ರಾಷ್ಟ್ರೀಯ

ಸಂವಿಧಾನ, ಜಾತ್ಯತೀತರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಲೋಕಸಭೆಯಲ್ಲಿ ಸಚಿವ ಅನಂತ್ ಕುಮಾರ್ ಹೆಗಡೆ ಕ್ಷಮೆಯಾಚನೆ

Pinterest LinkedIn Tumblr

ನವದೆಹಲಿ: ಸಂವಿಧಾನ ಮತ್ತು ಜಾತ್ಯತೀತರ ಬಗ್ಗೆ ತಾವು ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಗುರುವಾರ ಲೋಕಸಭೆಯಲ್ಲಿ ಕ್ಷಮೆ ಕೋರಿದ್ದಾರೆ.

‘ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೋರುತ್ತೇನೆ’ ಎಂದು ಹೆಗಡೆ ಹೇಳಿದ್ದಾರೆ.

‘ನನಗೆ ಸಂವಿಧಾನ, ಸಂಸತ್ತು ಮತ್ತು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಬಗ್ಗೆ ಅಪಾರ ಗೌರವವಿದೆ. ನನಗೆ ಸಂವಿಧಾನವೇ ಸರ್ವೋಚ್ಛ. ದೇಶದ ಪ್ರಜೆಯಾಗಿ ನಾನು ಸಂವಿಧಾನಕ್ಕೆ ವಿರುದ್ಧವಾಗಿ ನಡೆಯಲಾರೆ’ ಎಂದು ಹೆಗಡೆ ತಿಳಿಸಿದ್ದಾರೆ.

‘ಅಪ್ಪ ಅಮ್ಮನ ಗುರುತು ಇಲ್ಲದಿರುವವರು ಜಾತ್ಯತೀತರು. ನಾವು ಸಂವಿಧಾನ ಬದಲಿಸುತ್ತೇವೆ. ಸಂವಿಧಾನ ಬದಲಿಸಲೆಂದೇ ನಾವು ಬಂದಿರುವುದು’ ಎಂದು ಈ ಹಿಂದೆ ಹೆಗಡೆ ಹೇಳಿಕೆ ನೀಡಿದ್ದರು.

ಇಂದು ಬೆಳಗ್ಗೆ ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರು ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ತೀವ್ರ ಗದ್ದಲ, ವಿರೋಧ ಎಬ್ಬಿಸಲು ಆರಂಭಿಸಿದರು. ಆಗ ಎದ್ದು ನಿಂತು ಹೇಳಿಕೆ ನೀಡಿದ ಸಚಿವ ಅನಂತ್ ಕುಮಾರ್, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದರು.

ನಾನು ಸಂವಿಧಾನವನ್ನು ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಪಾರವಾಗಿ ಗೌರವಿಸುತ್ತೇನೆ. ನನಗೆ ಸಂವಿಧಾನವೇ ಶ್ರೇಷ್ಠ. ಅದರಲ್ಲಿ ಯಾವುದೇ ಪ್ರಶ್ನೆ ಮತ್ತು ಸಂದೇಹವಿಲ್ಲ. ಈ ದೇಶದ ನಾಗರಿಕನಾಗಿ ನಾನು ಸಂವಿಧಾನದ ವಿರುದ್ಧ ಹೋಗಲು ಸಾಧ್ಯವಿಲ್ಲ ಎಂದು ಅನಂತ್ ಕುಮಾರ್ ಹೇಳಿದರು.

ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಚಿವ ಹೆಗಡೆಯವರ ಹೇಳಿಕೆ ಬಗ್ಗೆ ಹೆಚ್ಚಿನ ಸ್ಪಷ್ಟತೆ ಕೇಳಿದಾಗ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನನ್ನ ಹೇಳಿಕೆಯಿಂದಾಗಿ ಕಲಾಪಗಳಿಗೆ ಅಡ್ಡಿಯುಂಟಾಗುತ್ತಿದೆ. ಸಂವಿಧಾನವನ್ನು ಅಗೌರವಿಸುವ ಉದ್ದೇಶ ನನಗೆ ಇಲ್ಲ, ಸಂವಿಧಾನ ಮತ್ತು ಸಂಸತ್ತು ನನಗೆ ಶ್ರೇಷ್ಠವಾಗಿದೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವುಂಟಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಮತ್ತೊಮ್ಮೆ ಹೇಳಿದರು.

Comments are closed.