ಕರ್ನಾಟಕ

ಫೇಸ್ ಬುಕ್ ಗೆಳೆಯನನ್ನು ಬಚಾವ್ ಮಾಡಲು ಹೋಗಿ 6.85 ರೂ. ಲಕ್ಷ ಕಳೆದುಕೊಂಡ ಮಹಿಳೆ

Pinterest LinkedIn Tumblr

ಬೆಂಗಳೂರು: ಫೇಸ್ ಬುಕ್ ಗೆಳೆಯ ಬಂಧನವಾಗುವುದನ್ನು ತಪ್ಪಿಸಲು ಹೋಗಿ 48 ವರ್ಷದ ಬೆಂಗಳೂರಿನ ಮಹಿಳೆಯೊಬ್ಬರು 6.85 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ. ಮೋಸ ಹೋದ ಮೇಲೆಯೇ ಮಹಿಳೆಗೆ ತಾನು ವ್ಯವಸ್ಥಿತ ಅಪರಾಧ ಜಾಲದೊಳಗೆ ಸಿಲುಕಿ ಹಾಕಿಕೊಂಡಿದ್ದೇನೆ ಎಂದು ಮಹಿಳೆಗೆ ಅರಿವಾಗಿದ್ದು. ಆಕೆಯ ಸ್ನೇಹಿತ ಕೂಡ ಇದರ ಭಾಗವಾಗಿದ್ದಾನೆ.

ಮೋಸ ಹೋದ ಮಹಿಳೆ ನಂದಿತಾ ಮೋಹನ್ ರಾವ್ ಆಗಿದ್ದು ಬನಶಂಕರಿ ಮೊದಲನೇ ಹಂತದಲ್ಲಿ ವಾಸಿಸುತ್ತಿದ್ದಾರೆ. ವಿದೇಶಿ ಕರೆನ್ಸಿಯನ್ನು ಅನುಮತಿಗಿಂತ ಹೆಚ್ಚು ಹೊತ್ತೊಯ್ಯುತ್ತಿದ್ದ ತನ್ನ ಸ್ನೇಹಿತ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದಾನೆ ಎಂದು ಗೊತ್ತಾಗಿ ಆತನನ್ನು ರಕ್ಷಿಸಲು ಹಣ ವರ್ಗಾವಣೆ ಮಾಡಿ ಹಣ ಕಳೆದುಕೊಂಡಿದ್ದಾರೆ.

ಆದ ಘಟನೆಯಿಷ್ಟು: ಕೆಲ ತಿಂಗಳ ಹಿಂದೆ ಇಂಗ್ಲೆಂಡಿನ ಮೈಕೆಲ್ ಡೆನ್ನಿಸ್ ಎಂಬ ವ್ಯಕ್ತಿ ಜೊತೆ ನಂದಿತಾ ಫೇಸ್ ಬುಕ್ ನಲ್ಲಿ ಫ್ರೆಂಡ್ ಆಗಿದ್ದರು. ಫೇಸ್ ಬುಕ್ ನಲ್ಲಿ ಇಬ್ಬರೂ ಸಂಭಾಷಣೆ ಮಾಡಿದ ನಂತರ ತಮ್ಮ ತಮ್ಮ ವಾಟ್ಸಾಪ್ ನಂಬರ್ ನ್ನು ಹಂಚಿಕೊಂಡರು. ತಾನು ಆಗರ್ಭ ಶ್ರೀಮಂತನಾಗಿದ್ದು ಒಬ್ಬನೇ ಇಂಗ್ಲೆಂಡ್ ನಲ್ಲಿ ವಾಸಿಸುತ್ತಿದ್ದೇನೆ. ಹೃದಯ ಶಸ್ತ್ರಚಿಕಿತ್ಸೆಗೆಂದು ಭಾರತಕ್ಕೆ ಬರುತ್ತಿದ್ದೇನೆ ಎಂದು ಚಾಟ್ ಮಾಡಿದ.

ನಂತರ ಕಳೆದ ನವೆಂಬರ್ 28ರಂದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಿರಿಯ ಕಸ್ಟಮ್ಸ್ ಅಧಿಕಾರಿ ಜಾಹ್ನವಿ ಶರ್ಮ ಎಂದು ಹೇಳಿ ಕರೆ ಮಾಡುತ್ತಾರೆ. ಡೆನ್ನಿಸ್ 50,000 ಪೌಂಡ್ ಹಣವನ್ನು ಭಾರತಕ್ಕೆ ತರುತ್ತಿದ್ದು, ಅದು ಈ ದೇಶದಲ್ಲಿ ಅಕ್ರಮ ಎಂದು ಆಕೆ ನಂದಿತಾಗೆ ಫೋನ್ ನಲ್ಲಿ ತಿಳಿಸುತ್ತಾರೆ. ಆತನನ್ನು ಬಂಧಿಸಬಾರದೆಂದರೆ ಒಂದು ಖಾತೆ ಸಂಖ್ಯೆಗೆ 50,000 ರೂಪಾಯಿ ವರ್ಗಾವಣೆ ಮಾಡಿ ಎಂದು ಕೇಳುತ್ತಾರೆ.

ಆ ಮಾತನ್ನು ನಂಬಿ ನಂದಿತಾ ಖಾತೆ ಸಂಖ್ಯೆಗೆ 50,000 ರೂಪಾಯಿ ವರ್ಗಾವಣೆ ಮಾಡುತ್ತಾರೆ. ಪೌಂಡ್ ನ್ನು ರೂಪಾಯಿಗಳಾಗಿ ಬದಲಾಯಿಸಲು 1,55,000 ರೂಪಾಯಿ ಶುಲ್ಕ ನೀಡಬೇಕೆಂದು ನಂತರ ಜಾಹ್ನವಿ ಶರ್ಮ ಹೇಳುತ್ತಾಳೆ. ಅದೇ ದಿನ ಜಾಹ್ನವಿಯಿಂದ ನಂದಿತಾಗೆ ಮೂರನೇ ಕರೆ ಬರುತ್ತದೆ. ಅಕ್ರಮ ಹಣ ವರ್ಗಾವಣೆಯೆಂದು 4,80,000 ಹಣ ಪಾವತಿ ಮಾಡಬೇಕೆಂದು ಕೂಡ ಜಾಹ್ನವಿ ಶರ್ಮಳಿಂದ ನಂದಿತಾಗೆ ಕರೆ ಬರುತ್ತದೆ. ಆ ಮೊತ್ತವನ್ನು ಕೂಡ ನಂದಿತಾ ನವೆಂಬರ್ 29ರಂದು ಖಾತೆಗೆ ಹಾಕುತ್ತಾರೆ. ಅದೇ ದಿನ ಅಶ್ವಿನಿ ಕುಮಾರ್ ಎಂದು ಹೇಳಿಕೊಂಡು ಮತ್ತೊಂದು ಕರೆ ನಂದಿತಾಗೆ ಬಂದಿದ್ದು ತಾನು ದೆಹಲಿಯಲ್ಲಿ ರಿಸರ್ವ್ ಬ್ಯಾಂಕ್ ಅಧಿಕಾರಿಯಾಗಿದ್ದು 8,25,000 ರೂಪಾಯಿ ಕಮಿಷನ್ ಪಾವತಿಸಿ ಇಲ್ಲದಿದ್ದರೆ ಡೆನ್ನಿಸ್ ಗೆ ಜೈಲು ಶಿಕ್ಷೆಯಾಗುತ್ತದೆ ಎಂದು ಬೆದರಿಕೆಯೊಡ್ಡುತ್ತಾನೆ.

ಇಷ್ಟು ಹೊತ್ತಿಗೆ ನಂದಿತಾ ತನ್ನ ಬಳಿಯಿರುವ ಹಣವನ್ನೆಲ್ಲಾ ಕಳೆದುಕೊಂಡಿರುತ್ತಾರೆ. ಪದೇ ಪದೇ ಹಣ ವರ್ಗಾಯಿಸಲು ಕೇಳಿದಾಗ ನಂದಿತಾಗೆ ಸಂಶಯವುಂಟಾಗುತ್ತದೆ. ಡೆನ್ನಿಸ್ ನ್ನು ಸಂಪರ್ಕಿಸಲೆತ್ನಿಸಿದಾಗ ಸಿಗಲಿಲ್ಲ. ನಂತರ ನಂದಿತಾಗೆ ತಾನು ವ್ಯವಸ್ಥಿತ ಅಪರಾಧ ಜಾಲಕ್ಕೆ ಸಿಲುಕಿ ಮೋಸ ಹೋಗಿದ್ದೇನೆ ಎಂದು ಗೊತ್ತಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿದ ನಂದಿತಾರ ಪತಿ ನಾಗೇಶ್ ಎಂಎನ್, ನಂದಿತಾ ಫೋನ್ ಮೂಲಕ ಡೆನ್ನಿಸ್ ಜೊತೆ ಮಾತನಾಡಿದ್ದು ಅವನ ಸಂಭಾಷಣೆಯಿಂದ ಆತ ಇಂಗ್ಲೆಂಡ್ ಮೂಲದ ವ್ಯಕ್ತಿಯಂತೆ ಕಾಣುತ್ತಾನೆ. ಕಳೆದ 5 ವರ್ಷಗಳಿಂದ ಈ ಖಾತೆ ಮೂಲಕ ಅಕ್ರಮವಾಗಿ ಹಣ ವರ್ಗಾಯಿಸಲಾಗುತ್ತಿದ್ದು, ಹಾಗಾದರೆ ಬ್ಯಾಂಕ್ ನವರಿಗೆ ಈ ಮೋಸದ ಗ್ರಾಹಕರ ಬಗ್ಗೆ ಗೊತ್ತಾಗುತ್ತಿಲ್ಲವೇ ಎನ್ನುತ್ತಾರೆ.

ಬೆಂಗಳೂರಿನ ಸಿಐಡಿ ಪೊಲೀಸರು ಮೊನ್ನೆ 23ರಂದು ಈ ಬಗ್ಗೆ ಕೇಸು ದಾಖಲಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Comments are closed.