ರಾಷ್ಟ್ರೀಯ

110 ಕಿ.ಮೀ ಪ್ರಯಾಣಿಸಿ ಹೊಸ ತಾಣ ಸೇರಿದ ಹೆಣ್ಣು ಹುಲಿ

Pinterest LinkedIn Tumblr


ನಾಗಪುರ: ರೇಡಿಯೊ ಕಾಲರ್‌ ಅಳವಡಿಸಲಾಗಿರುವ ಹೆಣ್ಣು ಹುಲಿಯೊಂದು ತಾಡೊಬ-ಅಂಧರಿ ಹುಲಿ ಮೀಸಲು ವಲಯದ ಕೋಲ್ಸಾದಿಂದ 110 ಕಿಮೀ ಪ್ರಯಾಣಿಸಿ ಉಮ್ರೆದ್‌-ಕರಂಡ್ಲ ಪೊವನಿ ವನ್ಯ ಜೀವಿ ರಕ್ಷಿತಾರಣ್ಯ ಸೇರಿಕೊಂಡಿದೆ. ರೇಡಿಯೊ ಕಾಲರ್‌ ಅಳವಡಿಸಿ ನಿಗಾ ವಹಿಸಿರುವುದರಿಂದ ಇದು ದೃಢಪಟ್ಟಿದೆ ಎಂದು ಡೆಹ್ರಾಡೂನ್‌ನಲ್ಲಿರುವ ವೈಲ್ಡ್‌ ಲೈಫ್‌ ಇನ್ಸ್ಟಿಟ್ಯೂಟ್‌ನ ಅಧಿಕಾರಿಗಳು ಹೇಳಿದ್ದಾರೆ.

ಜಿಪಿಎಸ್‌ ಕಾಲರ್‌ ಅಳವಡಿಸಿರುವ ಹೆಣ್ಣು ಹುಲಿ ಇಷ್ಟೊಂದು ದೂರ ಪ್ರಯಾಣಿಸಿರುವುದು ಇದೇ ಮೊದಲು . ಈ ಮೊದಲು ಗಂಡು ಹುಲಿಗಳು ಹೊಸ ತಾಣ ಮತ್ತು ಸಂಗಾತಿಗಳನ್ನು ಅರಸಿಕೊಂಡು ಹೋಗಿರುವುದು ದಾಖಲಾಗಿದೆ ಎಂದು ವೈಲ್ಡ್‌ ಲೈಫ್‌ ಇನ್ಸ್ಟಿಟ್ಯೂಟ್‌ನ ಹುಲಿ ವಿಜ್ಞಾನಿ ಬಿಲಾಲ್‌ ಹಬೀಬ್‌ ಹೇಳಿದ್ದಾರೆ.

ಹೆಣ್ಣು ಹುಲಿ ಸಾಗಿರುವ ಹಾದಿಯುದ್ದ ಸ್ಯಾಟಲೈಟ್‌ ನಿಗಾ ಇರಿಸಲಾಗಿದೆ. ರೇಡಿಯೊ ಕಾಲರ್‌ ಇರುವುದರಿಂದ ಯಾವುದೇ ವಿದ್ಯುತ್‌ ಆಘಾತ ಆಗದಂತೆ ನಮ್ಮ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ ಎಂದು ಸಂಸ್ಥೆಯ ಎ.ಕೆ. ಮಿಶ್ರಾ ಹೇಳಿದ್ದಾರೆ.

2015 ರ ಏಪ್ರಿಲ್‌ 8ರಂದು ಹೆಣ್ಣುಹುಲಿಯೊಂದು ಬೊರ್‌ ಹುಲಿ ರಕ್ಷಿತಾರಣ್ಯದಿಂದ ಅಮರಾವತಿಯ ಪೊಹ್ರಾ ಮಾಲ್‌ಖೇಡ್‌ ಅರಣ್ಯಕ್ಕೆ 150 ಕಿ.ಮೀ ಪ್ರಯಾಣಿಸಿತ್ತು. ಆದರೆ ಇದಕ್ಕೆ ರೇಡಿಯೊ ಕಾಲರ್‌ ಅಳವಡಿಸಿರಲಿಲ್ಲ.

ವೈಲ್ಡ್‌ಲೈಫ್‌ ಇನ್ಸ್ಟಿಟ್ಯೂಟ್‌ ಅಧ್ಯಯನದ ಭಾಗವಾಗಿ ಶಿವನಜರಿ ವಲಯದಲ್ಲಿ ಮಾರ್ಚ್‌ 6 ಮತ್ತು 9ರಂದು ಎರಡು ಮರಿ ಹುಲಿ, ಒಂದು ಗಂಡು, ಒಂದು ಹೆಣ್ಣು ಹುಲಿಗೆ ರೇಡಿಯೊ ಕಾಲರ್‌ ಅಳವಡಿಸಿದೆ. ಅದರಲ್ಲಿ ಕೋಲ್ಸಾದ ಹೆಣ್ಣು ಹುಲಿ ಶನಿವಾರ ಪೊವನಿ ತಲುಪಿದ್ದು, ಭಾನುವಾರ ಪ್ರವಾಸಿಗರ ಕಣ್ಣಿಗೆ ಬಿದ್ದಿದೆ.

Comments are closed.