ಮೂಡಬಿದಿರೆ, ಫೆಬ್ರವರಿ.14: ಕ್ರಿಕೆಟ್ ಮೈದಾನದಲ್ಲಿ ಉದ್ಬವಿಸಿದ ಸುಳಿಗಾಳಿಯು ಭೂಮಿಯ ದೂಳನ್ನೆ ಆಕಾಶಕ್ಕೆ ಸೆಳೆದುಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಅಚ್ಚರಿ, ಕುತೂಹಲ, ಕೌತುಕ ಮೂಡಿಸಿದ ಘಟನೆ ಮೂಡಬಿದ್ರೆಯಲ್ಲಿ ಸೋಮವಾರ ನಡೆದಿದೆ.
ಮೂಡಬಿದಿರೆಯ ಸ್ವರಾಜ್ಯ ಮೈದಾನದ ನೂತನ ಕ್ರಿಕೆಟ್ ಮೈದಾನದಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಉದ್ಭವಿಸಿದ ಕೆಂಧೂಳಿಯೊಡಗೂಡಿದ ಸುಳಿಗಾಳಿಯು ಸುಮಾರು ಹೊತ್ತು ಅಕಾಶದೆತ್ತರಕ್ಕೆ ಹಾರುವ ಮೂಲಕ ಸುದ್ಧಿ ಮಾಡಿದೆ.
ಈ ಸಂದರ್ಭ ಮೂಡಬಿದಿರೆ ಇಲೆವೆನ್ ಕ್ರಿಕೆಟರ್ ಆಶ್ರಯದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಪಾಲ್ಗೊಂಡಿದ್ದವರು ಕೆಲವು ಹೊತ್ತು ಅಚ್ಚರಿ, ಕುತೂಹಲದೊಂದಿಗೆ ಈ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾದರು.
ಸುಮಾರು ನಾಲ್ಕು ನಿಮಿಷಗಳಷ್ಟು ಕಾಲ “ಜನಮನ ರಂಜಿಸುತ್ತಲೇ’ ಒಂದಷ್ಟು ದೂರ ಸುಳಿ ಸುಳಿದು ಸಾಗಿದ ಈ ಸುಳಿಗಾಳಿ ಮರಗಿಡಗಳಿರುವ ಬಿಎಸ್ಎನ್ಎಲ್ ಟವರ್ ಬಳಿ ತನ್ನ ಅಬ್ಬರವನ್ನು ಇಳಿಸಿಕೊಂಡು ಮರಗಿಡಗಳ ನಡುವೆ ಅಂತರ್ಧಾನವಾಗಿದೆ.
ಸ್ವರಾಜ್ಯ ಮೈದಾನದಲ್ಲಿ ಸುಳಿಗಾಳಿ ಇದೇನೂ ಹೊಸದಲ್ಲ. ಈ ಹಿಂದೆ ಖಾಲಿ ಗುಡ್ಡವಾಗಿದ್ದಾಗಲೂ ಈ ತೆರನ ಸುಳಿಗಾಳಿ ಉದ್ಭವಿಸುತ್ತಿದ್ದುದು ಸಾಮಾನ್ಯವಾಗಿತ್ತು.
ಆದರೆ ಸೋಮವಾರ ಇದರ ಅಬ್ಬರ ಮಾತ್ರ ಜೋರಾಗಿತ್ತು. 2003ರಲ್ಲಿ ಸ್ವರಾಜ್ಯ ಮೈದಾನವನ್ನು 71ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಅಗೆದು ಸಮತಟ್ಟಾಗಿಸಿ ಮೂರು ಹಂತಗಳ ಮೈದಾನಗಳನ್ನು ರೂಪಿಸಿದ ಬಳಿಕ ಮೇಲ್ಗಡೆಯ ಮೈದಾನವನ್ನು ಕ್ರಿಕೆಟಿಗರಿಗಾಗಿ ವಿಸ್ತರಿಸಿ ನಿರ್ಮಾಣ ಮಾಡಲಾಯಿತು.
ವಾರ ವಾರವೂ ಇಲ್ಲಿ ಕ್ರಿಕೆಟ್ ಪಂದ್ಯಾಟ ಹಾಗೂ ದಿನ ನಿತ್ಯ ವಾಹನ ಚಾಲನೆಯ ತರಬೇತಿ ನಡೆಯುತ್ತಲೇ ಇರುವುದರಿಂದ ಮಣ್ಣು ನಶ್ಯದಂತೆ ಧೂಳು ಧೂಳಾಗಿದೆ. ಹಾಗಾಗಿ ಸೋಮವಾರ ಎದ್ದ ಸುಳಿಗಾಳಿಗೆ ಈ ಕೆಂಧೂಳು ಸಿಲುಕಿಕೊಂಡು ನಯನ ಮನೋಹರ ದೃಶ್ಯವನ್ನು ನಿರ್ಮಿಸಿದೆ.
ಇದೊಂದು ವೈಜ್ಞಾನಿಕ ವಿದ್ಯಮಾನ. ಯಾವುದೋ ಒಂದು ಪ್ರದೇಶ, ತಾಣದಲ್ಲಿ ತಾಪಮಾನ ವಿಪರೀತ ಏರಿಕೆಯಾದಾಗ ಅಲ್ಲಿನ ಗಾಳಿಯ ಸಾಂದ್ರತೆ ಕುಸಿಯುತ್ತ, ಒತ್ತಡವೂ ಕಡಿಮೆಯಾಗುತ್ತದೆ. ಈ ವೇಳೆಗೆ ಹೆಚ್ಚಿನ ಒತ್ತಡವಿರುವ ಸುತ್ತಲಿನ ಎಲ್ಲ ದಿಕ್ಕುಗಳಿಂದ ಗಾಳಿ ಈ ಒತ್ತಡ ಕುಸಿತವುಂಟಾದ ತಾಣದತ್ತ ನುಗ್ಗುತ್ತದೆ.
ಇದು ಎಲ್ಲ ದಿಕ್ಕುಗಳಿಂದಲೂ ಏಕಕಾಲಕ್ಕೆ ನಡೆಯುವಾಗ ಅಲ್ಲಿ ಗಾಳಿ ಸುತ್ತುತ್ತಲೇ ಮುಂದೆ ಹೋಗಲಾಗದೆ ಮೇಲಕ್ಕೇರುವ ಪ್ರಕ್ರಿಯೆ ನಡೆಯುತ್ತದೆ. ಹೀಗೆ ಸುತ್ತುತ್ತ ಮೇಲಕ್ಕೇರುವಾಗ ನೆಲದಲ್ಲಿರುವ ಹಗುರವಾದ ಕಣ, ಕಸ, ವಸ್ತುಗಳನ್ನು ಸೆಳೆದುಕೊಳ್ಳುವುದೂ ನಡೆಯುತ್ತದೆ. ಇದಕ್ಕೆ ವರ್ಲ್ಧಿವಿಂಡ್ ಎನ್ನುತ್ತಾರೆ ಎಂದು ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿ ಸದ್ಯ ಮೂಡಬಿದಿರೆ ಶ್ರೀ ಮಹಾವೀರ ಪ.ಪೂ. ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ| ಎಂ. ರಮೇಶ ಭಟ್ ತಿಳಿಸಿದ್ದಾರೆ.
Comments are closed.