ಚೆನ್ನೈ: ತಮ್ಮ ರಾಜಕೀಯ ಪ್ರವೇಶದ ಕುರಿತು ಎದ್ದಿರುವ ಊಹಾಪೋಹಗಳಿಗೆ ಡಿ.31ರಂದು ತೆರೆ ಎಳೆಯುವುದಾಗಿ ಸೂಪರ್‌ಸ್ಟಾರ್ ರಜನಿಕಾಂತ್ ಘೋಷಿಸಿದ್ದಾರೆ.
”ನಾನು ರಾಜಕೀಯಕ್ಕೆ ಬಂದೇ ಬಿಡುತ್ತೇನೆ ಎಂದು ಹೇಳುತ್ತಿಲ್ಲ. ರಾಜಕಾರಣದ ಒಳಸುಳಿಗಳ ಬಗ್ಗೆ ನನಗೆ ಸ್ಪಷ್ಟ ಅರಿವಿದೆ. ಈ ಬಗ್ಗೆ ನನ್ನ ನಿಲುವನ್ನು ಡಿ.31ರಂದು ಘೋಷಿಸುತ್ತೇನೆ,” ಎಂದಿದ್ದಾರೆ. ಇದೇ ಮೊದಲ ಬಾರಿಗೆ 67 ವರ್ಷದ ಸೂಪರ್‌ಸ್ಟಾರ್, ತಮ್ಮ ರಾಜಕೀಯ ಪ್ರವೇಶದ ಕುರಿತು ಮಾತನಾಡಲು ದಿನಾಂಕ ನಿಗದಿಗೊಳಿಸಿದ್ದು, ಅಭಿಮಾನಿಗಳ ಆಶಾಗೋಪುರ ಮತ್ತಷ್ಟು ಎತ್ತರಕ್ಕೆ ಬೆಳೆದಿದೆ.
”ನನಗೆ ರಾಜಕೀಯದ ಒಳಸುಳಿಗಳು ಗೊತ್ತಿಲ್ಲದಿದ್ದಲ್ಲಿ, ತಕ್ಷ ಣ ಓಕೆ ಎಂದು ಹೇಳಿ ಈ ರಂಗಕ್ಕಿಳಿಯುತ್ತಿದ್ದೆ” ಎಂದ ರಜನಿ, ”ಹಾಗಂತ ನಾನು ರಾಜಕೀಯಕ್ಕೆ ಹೊಸಬನಲ್ಲ,” ಎಂದು 1996ರಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ವಿರುದ್ಧ ತಾವು ದನಿ ಎತ್ತಿದ್ದನ್ನು ಉಲ್ಲೇಖಿಸಿದರು.
ತಮ್ಮ ರಾಜಕೀಯ ಪ್ರವೇಶ ಕುರಿತ ನಿರ್ಧಾರ ಪ್ರಕಟಿಸದೆ ಅಭಿಮಾನಿಗಳಲ್ಲಿ ಗೊಂದಲ ಮೂಡಿಸುತ್ತಿರುವ ಕುರಿತು ಕೆಲವರು ಟೀಕಿಸಿದ್ದನ್ನು ಪ್ರಸ್ತಾಪಿಸಿದ ಅವರು, ”ಯುದ್ಧದ ಸಮಯದಲ್ಲಿ ನಿರ್ಧಾರ ಮಾಡುವುದಾಗಿ ಬಹಳ ಹಿಂದೆಯೇ ಹೇಳಿದ್ದೆ. ಯುದ್ಧ ಎಂದರೆ ಚುನಾವಣೆ. ಈಗ ಚುನಾವಣೆ ಬಂತೇ? ನಾವು ಯುದ್ಧಕ್ಕೆ ನಿಂತರೆ ಗೆಲ್ಲಲೇಬೇಕು. ಕೇವಲ ಶೌರ್ಯ ಪರಾಕ್ರಮ ಸಾಲುವುದಿಲ್ಲ, ಯುದ್ಧತಂತ್ರಗಳೂ ಪ್ರಮುಖವಾಗುತ್ತವೆ. ಅದಕ್ಕಾಗೇ ನಾನು ಡಿ.31ರಂದು ನನ್ನ ನಿರ್ಧಾರ ಪ್ರಕಟಿಸುತ್ತೇನೆ,” ಎಂದು ನಕ್ಕರು.
ಮಂಗಳವಾರದಿಂದ ಡಿ.31ರವರೆಗೆ ಚೆನ್ನೈನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ರಜನಿಕಾಂತ್, 18 ಜಿಲ್ಲೆಗಳ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ.
***
ಭಾರತವು ಪ್ರಜಾಪ್ರಭುತ್ವ ದೇಶವಾಗಿದ್ದು, ಯಾರು ಬೇಕಿದ್ದರೂ ರಾಜಕೀಯ ಸೇರಬಹುದು. ಅದನ್ನು ಒಪ್ಪುವುದು ಬಿಡುವುದು ಜನರಿಗೆ ಬಿಟ್ಟಿದ್ದು. ಇಲ್ಲಿ ಜನರೇ ತೀರ್ಪುಗಾರರು.
– ಡಿ. ಜಯಕುಮಾರ್, ಮೀನುಗಾರಿಕಾ ಸಚಿವ
ಯಾವುದೇ ಪಕ್ಷ ಕ್ಕಾದರೂ ಸಿದ್ಧಾಂತ, ಭಾಷೆ ಸೇರಿದಂತೆ ಪ್ರಮುಖ ವಿಷಯಗಳ ಕುರಿತ ನಿಲುವು ಮುಖ್ಯವಾಗುತ್ತದೆ. ಅವರು ಅಧಿಕೃತವಾಗಿ ರಾಜಕೀಯ ಪ್ರವೇಶ ಘೋಷಿಸಿದ ನಂತರವಷ್ಟೇ ಮಾತನಾಡುವುದು ಉತ್ತಮ.
– ಟಿ.ಕೆ.ಎಸ್.ಇಳಂಗೋವನ್, ಡಿಎಂಕೆ ಸಂಸದ, ಡಿಎಂಕೆ.
ನಮ್ಮ ಪಕ್ಷ ಹಿಂದೆಯೇ ರಜನಿ ರಾಜಕೀಯ ಪ್ರವೇಶವನ್ನು ಸ್ವಾಗತಿಸಿದೆ. ಅವರ ಮಾತುಗಳಲ್ಲಿ ಸ್ಪಷ್ಟತೆ ಹಾಗೂ ದೃಢನಿಶ್ಚಯ ಕಾಣಬಹುದು.
– ತಮಿಳಿಸಾಯಿ ಸೌಂಜರರಾಜನ್, ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥೆ
Comments are closed.