ಅಂತರಾಷ್ಟ್ರೀಯ

ಪಾಕ್‌ ಚರ್ಚ್‌ ಮೇಲೆ ಆತ್ಮಾಹುತಿ ದಾಳಿ: ಎಂಟು ಸಾವು

Pinterest LinkedIn Tumblr

ಕರಾಚಿ: ಕ್ರಿಸ್ ಮಸ್ ಗೆ ಕೇವಲ ಒಂದು ವಾರ ಬಾಕಿ ಇರುವಾಗಲೇ ಪಾಕಿಸ್ತಾನದ ಚರ್ಚ್ ವೊಂದರ ಮೇಲೆ ಉಗ್ರರು ಭಾನುವಾರ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ ಎಂಟು ಮೃತಪಟ್ಟಿದ್ದಾರೆ ಮತ್ತು 44 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾದಲ್ಲಿರುವ ಕೆಥೋಲಿಕ್‌ ಚರ್ಚ್‌ ಮೇಲೆ ಈ ದಾಳಿ ನಡೆದಿದ್ದು, ಇಬ್ಬರು ಉಗ್ರರ ಪೈಕಿ ಓರ್ವನನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಆದರೆ ಓರ್ವ ಉಗ್ರ ಪೊಲೀಸರಿಂದ ತಪ್ಪಿಸಿಕೊಂಡು ಚರ್ಚ್ ಪ್ರವೇಶಿಸಿ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಬಲೂಚಿಸ್ತಾನದ ಗೃಹ ಸಚಿವ ಸರ್ಫ್‌ರಾಜ್‌ ಬುಗ್ಟಿ ಹೇಳಿದ್ದಾರೆ.

ಕ್ರೈಸ್ತ ಸಮುದಾಯದವರು ಪ್ರಾರ್ಥನೆ ನಡೆಸುತ್ತಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಬ್ದುಲ್ ರಜಾಖ್ ಚೀಮಾ ಅವರು ತಿಳಿಸಿದ್ದಾರೆ.

ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದಾಳಿಯ ಬಳಿಕ ಕ್ವೆಟ್ಟಾದ ಎಲ್ಲ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಪೊಲೀಸ್ ಮತ್ತು ರಕ್ಷಣಾ ತಂಡಗಳು ಸ್ಫೋಟದ ಸ್ಥಳಕ್ಕೆ ಧಾವಿಸಿದ್ದು, ಬಿಗಿ ಭದ್ರತೆ ಕೈಗೊಂಡಿವೆ.

Comments are closed.