ಕರ್ನಾಟಕ

ಕೆಲಸದ ಆಸೆ ತೋರಿ ದಿಲ್ಲಿಯಲ್ಲಿ ದಂಧೆಗೆ ನೂಕಿದ ಪರಿಚಿತ

Pinterest LinkedIn Tumblr


ಮಹದೇವಪುರ: ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯನ್ನು ಕರೆದೊಯ್ದ ಪರಿಚಿತ ವ್ಯಕ್ತಿಯೇ ಆಕೆಯನ್ನು ದೆಹೆಲಿಯ ವೇಶ್ಯಾವಾಟಿಕೆ ಜಾಲವೊಂದಕ್ಕೆ ಮಾರಾಟ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇದರೊಂದಿಗೆ ಈತನ ಕೃತ್ಯಕ್ಕೆ ಸಹಾಯ ಮಾಡಿದ ಸಹಚರರು ಕೂಡ ಜೈಲು ಸೇರಿದ್ದಾರೆ.

ಕೆಜಿಎಫ್ ಮೂಲದ ಶಿವಶಂಕರ್‌ ಮತ್ತು ದೆಹಲಿ ಮೂಲದ ರಾಜೇಶ್‌ಕುಮಾರ್‌, ಚೋಟು ರಾಮದೇನ್‌ ಬಂಧಿತರು. ಈ ಪೈಕಿ ಆರೋಪಿ ಶಿವಶಂಕರ್‌ 17 ವರ್ಷದ ಯುವತಿಗೆ ಪರಿಚಿತನಾಗಿದ್ದು, ಕೆಲಸ ಕೊಡಿಸುವುದಾಗಿ ಹೇಳಿ ತನ್ನ ಸಹಚರರೊಂದಿಗೆ ಯುವತಿಯನ್ನು ದೆಹಲಿಗೆ ಕರೆದೊಯ್ದು ಮಾಂಸ ದಂಧೆ ನಡೆಸುವ ಕಾಜೋಲ್‌ ಎಂಬಾಕೆಗೆ 70 ಸಾವಿರ ರೂ.ಗೆ ಮಾರಾಟ ಮಾಡಿದ್ದ. ಈ ಸಂಬಂಧ ಇದೇ ಆ.8ರಂದು ಯುವತಿಯ ಪೋಷಕರು ಮಾರತ್‌ಹಳ್ಳಿ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾರತ್‌ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿರುವ ಸಂತ್ರಸ್ತೆಯ ಪೋಷಕರು ಕೂಲಿ ಕಾರ್ಮಿಕರಾಗಿದ್ದಾರೆ. ಯುವತಿ ಕೂಡ ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಕೆಲಸಕ್ಕೆ ಹೋಗುತ್ತಿದ್ದರು. ಈ ವೇಳೆ ಯುವತಿಗೆ ಪ್ರತಾಪ್‌ ಎಂಬಾತನ ಜತೆ ಪ್ರೇಮಾಂಕುರವಾಗಿದೆ. ಆರಂಭದಲ್ಲಿ ಪ್ರೇಮಿಗಳು ಸ್ವತ್ಛಂದವಾಗಿ ಓಡಾಡಿಕೊಂಡಿದ್ದರು. ಕೆಲ ದಿನಗಳ ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಬೇರ್ಪಟ್ಟಿದ್ದರು.

ಈ ನಡುವೆ ಕೋಲಾರ ಮೂಲದ ಶಿವಶಂಕರ್‌ ಎಂಬಾತನ ಪರಿಚಯವಾಗಿದ್ದು, ಕೆಲಸ ಕೊಡಿಸುವಂತೆ ಯುವತಿ ಕೇಳಿದ್ದರು. ಅದರಂತೆ ಆರೋಪಿ ತನ್ನ ಇಬ್ಬರು ಸಹಚರರ ಜತೆ ಯುವತಿ ಯನ್ನು ದೆಹಲಿಗೆ ಕೆರೆದೊಯ್ದ ಜಿ.ಬಿ.ರಸ್ತೆಯಲ್ಲಿರುವ ಕಾಜೋಲ್‌ ಎಂಬಾ ಕೆಗೆ 70 ಸಾವಿರ ರೂ.ಗೆ ಮಾರಾಟ ಮಾಡಿದ್ದ. ಯುವತಿ ಮನೆಗೆಲಸ ಎಂದು ಖುಷಿಯಿಂದಲೇ ಸೇರಿಕೊಂಡಿದ್ದಳು. ಆದರೆ, ಒಂದೆರಡು ದಿನಗಳಲ್ಲೇ ಆಕೆಯನ್ನು ವೇಶ್ಯಾವಾಟಿಕೆ ದಂಧೆ ದೂಡಿದ್ದರು.

ಪ್ರಮುಖನಿಗೆ ಹುಡುಕಾಟ: ಅಡ್ಡೆ ನಡೆಸುತ್ತಿದ್ದ ಪ್ರಮುಖ ಆರೋಪಿ ಕಾಜೋಲ್‌ ದಾಳಿಯ ಬಗ್ಗೆ ಎಚ್ಚೆತ್ತುಕೊಂಡು ಪರಾರಿಯಾಗಿದ್ದು, ಆಕೆಯನ್ನು ಸೆರೆಹಿಡಿಯುವ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಮುಖ ಆರೋಪಿ ಶಿವಶಂಕರ್‌ ಉದ್ಯೋಗವಿಲ್ಲದೆ ಅಲೆಯುತ್ತಿದ್ದು ಹಣಕ್ಕಾಗಿ, ಬಾಲಕಿಯ ಸ್ನೇಹ ಬೆಳೆಸಿ ಆಕೆಗೆ ಉದ್ಯೋಗ ಕೊಡಿಸುವ ¸‌ರವಸೆ ನೀಡಿ ವೇಶ್ಯಾವಾಟಿಕೆಯ ದಂಧೆಗೆ ಮಾರಾಟ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಕೂಲಿ ಕಾರ್ಮಿಕರು, ಬಡ ಹೆಣ್ಣು ಮಕ್ಕಳೇ ಈತನ ಟಾರ್ಗೆಟ್‌ ಆಗಿದ್ದು, ಈತನ ವಿರುದ್ಧ ಇತರೆ ಆರೋಪಗಳು ಕೇಳಿಬಂದಿದೆ. ಈ ಬಗ್ಗೆ ಪರಿಶೀಲಿಸಲನೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಪತ್ತೆ ಹಚ್ಚುವಲ್ಲಿ ಯಶಸ್ವಿ ಯಾದ ಬೆಳ್ಳಂದೂರು, ಮಾರತ್ತಹಳ್ಳಿ, ಹಾಗು ಎಚ್‌ಎಎಲ್‌ ಠಾಣೆಯ ಪೊಲೀಸ್‌ ಸಿಬ್ಬಂದಿ ಕಾರ್ಯಕ್ಕೆ ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಹಾಗೂ ಡಿಸಿಪಿ ಅಬ್ದುಲ್‌ ಅಹ್ಮದ್‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮೊಬೈಲ್‌ ನೆಟ್‌ವರ್ಕ್‌ ಕೊಟ್ಟ ಸುಳಿವು ನಾಪತ್ತೆ ಪ್ರಕರಣ ಬೇಧಿಸಿದ ಮಾರತ್‌ಹಳ್ಳಿ ಪೊಲೀಸರು, ಆರಂಭದಲ್ಲಿ ಯುವತಿ
ಮೊಬೈಲ್‌ ಸಿಡಿಆರ್‌ ಪರಿಶೀಲಿಸಿದ್ದು, ಕೊನೆಗೆ ಕಾಲ್‌ ಶಿವಶಂಕರ್‌ಗೆ ಹೋಗಿದೆ. ಇದರೊಂದಿಗೆ ಯುವತಿಯ ಮೊಬೈಲನ್ನೂ ಆರೋಪಿ ಕಸಿದುಕೊಂಡು ತನ್ನ ಬಳಿಯೇ ಇರಿಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ಈ ಮಧ್ಯೆ ಯುವತಿಯ ಮಾಜಿ ಪ್ರಿಯಕರ ಪ್ರತಾಪ್‌ ನನ್ನು ವಿಚಾರಣೆ ನಡೆಸಿದಾಗ, “ಆಕೆಯ ಮೊಬೈಲ್‌ ಸ್ವಿಚ್‌ ಆಫ್ ಆಗಿತ್ತು. ಹೀಗಾಗಿ ನನ್ನ ಸಂಪರ್ಕದಲ್ಲಿ ಇಲ್ಲ’ ಎಂದು ಉತ್ತರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

-ಉದಯವಾಣಿ

Comments are closed.