ಮಂಗಳೂರು, ಡಿಸೆಂಬರ್. 26: ಮಂಗಳೂರಿನ ಇತಿಹಾಸ ಪ್ರಸಿದ್ಧ ಕಂಕನಾಡಿ ಶ್ರೀಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಉತ್ತರ ದಿಕ್ಕಿನ ಪೌಳಿಯ ಉದ್ಘಾಟನೆ ಮತ್ತು ಬ್ರಹ್ಮಕಲಶ ಪ್ರಯುಕ್ತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಸೋಮವಾರ ಹೊರೆಕಾಣಿ ಮೆರವಣಿಗೆ ನಡೆಯಿತು.
ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದಲ್ಲಿ ನವೀಕರಣಗೊಂಡ ಕ್ಷೇತ್ರದ ಉತ್ತರ ದಿಕ್ಕಿನ ಪೌಳಿಯ ಉದ್ಘಾಟನೆಯು ಡಿ. 26ರಂದು ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಪೌಳಿಯ ಉದ್ಘಾಟನೆ ಮತ್ತು ಬ್ರಹ್ಮಕಲಶೋತ್ಸವ ಪ್ರಯುಕ್ತ ಡಿ.26ರಿಂದ 28ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ.
ಈ ಹಿನ್ನೆಲೆಯಲ್ಲಿ ಕುದ್ರೋಳಿ ಕ್ಷೇತ್ರದಿಂದ ಹೊರಕಾಣಿಕೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರು ದೀಪ ಬೆಳಗಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಮೆರವಣಿಗೆ ಹೊರಟು ಮಣ್ಣಗುಡ್ಡೆ, ಲೇಡಿಹಿಲ್, ಬಳ್ಳಾಲ್ಭಾಗ್, ಕೊಡಿಯಾಲ್ಬೈಲ್, ಬಂಟ್ಸ್ಹಾಸ್ಟೆಲ್, ಅಂಬೇಡ್ಕರ್ ವೃತ್ತ, ಬಲ್ಮಠ, ಬೆಂದೂರ್ವೆಲ್, ಕಂಕನಾಡಿ ಹಾಗೂ ಕಂಕನಾಡಿ ಬೈಪಾಸ್ ಮೂಲಕ ಶ್ರೀ ಕ್ಷೇತ್ರಕ್ಕೆ ತಲುಪಿತು.
ಹೊರೆಕಾಣಿಕೆ ಮೆರವಣಿಗೆಯಲ್ಲಿ ಶಾಸಕ ಜೆ.ಆರ್.ಲೋಬೊ,ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್.ಸಾಯಿರಾಮ್, ಖಜಾಂಚಿ ಪದ್ಮರಾಜ್ ಆರ್., ಉದ್ಯಮಿ ಡಾ.ರಾಜಶೇಖರ ಕೋಟ್ಯಾನ್, ಕಂಕನಾಡಿ ಶ್ರೀ ಗರೋಡಿ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್, ಹೊರೆಕಾಣಿಕೆ ಸಂಚಾಲಕ ದಾಮೋದರ ನಿಸರ್ಗ, ಬ್ರಹ್ಮಕಲಶೋತ್ಸವ ಪ್ರಚಾರ ಸಮಿತಿ ಸಂಚಾಲಕ ವಸಂತ ಪೂಜಾರಿ, ಶ್ರೀ ಗರಡಿ ಕ್ಷೇತ್ರದ ಆಡಳಿತ ಮೊಕ್ತೇಸರ ಜಗದೀಪ್ ಡಿ.ಸುವರ್ಣ,ಮೊಕ್ತೇಸರ ಬಿ.ವಿಠಲ, ಸುರೇಂದ್ರನಾಥ್, ಕಂಕನಾಡಿ ಗರೋಡಿ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಧರ್ಮಪಾಲ್, ಕ್ಷೇತ್ರದ ವ್ಯವಸ್ಥಾಪಕ ಕಿಶೋರ್ ಮಜಿಲ, ದಿನೇಶ್ ಅಂಚನ್ ಮೊದಲಾದವರು ಉಪಸ್ಥಿತರಿದ್ದರು.
ಮುಸ್ಲಿಮ್ ಭಾಂದವರಿಂದ ಭಕ್ತಾದಿಗಳಿಗೆ ಹಣ್ಣು, ತಂಪು ಪಾನೀಯ ವಿತರಣೆ
ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರಕ್ಕೆ ಕುದ್ರೋಳಿ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆಯಲ್ಲಿ ಹೊರಟ ಭಕ್ತಾದಿಗಳಿಗೆ ಕಂಕನಾಡಿ ಬೈಪಾಸ್ ರಸ್ತೆಯಲ್ಲಿ ಮುಸ್ಲಿಮ್ ಭಾಂದವ ಪಾನೀಯ, ಹಣ್ಣುಗಳನ್ನು ವಿತರಣೆ ಮಾಡಿದರು.
ಮೌಲಾನ ಅಲ್ಹಾಜ್ ಇ.ಎಂ.ಶಾಫಿ ಪುತ್ತಿಗೆ ಸ್ಮರಣಾರ್ಥ ಅವರ ಶಿಷ್ಯಂದಿರು ಮತ್ತು ಅಭಿಮಾನಿಗಳು ಮಜ್ಜಿಗೆ, ಬಾಳೆಹಣ್ಣು, ಜ್ಯೂಸ್ಗಳನ್ನು ವಿತರಿಸಿದರು. ಸಾವಿರಾರು ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಅವರೆಲ್ಲರಿಗೂ ಪಾನೀಯ, ಹಣ್ಣುಗಳನ್ನು ವಿತರಿಸಲಾಯಿತು.
‘ನಂಡೆ ಪೆಂಙಳ್’ ಅಭಿಯಾನದ ಅಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಅಧ್ಯಕ್ಷ ರಿಯಾಝ್ ಕಣ್ಣೂರು, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್, ಸಲಹೆಗಾರರಾದ ಉಮರ್ ಪುತ್ತಿಗೆ, ರಫೀಕ್ ಮಾಸ್ಟರ್, ಸದಸ್ಯರಾದ ಮಜೀದ್ ತುಂಬೆ, ಅಶ್ಫರ್ ಬೆಂಗರೆ, ನಕಾಶ್ ಬಾಂಬಿಲ, ವಿಶ್ವಾಸ್ ಬಾವಾ ಬಿಲ್ಡರ್ಸ್ನ ಪರ್ವೇಝ್, ಅತಾವುಲ್ಲಾಹ್, ನಾಸಿರ್, ಅಶ್ಫಾಕ್, ಅಬ್ದುಲ್ಲಾ ಕುದ್ರೋಳಿ ಮೊದಲಾದವರು ಭಕ್ತರಿಗೆ ಪಾನೀಯ ಹಾಗೂ ಬಾಳೆಹಣ್ಣುಗಳನ್ನು ವಿತರಿಸಿದರು.
Comments are closed.