ಕರ್ನಾಟಕ

ಸಿಂದಗಿ ತಾಲ್ಲೂಕು ಬಂದಾಳ ಗ್ರಾಮದಲ್ಲಿ ಸಾರ್ವಜನಿಕವಾಗಿ ಮಹಿಳೆ ಅರೆ ನಗ್ನಗೊಳಿಸಿ, ಚಪ್ಪಲಿಯಿಂದ ಥಳಿತ

Pinterest LinkedIn Tumblr


ಸಿಂದಗಿ (ವಿಜಯಪುರ): ಮಹಿಳೆಯೊಬ್ಬರನ್ನು ಸಾರ್ವಜನಿಕವಾಗಿ ಅರೆ ನಗ್ನಗೊಳಿಸಿ, ಚಪ್ಪಲಿಯಿಂದ ಥಳಿಸಿದ ಅಮಾನವೀಯ ಕೃತ್ಯ ತಾಲ್ಲೂಕಿನ ಬಂದಾಳ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.

ಸಿಂದಗಿ ಪಟ್ಟಣದ ಕಾಂಗ್ರೆಸ್‌ ಕಾರ್ಯಕರ್ತೆ ಸುಜಾತಾ ಸಿಂಧೆ ಮಹಿಳೆಯರಿಂದಲೇ ಥಳಿತಕ್ಕೊಳಗಾಗಿ ಅರೆ ನಗ್ನಗೊಂಡವರು.

ಸಿಂಧೆಯನ್ನು ಮಹಿಳೆಯರೇ ಅರೆನಗ್ನಗೊಳಿಸಿ, ಥಳಿಸಿದ ವಿಡಿಯೊ ಕ್ಲಿಪ್ಪಿಂಗ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಗೊಂಡ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಗ್ರಾಮದ ಶ್ರೀಕಾಂತ ಗೊಲ್ಲಾಳಪ್ಪ ಬೀರಗೊಂಡ ಎಂಬಾತನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಪಡಿಸಿಕೊಂಡು ವಿಚಾರಣೆ ನಡೆಸಿದ ರೇಣುಕಾ ಎಂಬಾಕೆಯನ್ನು ಈಕೆ ಬೆಂಬಲಿಸುತ್ತಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮದ ಮಹಿಳೆಯರು, ಅಪಾರ ಜನರ ಸಮ್ಮುಖವೇ ಬಂದಾಳ ಗ್ರಾಮದಲ್ಲಿ ಸೀರೆ ಬಿಚ್ಚಿ, ಕುಪ್ಪಸ ಹರಿದು ಹಾಕಿ, ಚಪ್ಪಲಿಯಿಂದ ಥಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸುಜಾತಾ ಸಿಂಧೆ ಭಾನುವಾರ ಸಿಂದಗಿ ಪೊಲೀಸ್ ಠಾಣೆಯಲ್ಲಿ 25 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಘಟನೆ ವಿವರ: ಈಶಾನ್ಯ ರಾಜ್ಯ ಸಾರಿಗೆ ಸಂಸ್ಥೆಯ ಸಿಂದಗಿ ಘಟಕದ ಚಾಲಕ ಮತ್ತು ನಿರ್ವಾಹಕ, ಬಂದಾಳ ಗ್ರಾಮದ ಶ್ರೀಕಾಂತ ಗೊಲ್ಲಾಳಪ್ಪ ಬೀರಗೊಂಡ (37) ಎಂಬಾತನ ಶವ ಶನಿವಾರ ಬೂದಿಹಾಳ ಗ್ರಾಮದ ಬಳಿಯ ಕಾಲುವೆಯಲ್ಲಿ ಪತ್ತೆಯಾಗಿತ್ತು.

ಶ್ರೀಕಾಂತ ಸಿಂದಗಿ ಪಟ್ಟಣದಲ್ಲಿ ರೇಣುಕಾ ಎಂಬಾಕೆಯ ಜತೆ ಸಹವಾಸ ನಡೆಸುತ್ತಿದ್ದ. ಇಬ್ಬರೂ ವಿವಾಹವಾಗಿರಲಿಲ್ಲ. ಈಚೆಗೆ ರೇಣುಕಾ ಮತ್ತೊಬ್ಬನ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಇದಕ್ಕೆ ಶ್ರೀಕಾಂತ ಆಕ್ಷೇಪ ವ್ಯಕ್ತಪಡಿಸಿದ್ದ ಎನ್ನಲಾಗಿದೆ.

ಶ್ರೀಕಾಂತನ ಶವ ಕಾಲುವೆಯಲ್ಲಿ ಪತ್ತೆಯಾಗುತ್ತಿದ್ದಂತೆ, ಆತನ ತಂದೆ ಜತೆಯಲ್ಲಿ ವಾಸಿಸುತ್ತಿದ್ದ ರೇಣುಕಾ ವಿರುದ್ಧ ಅನುಮಾನ ವ್ಯಕ್ತಪಡಿಸಿ ಕೊಲೆ ಶಂಕೆಯ ದೂರು ದಾಖಲಿಸಿದ್ದರು. ಪೊಲೀಸರು ರೇಣುಕಾಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು.

ಸುಜಾತಾ ಸಿಂಧೆ ರೇಣುಕಾಳ ಪರಮಾಪ್ತ ಗೆಳತಿ. ಪೊಲೀಸರು ರೇಣುಕಾ ವಶಪಡಿಸಿಕೊಳ್ಳುತ್ತಿದ್ದಂತೆ ಸುಜಾತಾ ಬಂದಾಳ ಗ್ರಾಮಕ್ಕೆ ತೆರಳಿ ಶ್ರೀಕಾಂತನ ಮನೆಯ ಬಳಿ ತನ್ನ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲಾರಂಭಿಸಿದ್ದಾಳೆ.

ಈ ವೇಳೆಗಾಗಲೇ ಮೃತನ ಮನೆಯ ಬಳಿ ಜಮಾಯಿಸಿದ್ದ ಅಪಾರ ಸಂಖ್ಯೆಯ ಜನರಲ್ಲಿ ಕೆಲವರು ಮೊಬೈಲ್‌ ರೆಕಾರ್ಡಿಂಗ್‌ ಬಗ್ಗೆ ಸುಜಾತಾ ಪ್ರಶ್ನಿಸಿದ್ದಾರೆ. ಇದಕ್ಕೆ ಸಿಂಧೆ ನಾನು ಕಾಂಗ್ರೆಸ್ ಕಾರ್ಯಕರ್ತೆ ಎಂದು ಮಾತಿಗಿಳಿದಿದ್ದಾರೆ. ಅಷ್ಟರಲ್ಲಿ ಈಕೆ ರೇಣುಕಾಳ ಸ್ನೇಹಿತೆ ಎಂಬುದು ಸ್ಥಳದಲ್ಲಿದ್ದವರಿಗೆ ಖಚಿತಗೊಳ್ಳುತ್ತಿದ್ದಂತೆ, ಆಕ್ರೋಶಗೊಂಡ ಮಹಿಳೆಯರೇ ಸಿಂಧೆಯನ್ನು ಚಪ್ಪಲಿಯಿಂದ ಥಳಿಸಿ, ಸೀರೆ ಬಿಚ್ಚಿ, ಕುಪ್ಪಸ ಹರಿದು ಹಾಕಿ ಅರೆನಗ್ನಗೊಳಿಸಿದ್ದಾರೆ ಎಂದು ಸಿಂದಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಸುಜಾತಾ ಸಿಂಧೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಕಾರಣಕ್ಕೂ ಬಂದಾಳ ಗ್ರಾಮಕ್ಕೆ ತೆರಳಬಾರದು ಎಂದು ಸ್ಥಳೀಯ ಪೊಲೀಸರು ಸೂಚನೆ ನೀಡಿದ್ದರೂ, ಅದನ್ನು ಪರಿಗಣಿಸದೆ ಅಲ್ಲಿಗೆ ತೆರಳಿದ ಪರಿಣಾಮ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Comments are closed.