ರಾಷ್ಟ್ರೀಯ

ಯುವಕರನ್ನು ಸೆಳೆಯಲು ಐಸಿಸ್‌, ಅಲ್‌ಖೈದಾ ಸ್ಪರ್ಧೆ; ರಹಸ್ಯ ಗ್ರೂಪ್

Pinterest LinkedIn Tumblr


ನವದೆಹಲಿ: ಭಾರತದಲ್ಲಿ ಯುವಕರನ್ನು ಸೆಳೆಯಲು ಉಗ್ರ ಸಂಘಟನೆಗಳಾದ ಅಲ್‌ ಖೈದಾ ಮತ್ತು ಐಸಿಸ್‌ ಪರಸ್ಪರ ಪೈಪೋಟಿ ನಡೆಸುತ್ತಿವೆ ಎಂಬ ಅಂಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶದಿಂದ ತಿಳಿದುಬಂದಿದೆ. ಕಳೆದ ಕೆಲವು ತಿಂಗಳುಗಳಿಂದ ಯುವಕರನ್ನು ಸೆಳೆಯಲು ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷವಾಗಿ ಕಾಶ್ಮೀರಕ್ಕೆ ಸಂಬಂಧಿಸಿದ ಪ್ರಚೋದನಕಾರಿ ಹೇಳಿಕೆಗಳನ್ನು ಅಲ್‌ ಖರಾರ್‌ ಎಂಬ ಐಸಿಸ್‌ ಸಹಸಂಘಟನೆ ಪ್ರಕಟಿಸುತ್ತಿದೆ ಎಂದು ಹಿರಿಯ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ.

ಎರಡೂ ಸಂಘಟನೆಗಳು ಜಾಗತಿಕ ಮಟ್ಟದಲ್ಲಿ ಹಿಂದಿನಿಂದಲೂ ಉಗ್ರ ಕೃತ್ಯಗಳಲ್ಲಿ ಪೈಪೋಟಿ ನಡೆಸುತ್ತಿವೆ. ಈ ಹಿಂದೆ ಹಲವು ಬಾರಿ ಭಾರತದಲ್ಲಿ ನೆಲೆಯೂರಲು ಅಲ್‌ ಖೈದಾ ಪ್ರಯತ್ನಿಸಿತ್ತಾದರೂ ವಿಫ‌ಲವಾಗಿತ್ತು. ಆದರೆ ಈ ಬಾರಿ ವಿಭಿನ್ನ ವಿಧಾನದಲ್ಲಿ ಯುವಕರನ್ನು
ಸೆಳೆಯಲು ಯತ್ನಿಸುತ್ತಿದ್ದು, ವಿಷಯಾಧಾರಿತವಾಗಿ ತನ್ನ ಜಿಹಾದ್‌ ಸಂದೇಶಗಳನ್ನು ಸಾರುತ್ತಿದೆ.

ಡಿ.3 ರಂದು ಭಾರತದ ಮೇಲೆ ದಾಳಿ ಮಾಡುವುದಾಗಿ ಒಂದು ಪೋಸ್ಟರ್‌ಅನ್ನು ಅಲ್‌ ಖರಾರ್‌ ಪ್ರಕಟಿಸಿತ್ತು. ಅಲ್ಲದೆ ದಾಳಿ ನಡೆಸಲು ಸಹಕರಿಸುವಂತೆ ಇನ್ನೊಂದು ಉಗ್ರ ಸಂಸ್ಥೆ ಅನ್ಸಾರ್‌ ಘಜ್ವತ್‌ ಉಲ್‌ ಹಿಂದ್‌ ಎಂಬ ಉಗ್ರಸಂಘಟನೆಯನ್ನೂ ಅಲ್‌ ಖರಾರ್‌ ಉಗ್ರರು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ, ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾಗಳಿಗೆ ಭಾರತ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ಮುಸ್ಲಿಮರು ಬೆಂಬಲ ನೀಡಬೇಕು ಮತ್ತು ಸೇಡು ತೀರಿಸಿಕೊಳ್ಳಬೇಕು ಎಂದು ಅಲ್‌ ಖೈದಾ ಉಗ್ರ ಸಂಘಟನೆ ಕರೆ ನೀಡಿದೆ.

ಅಲ್‌ ಖೈದಾದ ಭಾರತದ ವಿಭಾಗಕ್ಕೆ ಅಲ್‌ ಖೈದಾ ಇಂಡಿಯನ್‌ ಸಬ್‌ಕಾಂಟಿನೆಂಟ್‌ ಎಂದು ಹೆಸರಿಸಲಾಗಿದ್ದು, 2014ರಲ್ಲಿ ಅಸಿಮ್‌ ಉಮರ್‌ ಎಂಬ ಭಾರತೀಯ ಇದರ ನೇತೃತ್ವ ವಹಿಸಿದ್ದಾನೆ ಎಂದು ಹೇಳಲಾಗಿದೆ. ಭಾರತದಲ್ಲಿ ದಾಳಿ ನಡೆಸಲು ಈ ಸಂಘಟನೆಗೆ ಪಾಕಿಸ್ತಾನದ ಗುಪ್ತಚರ ದಳವೂ ಬೆಂಬಲ ನೀಡಿದೆ ಎಂದು ಗುಪ್ತಚರ ದಳದ ಅಧಿಕಾರಿಗಳು ಹೇಳಿದ್ದಾರೆ. ಅಲ್‌ಖೈದಾದ ಎಲ್ಲ ಇತರ ಸಹಸಂಸ್ತೆಗಳೂ ಎಕ್ಯೂಐಎಸ್‌ ಪರ ಅಂತರ್ಜಾಲದಲ್ಲಿ ಪ್ರಚಾರ ನಡೆಸುತ್ತಿವೆ.

ಈ ಹಿಂದೆ ಕಾಶ್ಮೀರದಲ್ಲಿ ಜಕುರಾ ಪ್ರದೇಶದ ದಾಳಿಯಲ್ಲಿ ಓರ್ವ ಸಬ್‌ ಇನ್‌ಸ್ಪೆಕ್ಟರ್‌ ಸಾವನ್ನಪ್ಪಿದ್ದರು ಮತ್ತು ಉಗ್ರ ಮುಗೀಸ್‌ ಅಹಮದ್‌ ಎಂಬುವವನ್ನೂ ಹತ್ಯೆಗೈಯಲಾಗಿತ್ತು. ಈ ದಾಳಿ ಮಾಡಿದ್ದು ತಾನೇ ಎಂದು ಐಸಿಸ್‌ ಹೇಳಿಕೊಂಡಿತ್ತು.

-ಉದಯವಾಣಿ

Comments are closed.