ಎಸ್ಸಿ/ಎಸ್ಟಿ- 29.77 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ -ಕೊರಗ ಕಾಲನಿಗಳ ಅಭಿವೃದ್ಧಿಗೆ 674 ಲಕ್ಷ
ಮ0ಗಳೂರು,ಜನವರಿ.17 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭಿವೃದ್ಧಿ ಸಮುದಾಯದ ಪ್ರಗತಿಗೆ ವಿವಿಧ ಕಡೆಗಳಲ್ಲಿ ಹಮ್ಮಿಕೊಂಡ 36 ಕೋಟಿ ರೂ. ಯೋಜನೆಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಮಂಗಳವಾರ ನಗರದಲ್ಲಿ ಚಾಲನೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಸುಮಾರು ರೂ. 23.03 ಕೋಟಿ ಹಾಗೂ ಕೊರಗ ಕಾಲನಿಗಳ ಅಭಿವೃದ್ಧಿಗೆ ಸುಮಾರು 674 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಲಾಯಿತು.
ಮಂಗಳೂರು ನಗರದಲ್ಲಿ ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಮಟ್ಟದ ಅಂಬೇಡ್ಕರ್ ಭವನ ಕಾಮಗಾರಿಗೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ 31 ಲಕ್ಷ ರೂ. ವೆಚ್ಚದಲ್ಲಿ ಗಡಿಪ್ರದೇಶದ ಕಾಮಗಾರಿಗೆ ಚಾಲನೆ ನೀಡಲಾಯಿತು. ಬಳಿಕ ನಗರದ ಉರ್ವಾ ಮಾರಿಗುಡಿಯಲ್ಲಿ 3.96 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಉದ್ಘಾಟನೆಯನ್ನು ಸಚಿವರು ನೆರವೇರಿಸಿದರು.
ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಶಾಸಕ ಜೆ.ಆರ್.ಲೋಬೊ, ಐವನ್ ಡಿ’ಸೋಜ, ಮೇಯರ್ ಹರಿನಾಥ್, ಮನಪಾ ಮುಖ್ಯ ಸಚೇತಕ ಶಶಿಧರ್ಮ, ಮನಪಾ ಸದಸ್ಯ ರಾಧಾಕೃಷ್ಣ ಹೆಗ್ಡೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಮೊದಲಾದವರು ಉಪಸ್ಥಿತರಿದ್ದರು.
ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರಿಂದ ಚಾಲನೆ
ಬಂಟ್ವಾಳ ತಾಲೂಕಿ ಬಿ.ಸಿ. ರೋಡ್ನಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ತಾಲೂಕು ಮಟ್ಟದ ಅಂಬೇಡ್ಕರ್ ಭವನ, ಕಕ್ಕೆಪದವು ಹಾಗೂ ಚೆನೈತ್ತೋಡಿಯಲ್ಲಿ ತಲಾ 50 ಲಕ್ಷ ರೂ. ವೆಚ್ಚದಲ್ಲಿ ಹೋಬಳಿ ಮಟ್ಟದ ಅಂಬೇಡ್ಕರ್ ಭವನ, 31 ಲಕ್ಷ ವೆಚ್ಚದಲ್ಲಿ ಗಡಿ ಪ್ರದೇಶದ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು.
ಪುತ್ತೂರು ತಾಲೂಕಿನಲ್ಲಿ ರೂ. 74 ಲಕ್ಷ ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿ, 31 ಲಕ್ಷ ವೆಚ್ಚದಲ್ಲಿ ಗಡಿ ಪ್ರದೇಶದ ಕಾಮಗಾರಿ, 20 ಲಕ್ಷ ರೂ. ವೆಚ್ಚದಲ್ಲಿ ನೆಟ್ಟಣಿಗೆ ಮುಡ್ನೂರು ಸ್ಮಶಾನ ಭೂಮಿ ಅಭಿವೃದ್ಧಿ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು.
ಸುಳ್ಯ ತಾಲೂಕಿನಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿ, ರೂ.75 ಲಕ್ಷ ವೆಚ್ಚದಲ್ಲಿ ಗಡಿ ಪ್ರದೇಶದ ಕಾಮಗಾರಿ, ರೂ.120 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಭವನ(10 ಕಾಮಗಾರಿ) ಹಾಗೂ ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಹ 35 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಯಿತು.
ಭರವಸೆ ಈಡೇರಿಸಿದ ಸಚಿವರು:
ಕಳೆದ ವರ್ಷ ಏಪ್ರಿಲ್ 15ರಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ಮಂಗಳೂರು ತಾಲೂಕಿನ ಹಳೆಯಂಗಡಿ ಸಮೀಪದ ಕೆರೆಕಾಡು ಎಂಬಲ್ಲಿ ಕೊರಗರ ಕಾಲನಿಯಲ್ಲಿ ವಾಸ್ತವ್ಯ ಹೂಡಿದ್ದಾಗ ಕೊರಗ ಸಮುದಾಯದ ಕಲ್ಯಾಣಕ್ಕೆ ಹಲವಾರು ಘೋಷಣೆಗಳನ್ನು ಮಾಡಿದ್ದರು. ಇದರನ್ವಯ ಸುಮಾರು 674 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಇಂದು ಶಂಕುಸ್ಥಾಪನೆಯಾಗಿದೆ.
ಮಂಗಳೂರು ತಾಲೂಕಿನ ಕೊರಗ ಕಾಲನಿಗಳ ರಸ್ತೆ ಕಾಂಕ್ರಿಟೀಕರಣ ಮತ್ತು ಸಮುದಾಯ ಭವನಗಳಿಗೆ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ರೂ. 365 ಲಕ್ಷ ವೆಚ್ಚದಲ್ಲಿ ಒಟ್ಟು 17 ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.
ಇದಲ್ಲದೇ, ಬಂಟ್ವಾಳ ತಾಲೂಕಿನಲ್ಲಿ ಕೊರಗ ಕಾಲೋನಿಗಳ ರಸ್ತೆ ಕಾಂಕ್ರೀಟೀಕರಣಕ್ಕೆ ರೂ. 150 ಲಕ್ಷ ವೆಚ್ಚದಲ್ಲಿ ಒಟ್ಟು 7 ಕಾಮಗಾರಿಗಳು ಹಾಗೂ ಪುತ್ತೂರು ತಾಲೂಕಿನ ಕೊರಗ ಕಾಲೋನಿಗಳ ರಸ್ತೆ ಕಾಂಕ್ರೀಟಿಕರಣಲ್ಲಿ 159 ಲಕ್ಷ ವೆಚ್ಚದಲ್ಲಿ ಒಟ್ಟು 10 ಕಾಮಗಾರಿಗಳ ಶಂಕುಸ್ಥಾಪನೆಯನ್ನು ಸಚಿವರು ಇಂದು ನೆರವೇರಿಸಿದರು.
Comments are closed.