ಮಂಗಳೂರು/ಕುರ್ನಾಡು ಜ.23: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್, ಜಿಲ್ಲಾ ನೆರವು ಘಟಕ, ತಾಲೂಕು ಪಂಚಾಯತ್ ಬಂಟ್ವಾಳ, ಕುರ್ನಾಡ್ ಗ್ರಾಮ ಪಂಚಾಯತ್ ಹಾಗೂ ಸ್ವಯಂ ಸೇವಾ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯ ನಿಯಂತ್ರಣ ಹಾಗೂ ಸಮರ್ಪಕ ಘನ ತ್ಯಾಜ್ಯ ವಿಲೇವಾರಿ ಬಗ್ಗೆ ಬೃಹತ್ ಜನಾಂದೋಲನಕ್ಕೆ ಜನವರಿ 23, ಸೋಮವಾರ ದಂದು ಕುರ್ನಾಡು ಪದವಿ ಪೂರ್ವ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್ ರವಿ ಅವರು ಸ್ವಚ್ಛತಾ ಧ್ವಜವನ್ನು ಕುರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೈಲಜಾ ಮಿತ್ತಕೋಡಿಯವರಿಗೆ ಹಸ್ತಾಂತರಿಸುವ ಮೂಲಕ ಚಾಲನೆಯನ್ನು ನೀಡಿದರು.
ಬಳಿಕ `ಸ್ವಚ್ಛತೆಯೆಡೆಗೆ ಕುರ್ನಾಡುವಿನ ನಡಿಗೆ’ ಎಂಬುವ ಧ್ಯೇಯ ವಾಕ್ಯದೊಂದಿಗೆ ಜಾಥಾವನ್ನು ಏರ್ಪಡಿಸಲಾಯಿತು.
ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದ ಜನ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡರು. ಜಾಥಾವು ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಹೊರಟು ಮುಡಿಪು ಕೇಂದ್ರ ಬಸ್ ನಿಲ್ದಾಣವರೆಗೆ ಸಾಗಿತು.
ಸ್ವಚ್ಛತಾ ಸಂದೇಶ ವಾಹನ : ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುತ್ತಿರುವ ಹಾನಿಯ ಕುರಿತು ಧ್ವನಿವರ್ಧಕವನ್ನು ಬಳಸುವ ಮೂಲಕ ಕುರ್ನಾಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂದೇಶವನ್ನು ಸಾರಲಾಯಿತು. ಅಲ್ಲದೇ ಮನೆ-ಮತ್ತು ಅಂಗಡಿಗಳಲ್ಲಿ ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿಡುವ ಕುರಿತು ಮಾಹಿತಿಯನ್ನು ನೀಡಲಾಯಿತು.
ಜಾಥಾದಲ್ಲಿ ಪಾಲ್ಗೊಂಡ ಸಚಿವರು : ಮುಡಿಪು ಕೇಂದ್ರ ನಿಲ್ದಾಣದಲ್ಲಿ ಆಹಾರ ಮತ್ತು ನಾಗರಿಕ ಪೂರೈಕಾ ಖಾತೆ ಸಚಿವ ಯು.ಟಿ ಖಾದರ್ ಜಾಥಾದಲ್ಲಿ ಪಾಲ್ಗೊಂಡು ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಬಳಿಕ ಸ್ವಚ್ಛತೆ ಮತ್ತು ಪ್ಲಾಸ್ಟಿಕ್ನಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜನರಿಗೆ ಅರಿವು ಮೂಡಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾಗಟ್ಟಿ, ತಾಲೂಕು ಪಂಚಾಯತ್ನ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯ ನವೀನ್ ಪಾದಲ್ಪಾಡಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್, ಕುರ್ನಾಡ್ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ಟಿ.ಜಿ ರಾಜಾರಾಮ್ ಭಟ್, ಕುರ್ನಾಡು ಗ್ರಾ.ಪಂ ಸದಸ್ಯರಾದ ಗೋಪಾಲ್ ಬಂಗೇರ, ಶ್ರೀಮತಿ ಗೀತಾ, ಶಿವಶಂಕರ್ ಭಟ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎನ್.ಆರ್ ಉಮೇಶ್, ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂಡ, ಜನ ಶಿಕ್ಷಣ ಟ್ರಸ್ಟ್ನ ಶೀನಶೆಟ್ಟಿ, ಸ್ವಚ್ಛ ಭಾರತ ಮಿಷನ್ ಜಿಲ್ಲಾ ನೆರವು ಘಟಕದ ಸಂಯೋಜಕಿ ಮಂಜುಳಾ ಆರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ಕುಮಾರ್ ಮತ್ತಿತರು ಭಾಗವಹಿಸಿದ್ದರು.
Comments are closed.