ಬೀಜಿಂಗ್: ಮುಂದಿನ ಹತ್ತು ವರ್ಷಗಳಲ್ಲಿ ಚೀನಾದ 3 ಕೋಟಿ ಯುವಕರು ವಧುವಿನ ಹುಡುಕಾಟಕ್ಕಾಗಿ ಬೇರೆ ಬೇರೆ ರಾಷ್ಟ್ರಗಳಲ್ಲಿ ಅಲೆಯಬೇಕಾಗಿ ಬರಬಹುದು ಅಥವಾ ಒಂಟಿಯಾಗಿಯೇ ಜೀವನ ಸವೆಸಬೇಕಾಗುತ್ತದೆ ಎನ್ನುತ್ತಿದೆ ಹೊಸ ಅಧ್ಯಯನ.
ಚೀನಾದಲ್ಲಿ 35ರಿಂದ 59 ವರ್ಷ ವಯಸ್ಸಿನ ಅವಿವಾಹಿತ ಪುರುಷರ ಸಂಖ್ಯೆ 2020ಕ್ಕೆ 1.5 ಕೋಟಿ ತಲುಪಲಿದೆ. ಈ ಸಂಖ್ಯೆ 2050ರ ವೇಳೆಗೆ 3 ಕೋಟಿ ದಾಟಲಿದೆ ಎಂದು ಸಮಾಜವಿಜ್ಞಾನದ ಚೀನಾ ಅಕಾಡೆಮಿಯ ಸಂಶೋಧಕ ವ್ಯಾಂಗ್ ತಿಳಿಸಿದರು.
ಏಕಾಂಗಿ ಪುರುಷರ ಸಂಖ್ಯೆ ಹೆಚ್ಚಳಕ್ಕೆ ಶಿಕ್ಷಣದ ಕೊರತೆಯೇ ಕಾರಣ ಎನ್ನಲಾಗಿದೆ. ಪ್ರಾಥಮಿಕ ಶಿಕ್ಷಣ ಅಥವಾ ಅದಕ್ಕಿಂತಲೂ ಕಡಿಮೆ ವಿದ್ಯಾಭ್ಯಾಸ ಹೊಂದಿರುವವರ ಪ್ರಮಾಣ 2010ರಲ್ಲಿ ಶೇ.15ರಷ್ಟು ಏರಿಕೆಯಾಗಿದೆ.
ಕುಟುಂಬ ಯೋಜನೆ ನೀತಿಗಳ ತಜ್ಞರ ಪ್ರಕಾರ, ಚೀನಾದಲ್ಲಿ ಲಿಂಗಾನುಪಾತದಲ್ಲಿ ಅಸಮತೋಲನ ಉಂಟಾಗಿದೆ. ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಿದ್ದು, 3 ಕೋಟಿ ಪುರುಷರು ಸಂಗಾತಿ ಸಿಗದೆ ಉಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಭ್ರೂಣ ಪತ್ತೆಗೆ ಸರಳ ಮಾರ್ಗಗಳನ್ನು ಕಂಡು ಕೊಂಡು ಗಂಡು ಮಗುವಿಗಾಗಿ ಕಾಯುವುದು ಸಾಮಾನ್ಯವಾಗಿತ್ತು. ಭ್ರೂಣ ಪತ್ತೆಯನ್ನು ಚೀನಾ ನಿಷೇಧಿಸಿದ್ದರೂ, ಮಾಹಿತಿ ಪ್ರಕಾರ 2016ರಲ್ಲಿ ಪುರುಷರ ಸಂಖ್ಯೆ 70.8 ಕೋಟಿ ತಲುಪಿದೆ. ಮಹಿಳೆಯರ ಸಂಖ್ಯೆ 67.5 ಕೋಟಿ.
Comments are closed.