ಕರಾವಳಿ

ಲವ್ ಜಿಹಾದ್ ವಿರುದ್ಧ 15 ದಿನಗಳ ಬೃಹತ್ ಜನಜಾಗೃತಿ ಅಭಿಯಾನಕ್ಕೆ ಚಾಲನೆ – ಷಡ್ಯಂತ್ರಗಳಿಗೆ ಬಲಿಯಾಗದಂತೆ ಹೆಣ್ಮಕ್ಕಳಿಗೆ ಸೂಚನೆ

Pinterest LinkedIn Tumblr

ಮಂಗಳೂರು, ಜನವರಿ.3: ಲವ್ ಜಿಹಾದ್ ವಿರುದ್ಧ ಹಿಂದು ಸಮಾಜದಲ್ಲಿ ಅರಿವು ಮೂಡಿಸುವ ಸಲುವಾಗಿ ವಿಶ್ವಹಿಂದು ಪರಿಷತ್, ಬಜರಂಗದಳ ಮತ್ತು ದುರ್ಗಾವಾಹಿನಿ ವತಿಯಿಂದ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ 15 ದಿನಗಳ ಬೃಹತ್ ಜನಜಾಗೃತಿ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಯಿತು.

ನಗರದ ಪಿವಿಎಸ್ ಬಳಿಯ ಶ್ರೀ ಲಕ್ಷ್ಮಿನಾರಾಯಣಿ ದೇವಸ್ಥಾನದಲ್ಲಿ ಪ್ರಾರಂಭವಾದ ಜನಜಾಗೃತಿ ಅಭಿಯಾನಕ್ಕೆ ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಅವರು ಚಾಲನೆ ನೀಡಿದರು.

ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಗರದ ಎಲ್ಲ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗದಲ್ಲಿರುವ ಯುವತಿಯರಿಗೆ, ಮನೆ ಮನೆಗಳಿಗೆ ತೆರಳಿ ಕರಪತ್ರ ಹಂಚಿ ಲವ್ ಜಿಹಾದ್ ಷಡ್ಯಂತ್ರವನ್ನು ತಿಳಿಸಲಾಗುವುದು. ವಿಹಿಂಪ, ಬಜರಂಗದಳ, ದುರ್ಗಾವಾಹಿನಿ ಘಟಕಗಳ ಮೂಲಕ ವಾರ್ಡ್, ಗ್ರಾಮಗಳಲ್ಲಿ ಸಭೆ ನಡೆಸಿ ಜನಜಾಗೃತಿ ಕಾರ್ಯಕ್ರಮ ಮಾಡಲಾಗುವುದು, ಜಾತಿ ಸಂಘಟನೆಗಳ ಮುಖಂಡರ ಸಭೆ ಕರೆದು ಲವ್ ಜಿಹಾದ್ ವಿರುದ್ಧ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ಕರಾವಳಿ ಭಾಗದ ಎಲ್ಲ ಜಿಲ್ಲೆಗಳ ಎಲ್ಲ ಗ್ರಾಮಗಳಲ್ಲಿ ಜಾತಿ ಸಂಘಟನೆ, ಹಿಂದು ಸಂಘಟನೆ ಮತ್ತು ಸಂಘ ಸಂಸ್ಥೆಗಳ ಪ್ರಮುಖರು, ಗಣ್ಯರನ್ನೊಳಗೊಂಡ ಒಂದು ಸಮಿತಿ ರಚಿಸಿ ಜಾಗೃತಿ ಮೂಡಿಸಲಾಗುವುದು, ಪ್ರತಿ ತಿಂಗಳೂ ಸಮಿತಿಯ ಸಭೆ ನಡೆಸಿ ಗ್ರಾಮದಲ್ಲಿ ಲವ್ ಜಿಹಾದ್ ಷಡ್ಯಂತ್ರಗಳಿಗೆ ಹೆಣ್ಮಕ್ಕಳು ಬಲಿಯಾಗದಂತೆ ತಡೆಯಲು ಯೋಜನೆ ರೂಪಿಸಲಾಗುವುದು ಎಂದು ಪ್ರೊ. ಎಂ.ಬಿ. ಪುರಾಣಿಕ್ ತಿಳಿಸಿದರು.

ಲವ್ ಜಿಹಾದ್ ಬಗ್ಗೆ ತನಿಖೆ ನಡೆಸುವಂತೆ ಕೇರಳದ ಹೈಕೋರ್ಟ್ ಅಲ್ಲಿನ ಗೃಹ ಇಲಾಖೆಗೆ ಆದೇಶಿಸಿದೆ. ಲವ್ ಜಿಹಾದ್ನ ವ್ಯವಸ್ಥಿತ ಜಾಲಕ್ಕೆ ದಕ್ಷಿಣ ಕನ್ನಡ, ಕಾಸರಗೋಡು ಹಾಗೂ ಉಡುಪಿ ಭಾಗದ ಹಿಂದು ಯುವತಿಯರು ಬಲಿಯಾಗುತ್ತಿದ್ದು, ಪ್ರೀತಿ, ಪ್ರೇಮ, ಮೋಸ, ಆಮಿಷದ ಬಲೆಗೆ ಸಿಲುಕಿ ಹಲವಾರು ಹೆಣ್ಮಕ್ಕಳು ಇಸ್ಲಾಂಗೆ ಮತಾಂತರವಾಗುತ್ತಿದ್ದಾರೆ. ಧರ್ಮಾಂಧತೆಯನ್ನು ತಲೆಗೆ ತುಂಬಿ ದೇಶ ವಿರೋಧಿ ಚಟುವಟಿಕೆಗೆ ಬಳಸಿಕೊಂಡು ಹಿಂದು ಧರ್ಮವನ್ನು ನಾಶ ಮಾಡುವ ವ್ಯವಸ್ಥಿತ ಹುನ್ನಾರ ಇದಾಗಿದೆ ಎಂದು ಅವರು ಆರೋಪಿಸಿದರು.

ನಿಜವಾದ ಪ್ರೀತಿಗೆ ನಮ್ಮ ವಿರೋಧ ಇಲ್ಲ. ಯಾರೇ ಆಗಲಿ ಪ್ರೀತಿಸಿ ಮದುವೆಯಾಗಿ ಸಮಾಜದ ಮುಂದೆ ಜೀವನ ನಡೆಸಿದರೆ ನಮ್ಮ ವಿರೋಧವಿಲ್ಲ. ದುರುದ್ದೇಶದಿಂದ ಹಿಂದು ಹುಡುಗಿಯರನ್ನು ಪ್ರೀತಿಸಿ, ಇಸ್ಲಾಂಗೆ ಮತಾಂತರಗೊಳಿಸಿ, ಭಯೋತ್ಪಾದನೆ, ಡ್ರಗ್ಸ್ ಮಾಫಿಯಾಕ್ಕೆ ಬಳಸಿಕೊಂಡ ಉದಾಹರಣೆ ನಮ್ಮ ಮುಂದಿದೆ. ಇದಕ್ಕೆ ನಮ್ಮ ವಿರೋಧವಿದೆ.

ಹಲವಾರು ಯುವತಿಯರು ಲವ್ ಜಿಹಾದ್ ದಾಳಕ್ಕೆ ಬಲಿಯಾಗಿ ನಾಪತ್ತೆಯಾಗಿ ವಿದೇಶದಲ್ಲಿ ಪತ್ತೆಯಾಗುತ್ತಿದ್ದಾರೆ. ಈ ವಿಷಯದಲ್ಲಿ ಸಾಕಷ್ಟು ತಾಳ್ಮೆ ವಹಿಸಿದ್ದೆವು. ಆದರೆ, ಈಗ ಲವ್ ಜಿಹಾದ್ ಪ್ರಕರಣಗಳ ಸಂಖ್ಯೆ ಮಿತಿಮೀರಿದೆ. ಹಿಂದು ಜನಸಂಖ್ಯೆ ಕ್ಷೀಣಿಸುತ್ತಿದೆ. ಹಿಂದು ಹುಡುಗರಿಗೆ ಮದುವೆಯಾಗಲು ಹುಡುಗಿ ಸಿಗದ ಸಂದರ್ಭ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಲವ್ ಜಿಹಾದ್ ತಡೆಗಟ್ಟಲು ಹೋರಾಟ ನಡೆಸಲೇಬೇಕಾಗಿದೆ ಎಂದು ಪ್ರೊ. ಎಂ.ಬಿ.ಪುರಾಣಿಕ್ ಹೇಳಿದರು.

ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್ವೆಲ್ ಮಾತನಾಡಿ, ಲವ್ ಜಿಹಾದ್ ಭಯೋತ್ಪಾದನೆಯ ಇನ್ನೊಂದು ಮುಖ. ಭಾರತವನ್ನು ಇಸ್ಲಾಂ ದೇಶವನ್ನಾಗಿಸುವುದು ಇದರ ಗುರಿ ಎಂದು ಆರೋಪಿಸಿದರು.ಲವ್ ಜಿಹಾದ್ ಷಡ್ಯಂತ್ರದ ಹಿಂದೆ ಹಿಂದು ಸಮಾಜವವನ್ನು ನಾಶ ಮಾಡುವ ಹುನ್ನಾರ ಇದೆ. ಭಯೋತ್ಪಾದಕ ಸಂಘಟನೆಗಳು ಇದರ ಹಿಂದಿದೆ.

ಲವ್ ಜಿಹಾದ್ ಹಿಂದೆ‌ ಪಿಎಫ್ಐ ಸಂಘಟನೆಯ ಕೈವಾಡವಿದೆ. ಇದು ಭಯೋತ್ಪಾದನೆಯ ಇನ್ನೊಂದು ಮುಖವಾಗಿದ್ದು, ಈ ಹಿನ್ನೆಲೆಯಲ್ಲಿ ಲವ್ ಜಿಹಾದ್ ಪ್ರಕರಣ ಬಗ್ಗೆ ಎನ್‌ಐಎ ತನಿಖೆ ನಡೆಸಲು ಈಗಾಗಲೇ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ನೀಡಲಾಗಿದೆ ಎಂದರು.

ಲವ್ ಜಿಹಾದ್ ವಿರುದ್ಧ ವಾರ್ಡ್, ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಗ್ರಾಮಕ್ಕೊಂದು ಸಮಿತಿ ರಚಿಸಿ, ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು. ಲವ್ ಜಿಹಾದ್ ವಿರೋಧಿಸಿ, ಹಿಂದೂ ಸಮಾಜದವರನ್ನು ಒಟ್ಟುಗೂಡಿಸಿ ಹೋರಾಟ ಮಾಡಲಾಗುವುದು. ಪೊಲೀಸ್ ಇಲಾಖೆಯು ಜಿಹಾದಿ ಮಾನಸಿಕತೆ ಇರುವ ಯುವಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶರಣ್ ಪಂಪ್‌ವೆಲ್ ಆಗ್ರಹಿಸಿದರು.

ಲವ್ ಜಿಹಾದ್ಗೆ ಬಲಿಯಾಗಿ ಹೆಣ್ಣುಮಕ್ಕಳು ಸಿಕ್ಕಿಬಿದ್ದಾಗ ಅವರ ಫೋಟೊ, ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಬಾರದು. ದಾರಿ ತಪ್ಪಿದ ಹೆಣ್ಣು ಮಕ್ಕಳನ್ನು ತಿದ್ದುವ ಪ್ರಯತ್ನ ಮಾಡಬೇಕು. ಲವ್ ಜಿಹಾದ್ ವಿರುದ್ಧದ ಜಾಗೃತಿ ಅಭಿಯಾನಕ್ಕೆ ಪೋಷಕರ ಸಹಿತ ಸಮಾಜದ ಎಲ್ಲರೂ ಸಹಕಾರ ನೀಡಬೇಕು ಎಂದು ಶರಣ್ ಪಂಪ್ವೆಲ್ ಹೇಳಿದರು.

ಅಭಿಯಾನದಲ್ಲಿ ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ವಿಹಿಂಪ ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಕುತ್ತಾರ್, ವಿಹಿಂಪ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್, ದುರ್ಗಾವಾಹಿನಿ ಸಂಚಾಲಕಿ ಸುರೇಖಾ ರಾಜ್ ಮತ್ತಿತರರು ಭಾಗವಹಿಸಿದ್ದರು.

Comments are closed.