ಬೆಂಗಳೂರು: ಹಿಮಾಚಲ ಪ್ರದೇಶದ 14ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಜೈರಾಮ್ ಠಾಕೂರ್ ಅವರು ಕರ್ನಾಟಕದ ಅಳಿಯ!
53 ವರ್ಷದ ಜೈರಾಮ್ ಠಾಕೂರ್ ಅವರ ಪತ್ನಿ ಡಾ. ಸಾಧನಾ ಠಾಕೂರ್ ಅವರು ಮೂಲತಃ ಕರ್ನಾಟಕದ ಶಿವಮೊಗ್ಗದವರಾಗಿದ್ದು, ಪ್ರಸಕ್ತ ಹಿಮಾಚಲ ಪ್ರದೇಶದ ಮಂಡಿಯಲ್ಲಿ ಜನಪ್ರಿಯ ವೈದ್ಯರಾಗಿ, ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಜೈರಾಮ್ ಠಾಕೂರ್-ಸಾಧನಾ ದಂಪತಿಗೆ ಇಬ್ಬರು ಪುತ್ರಿಯರಿದ್ದು, ಶಿಕ್ಷಣ ಪಡೆಯುತ್ತಿದ್ದಾರೆ.
ಎಬಿವಿಪಿಯಲ್ಲಿ ಭೇಟಿ: ಸಾಧನಾ ಠಾಕೂರ್ ಅವರ ಮೂಲ ಹೆಸರು ಸಾಧನಾ ರಾವ್. ಸಾಧನಾ ಅವರ ತಂದೆ-ತಾಯಿ ಬಹು ಹಿಂದೆಯೇ ರಾಜಸ್ಥಾನದ ಜೈಪುರಕ್ಕೆ ಹೋಗಿ ನೆಲೆಸಿದ್ದರು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಲ್ಲಿ ಸಕ್ರಿಯರಾಗಿದ್ದ ಸಾಧನಾ ಮತ್ತು ಜೈರಾಮ್ ಠಾಕೂರ್ ಪರಿಚಯವಾಗಿ ಬಳಿಕ ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ಮದುವೆ ನಡೆದಿತ್ತು.
ಮಂಡಿ ಜಿಲ್ಲೆಯ ಸೆರಾಜ್ ಕ್ಷೇತ್ರದಲ್ಲಿ ಸತತ ಐದು ಬಾರಿ ಗೆಲುವು ದಾಖಲಿಸಿದ ಜೈರಾಮ್ ಠಾಕೂರ್ ಅವರಂತೆಯೇ ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಮುಂದಾಗಿರುವವರು ಡಾ. ಸಾಧನಾ. ಸಾಧನಾ ಅವರು ಮಂಡಿ ಜಿಲ್ಲೆಯ ಹಲವಾರು ಕಡೆಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದು, ಹೆಣ್ಣು ಮಕ್ಕಳ ಸಬಲೀಕರಣ ಕಾರ್ಯದಲ್ಲೂ ಸಕ್ರಿಯರಾಗಿದ್ದಾರೆ.
ಕೂಡು ಕುಟುಂಬವನ್ನು ಮುನ್ನಡೆಸುತ್ತಿರುವ ಡಾ. ಸಾಧನಾ ಅವರು ಮನೆಯ ಒಳಗೆ-ಹೊರಗೆ ಎರಡೂ ಕಡೆ ಎಲ್ಲ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಮಂಡಿಯ ಜನರು ನೆನಪಿಸಿಕೊಳ್ಳುತ್ತಾರೆ.
ಜೈರಾಮ್ ಠಾಕೂರ್ ಪತ್ನಿ ಡಾ. ಸಾಧನಾ ಶಿವಮೊಗ್ಗ ಮೂಲದವರು. ಮಂಡಿಯಲ್ಲಿ ಜನಪ್ರಿಯ ವೈದ್ಯೆ, ಸಾಮಾಜಿಕ ಕಾರ‍್ಯಕರ್ತೆ. ಇಬ್ಬರು ಹೆಣ್ಣು ಮಕ್ಕಳು ಮತ್ತು ಕೂಡು ಕುಟುಂಬದ ಸಾರಥಿಯಾಗಿದ್ದಾರೆ.
Comments are closed.