ರಾಷ್ಟ್ರೀಯ

ಕೆ.ಜಿ ಆಲೂಗಡ್ಡೆ ಬೆಲೆ ಕೇವಲ 20 ಪೈಸೆ: ಉ.ಪ್ರ ರೈತರು, ದಾಸ್ತಾನು ಗೃಹಗಳಿಗೆ ಭಾರೀ ನಷ್ಟ

Pinterest LinkedIn Tumblr

ಆಗ್ರಾ (ಉ.ಪ್ರ): ಈ ವರ್ಷ ಆಲೂಗಡ್ಡೆ ಬೆಳೆ ಭರ್ಜರಿಯಾಗಿದ್ದರೂ ರೈತರಿಗೆ ಮಾತ್ರ ಲಾಭವಾಗುತ್ತಿಲ್ಲ. ಬೆಳೆಯನ್ನು ದಾಸ್ತಾನು ಮಾಡಲು ಶೈತ್ಯಾಗಾರ ಲಭ್ಯವಿಲ್ಲದ ಕಾರಣ ಕಂಗೆಟ್ಟ ರೈತರು ಸಿಕ್ಕ ಬೆಲೆಗೆ ಆಲೂಗಡ್ಡೆ ಮಾರಾಟ ಮಾಡುತ್ತಿದ್ದಾರೆ. 50 ಕೆ.ಜಿ ಚೀಲದ ಬೆಲೆ 10 ರೂ.ಗಳಿಗೆ ಕುಸಿದಿದೆ. ಅಂದರೆ ಒಂದು ಕೆ.ಜಿಎ ಆಲೂಗಟ್ಟೆ ಕೇವಲ 20 ಪೈಸೆಗೆ ಮಾರಾಟವಾಗುತ್ತಿದೆ.

ಶೈತ್ಯಾಗಾರ ಮಾಲೀಕರು ಬೆಳೆ ದಾಸ್ತಾನು ಮಾಡಲು ಜಾಗವಿಲ್ಲದೆ ಕೊಳೆತ ಆಲೂಗಡ್ಡೆಗಳನ್ನು ರಸ್ತೆ ಬದಿ ಸುರಿಯುತ್ತಿದ್ದು ಜಾನುವಾರುಗಳಿಗೆ ಆಹಾರವಾಗುತ್ತಿದೆ.

ದಾಸ್ತಾನು ಮಾಡಿದ ಶೈತ್ಯಾಗಾರಗಳಿಂದ ಉತ್ಪನ್ನವನ್ನು ಮಾರುಕಟ್ಟೆಗೆ ಒಯ್ಯಬೇಕಾದರೆ ರೈತರು ಸ್ಟೋರೇಜ್ ಶುಲ್ಕವೆಂದು ಪ್ರತಿ ಚೀಲಕ್ಕೆ 110 ರೂ ತೆರಬೇಕಾಗಿದೆ.

ಜುಲೈನಲ್ಲಿ ಸಗಟು ಮಾರಾಟ ದರ ಪ್ರತಿ ಚೀಲಕ್ಕೆ 400 ರೂ ಇತ್ತು. ಆದರೆ ಬಳಿಕ ನಿರಂತರವಾಗಿ ಬೆಲೆ ಕುಸಿಯುತ್ತಲೇ ಬಂದಿದೆ. ಮತ್ತಷ್ಟು ನಷ್ಟವಾಗುವುದನ್ನು ತಡೆಯಲು ರೈತರು ದಾಸ್ತಾನು ಮಾಡಿದ ಬೆಳೆಯನ್ನು ವಾಪಸ್‌ ಪಡೆಯದಿರಲು ನಿರ್ಧರಿಸಿದ್ದಾರೆ.

ಈ ಮಧ್ಯೆ,ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ 240ಕ್ಕೂ ಹೆಚ್ಚು ಶೀತಲ ದಾಸ್ತಾನು ಗೃಹಗಳು, ವಿದ್ಯುತ್‌ ಬಿಲ್‌ ಭರಿಸಲಾಗದೆ ಶೀತಲ ಯಂತ್ರಗಳನ್ನು ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ದಾಸ್ತಾನು ಮಾಡಿದ ಆಲೂಗಡ್ಡೆ ಕೊಳೆಯಲಾರಂಭಿಸಿದೆ. ಈಗಾಗಲೇ ಸಾವಿರಾರು ಟನ್‌ ಆಲೂಗಡ್ಡೆ ಕೊಳೆತು ರಸ್ತೆ ಬದಿಗಳಲ್ಲಿ ರಾಶಿ ಬಿದ್ದಿದೆ.

‘ದಾಸ್ತಾನು ಇಡುವ ಅವಧಿ ಮುಗಿದು ಹೋಗಿದೆ. ಅವಧಿ ಮುಗಿದು ಹಲವು ದಿನಗಳಾದರೂ ಬೆಲೆ ಕುಸಿತದಿಂದಾಗಿ ದಾಸ್ತಾನು ಒಯ್ಯಲು ರೈತರು ಮುಂದೆ ಬರುತ್ತಿಲ್ಲ. ಉತ್ಪನ್ನವನ್ನು ಇನ್ನಷ್ಟು ಕಾಲ ಸಂಗ್ರಹಿಸಿಡಲು ಸಾಧ್ಯವಿಲ್ಲ. ಇದರಿಂದಾಗಿ ದಾಸ್ತಾನುಗಳನ್ನು ಹೊರಗೆ ಎಸೆಯದೆ ನಮಗೆ ಬೇರೆ ದಾರಿಯೇ ಇಲ್ಲವಾಗಿದೆ. ಮುಂದಿನ ಋತುವಿನ ಉತ್ಪನ್ನಗಳ ದಾಸ್ತಾನಿಗಾಗಿ ಶೈತ್ಯಾಗಾರದ ನಿರ್ವಹಣೆ, ದುರಸ್ತಿ ಮಾಡಬೇಕಿದೆ’ ಎಂದು ಆಗ್ರಾ ಕೋಲ್ಡ್‌ ಸ್ಟೋರೇಜ್‌ ಅಸೋಸಿಯೇಶನ್‌ ಅಧ್ಯಕ್ಷ ಸುದರ್ಶನ್‌ ಅಗರ್ವಾಲ್‌ ಹೇಳುತ್ತಾರೆ.

‘ಆಗ್ರಾ ಜಿಲ್ಲೆಯೊಂದರಲ್ಲೇ ಅಂದಾಜು 2.5 ಲಕ್ಷ ಟನ್‌ ಆಲೂಗಡ್ಡೆ ಕೋಲ್ಡ್‌ ಸ್ಟೋರೇಜ್‌ಗಳಲ್ಲಿ ದಾಸ್ತಾನಿದೆ. ದಾಸ್ತಾನು ಶುಲ್ಕ ಪಾವತಿಸಿ ಮಾರುಕಟ್ಟೆಗೆ ಒಯ್ಯುವ ಖರ್ಚು ಭರಿಸಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಉತ್ಪನ್ನಗಳು ಕೊಳೆಯುವುದನ್ನು ತಡೆಯಲು ನಾವು ಏನೂ ಮಾಡುವಂತಿಲ್ಲ. ಇದರಿಂದಾಗಿ ರೈತರಿಗೆ ಭಾರಿ ನಷ್ಟವಾಗಿದೆ’ ಎಮದು ಆಲೂಗಡ್ಡೆ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆಮಿರ್‌ ಭಾಯ್‌ ಅಳಲು ತೋಡಿಕೊಂಡರು.

ಜಿಲ್ಲೆಯ ಪ್ರಮುಖ ಬೆಳೆ ಇದಾಗಿದ್ದು, 72,000 ಹೆಕ್ಟೇರ್‌ ಪ್ರದೇಶದಲ್ಲಿ ಅಲೂಗಡ್ಡೆ ಬೆಳೆಯಲಾಗುತ್ತಿದೆ. ಆಗ್ರಾ ವಿಭಾಗದಲ್ಲಿ ಆಗ್ರಾ, ಫಿರೋಜಾಬಾದ್‌, ಮಥುರಾ ಮತ್ತು ಮೈನ್‌ಪುರಿ ಪ್ರದೇಶಗಳು ದೇಶದಲ್ಲೇ ಅತಿಹೆಚ್ಚು ಆಲೂಗಡ್ಡೆ ಬೆಳೆವ ತಾಣಗಳಾಗಿವೆ.

‘ಸಾರ್ವಜನಿಕ ಪ್ರದೇಶಗಳಲ್ಲಿ ಕೊಳೆತ ಆಲೂಗಡ್ಡೆ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆಲೂಗಡ್ಡೆ ತ್ಯಾಜ್ಯದ ವಿಲೇವಾರಿಗೆ ನಿಯಮಗಳಿವೆ. ಅವುಗಳ ಸುರಕ್ಷಿತ ವಿಲೇವಾರಿಗೆ ಸೂಕ್ತ ವಿಧಾನಗಳನ್ನು ಅನುಸರಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ’ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಡಾ. ಕೌಶಲ್‌ ಕುಮಾರ್‌ ತಿಳಿಸಿದರು.

Comments are closed.