ಹೊಸದಿಲ್ಲಿ: ಧಾರ್ಮಿಕ ವಿದ್ವಾಂಸ ಡಾ.ಝಾಕಿರ್ ನಾಯ್ಕ್ ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ನೀಡಬೇಕೆಂಬ ಕೇಂದ್ರ ಸರಕಾರದ ಮನವಿಯನ್ನು ಇಂಟರ್ ಪೋಲ್ ತಿರಸ್ಕರಿಸಿದೆ. ಹಾಗೂ ವಿಶ್ವದಾದ್ಯಂತ ಇರುವ ತನ್ನ ಎಲ್ಲಾ ಕಚೇರಿಗಳಿಗೆ ಈ ಕುರಿತು ಮಾಹಿತಿ ನೀಡಿ ಡಾ. ನಾಯ್ಕ್ ಕುರಿತ ಎಲ್ಲಾ ಮಾಹಿತಿಗಳನ್ನು ತೆಗೆದು ಹಾಕಬೇಕು ಎಂದು ಸೂಚನೆ ನೀಡಿದೆ ಎಂದು ಸಿಎನ್ಎನ್, ನ್ಯೂಸ್18 ವರದಿ ಮಾಡಿದೆ.
ಡಾ.ನಾಯ್ಕ್ ವಿರುದ್ಧ ಭಾರತ ಸರಕಾರ ಮಾಡಿರುವ ಆರೋಪಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದ ಬಳಿಕ ಇಂಟರ್ ಪೋಲ್ ಈ ತೀರ್ಮಾನಕ್ಕೆ ಬಂದಿದೆ ಎಂದು ವರದಿಯಾಗಿದೆ. ಝಾಕಿರ್ ನಾಯ್ಕ್ ವಿರುದ್ಧದ ಭಾರತದ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಹಾಗೂ ಅವುಗಳನ್ನು ಕೇವಲ ಊಹಾಪೋಹದ ಆಧಾರದಲ್ಲಿ ಮಾಡಲಾಗಿದೆ ಎಂದು ಇಂಟರ್ ಪೋಲ್ ಅನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಡಾ.ಝಾಕಿರ್ ನಾಯ್ಕ್ ಅವರ ಲಂಡನ್ ಮೂಲದ ಕಾನೂನು ಸೇವೆಗಳ ಕಛೇರಿಗೆ ಇಂಟರ್ ಪೋಲ್ ತನ್ನ ನಿರ್ಧಾರವನ್ನು ಡಿ.11ರಂದು ತಿಳಿಸಿದೆ.
ಭಾರತ ಸರಕಾರದ ಸಂಸ್ಥೆಗಳು ಈ ವಿಷಯದಲ್ಲಿ ನಿಯಮಗಳನ್ನು ಸರಿಯಾಗಿ ಪಾಲಿಸದೆ ಮಾಡಿರುವ ಆರೋಪಗಳಲ್ಲಿ ಅಂತಾರಾಷ್ಟ್ರೀಯ ಹಿತಾಶಕ್ತಿಯ ಕೊರತೆ ಇದೆ ಎಂದು ಇಂಟರ್ ಪೋಲ್ ಹೇಳಿದೆ.
ಆದ್ದರಿಂದ ಝಾಕಿರ್ ನಾಯ್ಕ್ ಕುರಿತ ಮಾಹಿತಿಗಳನ್ನು ತನ್ನ ದಾಖಲೆಗಳಲ್ಲಿ ಇಟ್ಟುಕೊಳ್ಳುವುದು ನಿಯಮಗಳ ಪ್ರಕಾರ ಸರಿಯಲ್ಲ ಎಂದು ಅವುಗಳನ್ನು ತೆಗೆದು ಹಾಕಲು ನಿರ್ಧರಿಸಿದೆ.
ಡಾ.ಝಾಕಿರ್ ನಾಯ್ಕ್ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದ ಕೇಂದ್ರ ಸರಕಾರಕ್ಕೆ ಇದರಿಂದ ಭಾರೀ ಹಿನ್ನಡೆಯಾಗಿದೆ.
Comments are closed.