ಟೆಕ್ಸಾಸ್: ಅಮೆರಿಕದ ಟೆಕ್ಸಾಸ್‌ನಲ್ಲಿ ಮತ್ತೆ ಶಸ್ತ್ರಧಾರಿಯೋರ್ವ ತನ್ನ ಅಟ್ಟಹಾಸ ಮೆರೆದಿದ್ದು, ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ ಪರಿಣಾಮ ಬರೊಬ್ಬರಿ 27 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಟೆಕ್ಸಾಸ್ ನ ವಿಲ್ಸನ್ ಕೌಂಟಿಯ ಫಸ್ಟ್ ಬ್ಯಾಪ್ಟಿಸ್ಟ್ ಚರ್ಚ್‌ನಲ್ಲಿ ನಿನ್ನೆ ತಡರಾತ್ರಿ ಈ ದಾಳಿ ನಡೆದಿದ್ದು, ಘಟನೆಯಲ್ಲಿ ಕನಿಷ್ಠ 27 ಮಂದಿ ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ವಿಚಾರ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕಾಗಮಿಸಿದ ಟೆಕ್ಸಾಸ್ ಪೊಲೀಸರು ದಾಳಿಕೋರ ಶಸ್ತ್ರಧಾರಿಯನ್ನು ಹೊಡೆದುರುಳಿಸಿದ್ದು, ಇದು ಭಯೋತ್ಪಾದಕ ಕೃತ್ಯವೇ ಎಂಬ ವಿಚಾರದ ಕುರಿತು ತನಿಖೆ ನಡೆಸುತ್ತಿದ್ದಾರೆ.
ಅಂತೆಯೇ ದಾಳಿಕೋರನ ಶವವನ್ನು ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳಿಗೆ ಬುಲಾವ್ ನೀಡಿದ್ದಾರೆ.
20ವರ್ಷದ ಯುವಕನಿಂದ ಕೃತ್ಯ
ಇನ್ನು ದಾಳಿಕೋರ ವ್ಯಕ್ತಿ ಯುವಕವಾಗಿದ್ದು, ಆತನಿಗೆ ಸುಮಾರು 20 ವರ್ಷ ವಯಸ್ಸಿರಬಹುದು. ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ ಈ ದಾಳಿ ನಡೆಸಿದ್ದಾನೆ. ಆತ ಧಾವಿಸಿದ್ದ ಕಾರಿನ ದಾಖಲೆಗಳ ಮೂಲಕ ಆತನ ಪೂರ್ವಾಪರ ವಿಚಾರಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
Comments are closed.