನಡುವೆಯೇ ಶ್ರುತಿ, ಎರಡು ತಿಂಗಳು ರಜೆ ಪಡೆದುಕೊಂಡಿದ್ದರು. ಜುಲೈನಲ್ಲಿ ರಜೆ ಮುಗಿದಿದ್ದರಿಂದ ಅವರನ್ನು ಗೊಲ್ಲಹಳ್ಳಿ ಪಂಚಾಯಿತಿಗೆ ನಿಯೋಜನೆ ಮೇಲೆ ಕಳುಹಿಸಲಾಗಿತ್ತು’ ಎಂದು ನೆಲಮಂಗಲ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ (ಇ.ಒ) ಟಿ.ಕೆ.ರಮೇಶ್ ತಿಳಿಸಿದರು.
‘ಗೊಲ್ಲಹಳ್ಳಿಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದರು. ಕಾರ್ಯದರ್ಶಿ ಹಾಗೂ ಪಿಡಿಒಗಳ ಸಭೆಗಳನ್ನು ಪ್ರತ್ಯೇಕವಾಗಿ ಮಾಡುತ್ತೇವೆ. ಪಿಡಿಒ ಸಭೆ ಇದ್ದಾಗ ಮಾತ್ರ ಅವರಿಗೆ ಬರಲು ಹೇಳುತ್ತಿದ್ದೆವು. ಜ. 13ರಂದು ಬೆಳಿಗ್ಗೆ 11 ಗಂಟೆಯ ಸಭೆಗೆ ಅವರ ಬದಲು ಕಾರ್ಯದರ್ಶಿ ಬಂದಿದ್ದರು’ ಎಂದು ವಿವರಿಸಿದರು.
ವರ್ಗಾವಣೆಗಾಗಿ ಅಮಿತ್ ಸಹಾಯಕ ಕೋರಿದ್ದರು: ‘ಗೊಲ್ಲಹಳ್ಳಿಗೆ ನಿಯೋಜನೆಗೊಂಡಿದ್ದ ಶ್ರುತಿ, ದಾಖಲೆಯಲ್ಲಿ ಟಿ.ಬೇಗೂರು ಪಿಡಿಒ ಆಗಿದ್ದರು. ಕೆಲ ದಿನಗಳಲ್ಲೇ ಅವರು ಮತ್ತೆ ಅದೇ ಪಂಚಾಯಿತಿಗೆ ಕೆಲಸಕ್ಕೆ ಹೋಗಬೇಕಿತ್ತು. ಅದನ್ನು ತಪ್ಪಿಸಿ, ಗೊಲ್ಲಹಳ್ಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು’ ಎಂದು ಪಂಚಾಯಿತಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ಅಮಿತ್ ಅವರ ತಂದೆ ಕೇಶವಮೂರ್ತಿ, ಸದ್ಯ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ಶ್ರುತಿ ವರ್ಗಾವಣೆಗೆ ಅವರ ನೆರವು ಕೋರಿದ್ದರು. ಈ ವಿಚಾರವಾಗಿಯೇ ಅವರ ಮಧ್ಯೆ ಹೆಚ್ಚು ಚಾಟಿಂಗ್ ನಡೆದಿತ್ತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಕೆಪಿಎಸ್‌ಸಿ ಸಂದರ್ಶನ ಬಾಕಿ ಇತ್ತು: ‘ಕರ್ನಾಟಕ ಲೋಕಸೇವಾ ಆಯೋಗವು ಇತ್ತೀಚೆಗೆ ನಡೆಸಿದ್ದ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆಯಲು ಶ್ರುತಿ ಅವರಿಗೆ ನಿರಾಪೇಕ್ಷಣಾ ಪತ್ರ ನೀಡಲಾಗಿತ್ತು’ ಎಂದು ಇ.ಒ ಟಿ.ಕೆ ರಮೇಶ್ ಹೇಳಿದರು.
‘ಪೂರ್ವಭಾವಿ ಹಾಗೂ ಮುಖ್ಯಪರೀಕ್ಷೆ ಉತ್ತೀರ್ಣವಾಗಿದ್ದು, ಕೆಲವೇ ದಿನಗಳಲ್ಲಿ ಸಂದರ್ಶನವಿದೆ ಎಂದು ಶ್ರುತಿ ಹೇಳಿದ್ದರು. ಅವರಿಗೆ ದುಡ್ಡು ಮಾಡಬೇಕು ಎನ್ನುವುದಕ್ಕಿಂತ ಉನ್ನತ ಅಧಿಕಾರಿಯಾಗಿ ಜನರ ಕೆಲಸ ಮಾಡಬೇಕೆಂಬ ಹಂಬಲವಿತ್ತು’ ಎಂದು ವಿವರಿಸಿದರು.
*
‘ಅಮಿತ್‌ನ ಜತೆಗಿರಲು ನನಗೇ ಸುಳ್ಳು ಹೇಳಿದಳು’
ಬೆಂಗಳೂರು: ಪತ್ನಿಯನ್ನು ತುಂಬ ಪ್ರೀತಿ ಮಾಡುತ್ತಿದ್ದೆ. ಆದರೆ, ಆಕೆ ಆರು ತಿಂಗಳಿನಿಂದ ವಕೀಲ ಅಮಿತ್ ಜತೆ ಓಡಾಡುತ್ತಿದ್ದಳು. ಆತನ ಜತೆಗೆ ತಿರುಗಾಡಲು ನನಗೇ ಸುಳ್ಳು ಹೇಳುತ್ತಿದ್ದುದು ಸಹಿಸಲು ಆಗಲಿಲ್ಲ. ಆ ಕೋಪದ ಭರದಲ್ಲಿ ಕೃತ್ಯ ಎಸಗಿದೆ..
ಅಮಿತ್ ಕೊಲೆ ಪ್ರಕರಣದ ಆರೋಪಿ ರಾಜೇಶ್, ಪೊಲೀಸರಿಗೆ ನೀಡಿದ ಹೇಳಿಕೆ ಇದು.
‘ಶನಿವಾರ ರಾತ್ರಿ ರಾಜೇಶ್ ಹಾಗೂ ಆತನ ತಂದೆ ಗೋಪಾಲಕೃಷ್ಣ ಅವರನ್ನು ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಯಿತು. ತಂದೆಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ನ್ಯಾಯಾಧೀಶರು, ಹೆಚ್ಚಿನ ವಿಚಾರಣೆಗಾಗಿ ರಾಜೇಶ್‌ನನ್ನು ಐದು ದಿನ ಪೊಲೀಸ್ ಕಸ್ಟಡಿಗೆ ನೀಡಿದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಆರಂಭದಲ್ಲಿ ನನ್ನೊಂದಿಗೆ ಅನ್ಯೋನ್ಯವಾಗಿಯೇ ಇದ್ದ ಪತ್ನಿ ಶ್ರುತಿ, ಅಮಿತ್‌ನ ಪರಿಚಯವಾದ ಬಳಿಕ ಅಂತರ ಕಾಯ್ದುಕೊಳ್ಳಲು ಆರಂಭಿಸಿದಳು. ಮಕ್ಕಳ ಮೇಲಿದ್ದ ಕಾಳಜಿಯೂ ಕಡಿಮೆಯಾಗಿತ್ತು. ಇದೇ ವಿಚಾರವಾಗಿ ಮನೆಯಲ್ಲಿ ಗಲಾಟೆ ಕೂಡ ಆಗಿತ್ತು. ಅತ್ತೆ–ಮಾವ (ಶ್ರುತಿ ಪೋಷಕರು) ಬಂದು ಆಕೆಗೆ ಬುದ್ಧಿ ಹೇಳಿ ಹೋಗಿದ್ದರು’ ಎಂದು ರಾಜೇಶ್ ಹೇಳಿಕೆ ನೀಡಿದ್ದಾಗಿ ಅಧಿಕಾರಿಯೊಬ್ಬರು ಹೇಳಿದರು.
‘ಕೆಲಸದ ನಿಮಿತ್ತ ಹೊರಗೆ ಹೋಗುತ್ತಿದ್ದೇನೆ, ಅಧಿಕಾರಿಗಳ ಸಭೆಯಲ್ಲಿದ್ದೇನೆ, ಸಹೋದ್ಯೋಗಿಯ ಮನೆಗೆ ಬಂದಿದ್ದೇನೆ… ಹೀಗೆ, ತುಂಬ ಸುಳ್ಳು ಹೇಳುತ್ತಿದ್ದಳು. ಹಾಗೆ ಹೇಳಿದಾಗಲೆಲ್ಲ ಆಕೆ ಅಮಿತ್ ಜತೆಗೇ ಇದ್ದಾಳೆ ಎನಿಸುತ್ತಿತ್ತು. ಹೀಗಾಗಿಯೇ ಪತ್ನಿಗೆ ತಿಳಿಯದಂತೆ ಕಾರಿನ ಎಂಜಿನ್ ಭಾಗದಲ್ಲಿ ಜಿಪಿಎಸ್ ಅಳವಡಿಸಿದ್ದೆ.’
‘ಶುಕ್ರವಾರ ಬೆಳಿಗ್ಗೆ ಕರೆ ಮಾಡಿದಾಗಲೂ ಸಭೆಯಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ನೆಲಮಂಗಲಕ್ಕೆ ಹೋಗುತ್ತಿರುವುದಾಗಿ ಹೇಳಿದಳು. ಜಿಪಿಎಸ್ ಪರಿಶೀಲಿಸಿದಾಗ ಕಾರು ಹೆಸರಘಟ್ಟ ರಸ್ತೆಯಲ್ಲೇ ಇರುವುದು ಗೊತ್ತಾಯಿತು. ಮತ್ತೆ ಸುಳ್ಳು ಹೇಳಿದ್ದರಿಂದ ರಿವಾಲ್ವರ್ ತೆಗೆದುಕೊಂಡು ತಂದೆ ಜತೆ ಅಲ್ಲಿಗೆ ತೆರಳಿದೆ.’
‘ಇಬ್ಬರೂ ಕಾರಿನಲ್ಲಿ ಮಾತನಾಡುತ್ತ ಕುಳಿತಿದ್ದರು. ಸಿಟ್ಟು ತಡೆಯಲಾಗಲಿಲ್ಲ. ನಾನು–ತಂದೆ ಸೇರಿಕೊಂಡು ಅಮಿತ್‌ನನ್ನು ಕಾರಿನಿಂದ ಹೊರಗೆಳೆದೆವು. ಆದರೆ, ಆತ ನಮ್ಮಿಬ್ಬರನ್ನೂ ಕೆಳಗೆ ತಳ್ಳಿದ. ಆಗ, ಒಂದು ಸುತ್ತು ಗುಂಡು ಹಾರಿಸಿದೆ.’ ‘ಆ ನಂತರವಾದರೂ ಮನೆಗೆ ಹೋಗುತ್ತಾಳೆ ಎಂದುಕೊಂಡೆ. ಆದರೆ, ಅಮಿತ್‌ನನ್ನು ಆಸ್ಪತ್ರೆಗೆ ದಾಖಲಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಳು. ಅವರು ಮಾಡಿದ ತಪ್ಪಿಗೆ ಎರಡೂ ಕುಟುಂಬಗಳು ಬೀದಿಗೆ ಬೀಳುವಂತಾಯಿತು’ ಎಂದು ರಾಜೇಶ್ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.
ಚಾಲಕನ ವಿಚಾರಣೆ
ಘಟನೆ ವೇಳೆ ತಂದೆ–ಮಗನ ಜತೆಗೇ ಇದ್ದ ಅವರ ಕಾರು ಚಾಲಕ ಕುಮಾರನನ್ನು ಪೊಲೀಸರು ಭಾನುವಾರ ವಿಚಾರಣೆ ನಡೆಸಿದರು. ‘ಕೃತ್ಯದಲ್ಲಿ ಚಾಲಕನ ಪಾತ್ರ ಕಂಡು ಬಂದಿಲ್ಲ. ಘಟನೆಯ ಪ್ರತ್ಯಕ್ಷದರ್ಶಿಯೂ ಆಗಿರುವ ಆತನನ್ನು, ಸಾಕ್ಷಿದಾರನನ್ನಾಗಿ ಮಾಡಿಕೊಳ್ಳಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
Comments are closed.