ವಾಷಿಂಗ್ ಟನ್: ಭಾರತದ ಮಾಹಿತಿ-ತಂತ್ರಜ್ಞಾನ ಕ್ಷೇತ್ರದ ಮೇಲೆ ಅತ್ಯಂತ ಮಾರಕ ಸರ್ಜಿಕಲ್ ದಾಳಿ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಲಸೆ ವೀಸಾ ಮಸೂದೆಗೆ ತಿದ್ದುಪಡಿ ಮಾಡಿದ್ದಾರೆ. ಹೆಚ್-1ಬಿ ವೀಸಾ ಪಡೆಯಲು ಇರಬೇಕಾದ ಕನಿಷ್ಟ ವೇತನವನ್ನು 1,30,000 ಡಾಲರ್ಗಳಿಗೆ ನಿಗದಿಗೊಳಿಸುವ ಮೂಲಕ ಭಾರತೀಯರಿಗೆ ಶಾಕ್ ನೀಡಿದ್ದಾರೆ. ಇದರೊಂದಿಗೆ ಅಮೆರಿಕದಲ್ಲಿ ನೆಲೆಸಿರುವ ಸಾವಿರಾರು ಭಾರತೀಯರ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ. ಹೆಚ್-1ಬಿ ವೀಸಾ ಪಡೆಯಲು ವಾರ್ಷಿಕ 88 ಲಕ್ಷ ರೂ.ಗಳ ಸಂಬಳ ಇರಲೇಬೇಕೆಂಬ ನೀತಿಯ ವೀಸಾ ಸುಧಾರಣೆ ಮಸೂದೆ ತಿದ್ದುಪಡಿಗೆ ಅಮೆರಿಕ ಸಂಸತ್ನಲ್ಲಿ ಸಮ್ಮತಿ ಸೂಚಿಸಿದೆ. ಇದರಿಂದ ಪ್ರಮುಖವಾಗಿ ಭಾರತದ ಮಾಹಿತಿ-ತಂತ್ರಜ್ಞಾನ ಕ್ಷೇತ್ರದ ಮೇಲೆ ಭಾರೀ ಹೊಡೆತ ಬಿದ್ದಿದೆ.
ಹೆಚ್-1ಬಿ ವೀಸಾ ಪಡೆಯುವ ಕನಿಷ್ಟ ವೇತನ ಈ ಹಿಂದೆ 60,000 ಡಾಲರ್ಗಳಿತ್ತು. ಈಗ ಆ ಮೊತ್ತ ಎರಡರಷ್ಟು ಹೆಚ್ಚಾಗಿರುವುದರಿಂದ ಭಾರತದ ಐಟಿ ಉದ್ಯಮ ಮತ್ತು ಉದ್ಯೋಗಿಗಳಿಗೆ ಭಾರೀ ಹೊಡೆತ ಬಿದ್ದಂತಾಗಿದೆ. ಅಮೆರಿಕದಲ್ಲಿ ನೆಲೆಸಿರುವ ಸಾವಿರಾರು ಅನಿವಾಸಿ ಭಾರತೀಯರು ಇದರಿಂದ ಉದ್ಯೋಗ ಕಳೆದುಕೊಳ್ಳುವಂತಾಗಿದೆ. ಒಂದೆಡೆ ವೀಸಾ ಲಭಿಸದೆ, ಮತ್ತೊಂದೆಡೆ ಬೇರೆ ಸಂಸ್ಥೆಗಳಲ್ಲಿ ಉದ್ಯೋಗವೂ ದಕ್ಕದೆ ಅವರ ಪರಿಸ್ಥಿತಿ ಡೋಲಾಯಮಾನವಾಗಿದೆ.
ಡೊನಾಲ್ಡ್ ಟ್ರಂಪ್ ನೀಡಿರುವ ಮರ್ಮಾಘಾತದಿಂದ ವಿಶೇಷವಾಗಿ ಬೆಂಗಳೂರಿನ ಮೇಲೆ ಭಾರೀ ದುಷ್ಪರಿಣಾಮ ಉಂಟಾಗಿದೆ. ಅಲ್ಲದೆ, ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಮಾಹಿತಿ-ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಗರಗಳ ಮೇಲೂ ಗದಾಪ್ರಹಾರ ಮಾಡಿದೆ. ಭಾರತೀಯರು ಸೇರಿದಂತೆ ಅಮೆರಿಕದಲ್ಲಿ ನೆಲೆಸಿರುವ ಅನ್ಯ ದೇಶೀಯರ ಉದ್ಯೋಗಿಗಳಿಗೆ ಈ ನಿರ್ಧಾರ ಆಘಾತವಾಗಿ ಪರಿಣಮಿಸಿದೆ. ಅಮೆರಿಕ ಉದ್ಯೋಗಿಗಳಿಗೆ ಹೆಚ್ಚಿನ ಅವಕಾಶ ನೀಡುವ ಉದ್ದೇಶದಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ಈ ಕ್ರಮ ಕೈಗೊಂಡಿದೆ.
ಮುಂಬೈ ವರದಿ:
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆಯಲ್ಲಿ ಭಾರತದ ಐಟಿ ದಿಗ್ಗಜ ಸಂಸ್ಥೆಗಳಾದ ವಿಪ್ರೋ ಇನ್ಫೋಸಿಸ್ ಮೊದಲಾದ ಸಂಸ್ಥೆಗಳ ಷೇರು ಮೌಲ್ಯ ಪಾತಾಳಕ್ಕೆ ಕುಸಿದಿದೆ. ಟ್ರಂಪ್ನ ಈ ಆದೇಶದಿಂದ ಬೆಂಗಳೂರಿನ ಐಟಿ ಕಂಪೆನಿಗಳಿಗೆ ಬರ ಸಿಡಿಲು ಬಡಿದಂತಾಗಿದ್ದು, ತಮ್ಮ ಭವಿಷ್ಯದ ಬಗ್ಗೆ ನೌಕರರು ಚಿಂತಾಕ್ರಾಂತರಾಗಿದ್ದಾರೆ.
ಬೆಂಗಳೂರು ವರದಿ:
ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಕೈಗೊಂಡಿರುವ ಈ ಏಕಪಕ್ಷೀಯ ನಿರ್ಧಾರದ ಬಗ್ಗೆ ಐಟಿ ಸಂಸ್ಥೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಖಂಡಿಸುತ್ತಿವೆ. ಟ್ರಂಪ್ ಆದೇಶದ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಇನ್ಫೋಸಿಸ್ ಸಂಸ್ಥೆಯ ಉನ್ನತಾಧಿಕಾರಿಯೊಬ್ಬರು ಇದರಿಂದ ಅಮೆರಿಕದಲ್ಲಿರುವ ಭಾರತೀಯರ ಉದ್ಯೋಗಕ್ಕೆ ಮತ್ತು ಸಂಸ್ಥೆಯ ಆರ್ಥಿಕ ವಹಿವಾಟಿನ ಮೇಲೆ ಭಾರೀ ದುಷ್ಪರಿಣಾಮ ಉಂಟಾಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
Comments are closed.